ತಾಪಂ ಕಚೇರಿ ಆವರಣದಲ್ಲೇ ಶೌಚಾಲಯವಿಲ್ಲ
ಕೆಂಭಾವಿ: ಬಯಲು ಶೌಚ ಮುಕ್ತ ಗ್ರಾಮ ಮಾಡುವ ಸರ್ಕಾರದ ಉದ್ದೇಶ ಈಡೇರುವುದೇ ಎಂಬ ಪ್ರಶ್ನೆ ಸುರಪುರ ತಾಲೂಕು ಪಂಚಾಯ್ತಿ ಕಚೇರಿಯನ್ನು ನೋಡಿದಾಗ ಉದ್ಭವಿಸುತ್ತದೆ. ಶೌಚಾಲಯ ಕಟ್ಟಿಸಿಕೊಳ್ಳುವಂತೆ ಹೇಳುವ ಅಧಿಕಾರಿಗಳೇ ತಮ್ಮ ಕಚೇರಿಯಲ್ಲಿ ಶೌಲಾಲಯ ವ್ಯವಸ್ಥೆ ಕಲ್ಪಿಸದಿರುವುದು ಸುರಪುರ ತಾಪಂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಪರದಾಟ: ಬಯಲು ಶೌಚಮುಕ್ತ ಗ್ರಾಮ ಮಾಡುವ ಉದ್ದೇಶದಿಂದ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 9 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಗ್ರಾಪಂಗೆ ಸ್ಪರ್ಧಿಸಲು ಅಭ್ಯರ್ಥಿಗಳ ಮನೆಯಲ್ಲಿ ಶೌಚಾಲಯವಿರುವುದು ಕಡ್ಡಾಯವಾಗಿದೆ. ಆದರೆ ಇದನ್ನು ಜಾರಿಗೊಳಿಸುವ ಇಲಾಖೆಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸವಾಗಿದೆ. ಸುರಪುರದಲ್ಲಿ ಸುಸಜ್ಜಿತ ತಾಲೂಕು ಪಂಚಾಯಿತಿ ಮತ್ತು ತಹಸೀಲ ಕಚೇರಿ ಕಟ್ಟಡಗಳು ಇದ್ದರೂ ಅಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ಕಚೇರಿ ಕೆಲಸಕ್ಕೆ ಬರುವ ಜನರು ಶೌಚಾಲಯಕ್ಕಾಗಿ ಪರದಾಡುವಂತಹ ಸ್ಥಿತಿ ಸಾಮಾನ್ಯವಾಗಿದೆ.
ಇದು ಕೇವಲ ಸಾರ್ವಜನಿಕರು ಪಡುತ್ತಿರುವ ಪಾಡಲ್ಲ. ಚುನಾಯಿತ ತಾಪಂ ಸದಸ್ಯರೂ ಇದರ ಕಹಿ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಸದಸ್ಯರ ಪಡಿಪಾಟಿಲು ಹೇಳತೀರದು.
ದುರಾದೃಷ್ಟಕರ: ಪ್ರತಿಯೊಬ್ಬರಿಗೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಸಲಹೆ ಮಾಡುವ ಅಧಿಕಾರಿಗಳು ತಮ್ಮ ಕಚೇರಿಯ ಅವರಣದಲ್ಲಿ ಶೌಚದ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಾರದೇ ಇರುವುದು ದುರಾದೃಷ್ಟಕರ ಸಂಗತಿ. ಸಲಹೆ ಮಾಡುವ ಬದಲು ತಮ್ಮ ಕಚೇರಿಯ ಆವರಣದಲ್ಲಿ ಶೌಚಾಲಯ ನಿರ್ಮಿಸಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂಬುದು ಜನರ ಒತ್ತಾಯವಾಗಿದೆ.
ಸಮಸ್ಯೆಗೆ ಸ್ಪಂದಿಸುವರೇ?: ಬಯಲು ಶೌಚಾಲಯ ಮಾಡುವುದು ಅಪರಾಧ ಎಂದು ಹೇಳುವ ಅಧಿಕಾರಿಗಳಿಗೆ ತಮ್ಮ ಕಚೇರಿಯ ಎದುರೇ ಬಯಲಿನಲ್ಲಿ ಶೌಚಕ್ಕೆ ಜನ ಹೋಗುತ್ತಿರುವುದು ಅರಿವಿಲ್ಲವೇ ಎನ್ನುವಂತಾಗಿದೆ. ಪ್ರತಿ ಗ್ರಾಪಂಗಳಿಗೆ ಹಣ ನೀಡುವ ಈ ತಾಲೂಕು ಪಂಚಾಯಿತಿ ಮೊದಲು ತಮ್ಮ ಕಚೇರಿಗಳ ಆವರಣದಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಲು ಶೌಚಾಲಯ ಹಾಗೂ ಮೂತ್ರಾಲಯದ ವ್ಯವಸ್ಥೆ ಕಲ್ಪಿಸಿಕೊಡಲಿ ಎಂಬುದು ಜನರ ಆಗ್ರಹವಾಗಿದೆ.
ಈಗಲಾದರೂ ಸಂಬಂಧಿತ ಅಧಿಕಾರಿಗಳು ಕಚೇರಿ ಆವರಣದಲ್ಲಿ ಶೌಚಾಲಯಗಳ ವ್ಯವಸ್ಥೆಯನ್ನು ಒದಗಿಸಲು ಕ್ರಮ ಜರಗಿಸಬೇಕಿದೆ. ತಮ್ಮ ಕಚೇರಿಯಲ್ಲಿ ಇರುವ ಸಮಸ್ಯೆಯನ್ನು ಹೋಗಲಾಡಿಸದ ಅಧಿಕಾರಿಗಳು ತಾಲೂಕಿನಲ್ಲಿರುವ ಪ್ರತಿ ಮನೆಗೂ ಶೌಚಾಲಯ ಎಲ್ಲಿಂದ ನಿರ್ಮಿಸುತ್ತಾರೆ ಎಂಬ ಪ್ರಶ್ನೆಯನ್ನು ಜನತೆ ಕೇಳುತ್ತಿದ್ದಾರೆ. ಈ ಬಗ್ಗೆ ತಾಪಂ ಇಒ ಗಮನಹರಿಸಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸಲು ಆದ್ಯತೆ ನೀಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

