ಜಿಲ್ಲೆಯ ಸ್ಕೂಲ್ ಬಸ್‌ಗಳು ಅನ್‌ಫಿಟ್!
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.5
ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳು ಅದೆಷ್ಟು ಸುರಕ್ಷಿತ? ಎಂದು ಗುಲ್ಬರ್ಗ ನಗರ ಹಾಗೂ ಜಿಲ್ಲಾದ್ಯಂತ ಇರುವ ಪಾಲಕರು/ಪೋಷಕರೆಲ್ಲರೂ ಚಿಂತಿಸುವ ಕಾಲ ಇದೀಗ ಎದುರಾಗಿದೆ.
ಏಕೆಂದರೆ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ, ಮನೆಗೆ ಕರೆ ತರುವ ಸೇವೆಯಲ್ಲಿ ತೊಡಗಿರುವ ನಗರ ಹಾಗೂ ಜಿಲ್ಲೆಯ ಬಸ್ಸುಗಳು ನಿಯಮದಂತೆ ಹೇಗಿರಬೇಕೋ ಹಾಗಿಲ್ಲ ಎಂಬ ಕಟುವಾಸ್ತವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯವರು ನಡೆಸಿರುವ ಅರ್ಹತಾ- ಸುರಕ್ಷತಾ ಪರೀಕ್ಷೆ(ಫಿಟ್ನೆಸ್- ಸೇಫ್ಟಿ ಟೆಸ್ಟ್)ಯಿಂದ ಬಹಿರಂಗವಾಗಿದೆ.
ಶಾಲಾ ವಾಹನಗಳು ಹೊಂದಿರಬೇಕಾದ ಸುರಕ್ಷತಾ ಸೌಲಭ್ಯಗಳ ಕುರಿತು ಶ್ರೇಷ್ಠ ನ್ಯಾಯಾಲಯವು ನೀಡಿದ ತೀರ್ಪಿನನುಸಾರ ಕ್ರಮ ಕೈಗೊಳ್ಳಲು ತಪಾಸಣೆಗಾಗಿ ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ) ವಾಹನ ಸೌಕರ್ಯ ಹೊಂದಿರುವ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೂಚನೆ ನೀಡಿ ತಮ್ಮೆಲ್ಲ ವಾಹನಗಳನ್ನು ಪರೀಕ್ಷೆಗೆ ಒಳಪಡಿಸುವಂತೆ ಹೇಳಿತ್ತು.
ಆರ್‌ಟಿಒ ಸೂಚನೆ ಹಿನ್ನೆಲೆಯಲ್ಲಿ ಈ ವರ್ಷದ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ನಡೆದ ಮೊದಲ ಹಂತದ ಪರೀಕ್ಷೆಯಲ್ಲಿ 200ರಷ್ಟು ಶಾಲಾ ವಾಹನಗಳು ಪರೀಕ್ಷೆ ಎದುರಿಸಿದವು. ಆದರೆ ಈ ಪೈಕಿ 190ರಷ್ಟು ವಾಹನಗಳು ಫೇಲ್! ಈ ಪೈಕಿ ನಗರದ ಪ್ರತಿಷ್ಠಿತ ಶಾಲೆಗಳ 50ಕ್ಕೂ ಹೆಚ್ಚು ಬಸ್‌ಗಳು ಸೇರಿಕೊಂಡಿರುವುದು ವಿಶೇಷ.
327 ಶಾಲಾ ಬಸ್‌ಗಳು: ಗುಲ್ಬರ್ಗ ನಗರ ಹಾಗೂ 7 ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ 327 ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿವೆ. ಈ ಪೈಕಿ ಶೇ.70ರಷ್ಟು ಗುಲ್ಬರ್ಗ ನಗರ ಒಂದರಲ್ಲೇ ಇವೆ, ಉಳಿದಂತೆ ಶೇ.30ರಷ್ಟು ವಾಹನಗಳು ಗುಲ್ಬರ್ಗ ಗ್ರಾಮೀಣ ಭಾಗದಲ್ಲಿವೆ.
ಫಿಟ್ನೆಸ್ ಹಾಗೂ ಸುರಕ್ಷತಾ ಪರೀಕ್ಷೆ ನಡೆಸೋಣ ಎಂದು ಕರೆದರೆ ಮುಖ ತಿರುಗಿಸಿಯೂ ನೋಡದ, ಹಾಗೇ ಎರ್ರಾಬಿರ್ರಿಯಾಗಿ ಮಕ್ಕಳನ್ನು ತುಂಬಿಕೊಂಡು ನಿತ್ಯವೂ ನಗರದಲ್ಲಿ ಸಂಚರಿಸುವ ಶಾಲಾ ವಾಹನಗಳ ವಿಚಾರವಾಗಿ ಗುಲ್ಬರ್ಗ ಆರ್‌ಟಿಒ ಕಚೇರಿಯಂತೂ ಗಂಭೀರವಾಗಿದೆ. ಏಕೆಂದರೆ ಫೆಬ್ರವರಿ ಫಿಟ್ನೆಸ್ ಪರೀಕ್ಷೆ ನಂತರ ಮತ್ತೀಗ ಶಾಲಾ ವಾಹನಗಳ ಮೇಲೆ ಲಕ್ಷ ಕೇಂದ್ರೀಕರಿಸಿದೆ. ವಾಹನಗಳು ಹಾಜರುಪಡಿಸಲು ಶಾಲಾ ವಾಹನ ಹೊಂದಿರುವ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಯವರು ಹಿಂದೇಟು ಹಾಕುತ್ತಿರುವ ಶಂಕೆ ಸಾರಿಗೆ ಅಧಿಕಾರಿಗಳನ್ನು ಕಾಡುತ್ತಿದೆ.
ಆರ್‌ಟಿಒ ಕೋಪ: ಏಕೆಂದರೆ ಅಧಿಕೃತ ನೋಟಿಸ್ ನೀಡಲಾಗಿದ್ದರೂ ಕೆಲವೊಂದು ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಯವರು ವಾಹನವನ್ನು ಸುರಕ್ಷತಾ ಪರೀಕ್ಷೆಗೆ ಹಾಜರುಪಡಿಸದೆ ಮೊಂಡುತನ ಧೋರಣೆ ತಾಳಿರುವುದೂ ಆರ್‌ಟಿಒ ಕೋಪಕ್ಕೆ ಕಾರಣವಾಗಿದೆ.
ವಾಹನ ಬೇಕಾಬಿಟ್ಟಿ ಉಪಯೋಗಿಸಿ ಮಕ್ಕಳನ್ನೆಲ್ಲ ಕಷ್ಟಕ್ಕೆ ದೂಡಲಿಕ್ಕೆ ಬಿಡುವುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಗಳ ತಪಾಸಣೆಗೆ ಮುಂದಾಗಿದ್ದಾರೆ. ಪರೀಕ್ಷೆಗಳಿಗೇ ಚಕ್ಕರ್ ಹೊಡೆಯುವ ಶಾಲೆಗಳವರೊಂದಿಗೆ ಬರುವ ದಿನಗಳಲ್ಲಿ ಕಠಿಣವಾಗಿ ವ್ಯವಹರಿಸಲು ಆರ್‌ಟಿಒ ಸಂಕಲ್ಪಿಸಿದ್ದು, ಇದಕ್ಕೆ ಪೋಷಕರ ಸಹಕಾರ ನಿರೀಕ್ಷೆಯಲ್ಲಿದೆ.
ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

