ಸೇಡಂ; ಡೆಂಘೀಗೆ ಇಲ್ಲಿದೆ ಆಹ್ವಾನ!
ಕನ್ನಡಪ್ರಭ ವಾರ್ತೆ, ಸೇಡಂ, ಜು.4
ಕೊಳಚೆ ನೀರಿನಿಂದ ಡೆಂಘೀ ಬರುವ ಸೂಚನೆ ಇದ್ದರೂ ಸೇಡಂ ಪುರಸಭೆ ಹಾಗೂ ತಾಲೂಕಿನ ಸ್ಥಳೀಯ ಸಂಸ್ಥೆಗಳ ದಿವ್ಯ ನಿರ್ಲಕ್ಷ್ಯದಿಂದ ಸೂಕ್ತ ಚರಂಡಿ ಹಾಗೂ ಕಸ ವಿಲೇವಾರಿ ಇಲ್ಲದೇ ಡೆಂಘೀ ಮಹಾಮಾರಿಯ ರುದ್ರನರ್ತನದ ಭೀತಿ ಕಾಡುತ್ತಿದೆ.
ಗಿಡ-ಗಂಟೆಗಳಡಿ ನೀರನ್ನು ಶೇಖರಿಸಬೇಡಿ, ಟೆಂಗಿನ ಒಡೆದ ಚಿಪ್ಪು, ಅನುಪಯುಕ್ತ ಟೈರ್, ಚರಂಡಿಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಿ ಎಂಬ ಸಂದೇಶಗಳನ್ನು ಸಾರಲೆಂದೇ ಕೋಟ್ಯಂತರ ರು. ವ್ಯಯಿಸುವ ಸರ್ಕಾರ, ಜನ ಓಡಾಡುವ ರಸ್ತೆಗಳ ಮೇಲಿನ ಚರಂಡಿ ನೀರನ್ನೇಕೆ ಲೆಕ್ಕಿಸುತ್ತಿಲ್ಲ, ಮೂಲ ಸೌಕರ್ಯ ಒದಗಿಸುವ ಕಡೆಗೆ ಏಕೆ ಗಮನ ಹರಿಸುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಪುರಸಭೆಯಿಂದ ವಿದ್ಯಾನಗರ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ವಿದ್ಯಾರ್ಥಿ ವಸತಿ ನಿಲಯ, ಶಿವಯೋಗಿ ಶಾಲೆ, ಸಾಯಿ ಶಾಲೆ, ಬ್ರಿಲಿಯಂಟ್ ಶಾಲೆ, ಪೊಲೀಸ್ ವಸತಿ ಗೃಹಗಳು, ಗ್ರಂಥಾಲಯ, ಚರ್ಚ್ಗಳಿದ್ದು, ಇಲ್ಲಿ ಸೂಕ್ತ ಚರಂಡಿ ನಿರ್ವಹಣೆಯಿಲ್ಲದೆ ರಸ್ತೆಯ ಮೇಲೆ ಮತ್ತು ಪಕ್ಕದಲ್ಲಿಯೇ ಕೊಳಚೆ ನೀರು ಹರಿದಾಡುತ್ತದೆ. ಪೊಲೀಸ್ ವಸತಿ ಸಂಕೀರ್ಣಗಳ ಮುಂದಿನ ಕ್ರೀಡಾಂಗಣದಲ್ಲಿ ಮಳೆ ನೀರು ಎದೆಯೆತ್ತರಕ್ಕೆ ನಿಂತಿದ್ದು, ಎಮ್ಮೆಗಳ ವಿಹಾರ ತಾಣವಾಗಿದೆ. ಪಕ್ಕದಲ್ಲಿ ಶಾಲಾ ಬಸ್ ನಿಲುಗಡೆ ಮಾಡಲಾಗುತ್ತದೆ.
ಈ ಪ್ರದೇಶದಲ್ಲಿ ವಾಸಿಸುವ ಹಾಗೂ ಇಲ್ಲಿನ ಶಾಲೆಗಳಿಗೆ ಬರುವ ಮಕ್ಕಳಿಗೆ ಡೆಂಘೀ ಭೀತಿ ಕಾಡುತ್ತಿದೆ. ವಿದ್ಯಾನಗರ ಬಡಾವಣೆಯಲ್ಲಿ ರಾಜ್ಯಸಭಾ ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಪುರಸಭೆ ಸದಸ್ಯರು, ಎಲ್ಲ ಪ್ರಮುಖ ಪತ್ರಿಕೆಗಳ ವರದಿಗಾರರ ಹಾಗೂ ಇನ್ನಿತರ ಪ್ರತಿಷ್ಠಿತರ ಮನೆಗಳಿದ್ದಾಗ್ಯೂ ಪುರಸಭೆ ಶುಚಿತ್ವದೆಡೆಗೆ ಇಂತಹ ದಿವ್ಯ ನಿರ್ಲಕ್ಷ್ಯ ತಾಳಿರುವಾಗ ಇನ್ನು ಬೇರೆ ಬಡಾವಣೆಗಳ ಸ್ಥಿತಿ ಹೇಗಿರಬೇಡ?
ಪರಿಸರ ಹೀಗಿದ್ರೆ ಡೆಂಘೀ ಬರದೇ ಇರಲು ಸಾಧ್ಯವೇ, ಜೀವ ಬಲಿಯಾಗುವ ಮುನ್ನ ಎಚ್ಚೆತ್ತುಕೊಂಡು, ಸೂಕ್ತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆಂಬುದೇ ಜನರ ಆಶಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

