ಗುಲ್ಬರ್ಗಾ

ಜಿಲ್ಲಾ ರಾಜಕೀಯ ಪಕ್ಷಗಳ ಕೋಮಾವಸ್ಥೆ!

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.15
ಅಸೆಂಬ್ಲಿ ಚುನಾವಣೆಯವರೆಗೂ ತುಂಬಾ ಕ್ರಿಯಾಶೀಲವಾಗಿದ್ದ ಪ್ರಮುಖ ರಾಜಕೀಯ ಪಕ್ಷಗಳು, ಜೊತೆಗೇ ಛೋಟಾ- ಮೋಟಾ ಪಕ್ಷಗಳು ಇಲ್ಲಿ ಕಳೆದೆರಡು ತಿಂಗಳಿಂದ ಡೀಪ್ ಕೋಮಾ(ಪ್ರಜ್ಞಾಹೀನ ಸ್ಥಿತಿ) ತಲುಪಿವೆ.
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಸ್ಥಾನಗಳೊಂದಿಗೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೂ ಜಿಲ್ಲೆಯಲ್ಲಿ ಸೂಕ್ತ ನಾಯಕತ್ವದ ಕೊರತೆಯಿಂದ ನರಳುತ್ತಿದೆ. ಅಂದರೆ ಇಲ್ಲಿನ ರಾಜಕೀಯ ಪಕ್ಷಗಳಲ್ಲಿ ಬೇರು ಬಿಟ್ಟಿರುವ ಗೊಂದಲ ಅದೆಷ್ಟರ ಮಟ್ಟಿಗೆ ಇರಬಹುದು ಎಂಬುದರ ಅರಿವು ಯಾರಿಗಾದರೂ ಆಗದೆ ಇರದು.
ತಾತ್ಸಾರ ಭಾವನೆ: ಸೋತು ಸುಣ್ಣವಾಗಿರುವ ಬಿಜೆಪಿಯಲ್ಲಿಯೂ ಹೊಸ ಸಾರಥಿ ಹುಡುಕಾಟ ಸಾಗಿದರೆ; ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿರುವ ಜೆಡಿಎಸ್, ಜಿಲ್ಲೆಯಲ್ಲಿ ಅಧ್ಯಕ್ಷರೇ ಇಲ್ಲದಂತಾಗಿ ತೀವ್ರ ಗೊಂದಲದಲ್ಲಿ ಮುಳುಗಿದೆ.
ಇನ್ನು ಅಸೆಂಬ್ಲಿಯಲ್ಲಿ ತುಂಬಾ ಸದ್ದು ಮಾಡಿದ್ದ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನಂತಹ ಪಕ್ಷಗಳಂತೂ ಹೇಳಹೆಸರಿಲ್ಲದಂತಾಗಿ ಜಿಲ್ಲೆಯಲ್ಲಿ ಒಂದು ರೀತಿಯ ರಾಜಕೀಯ ನಿರ್ವಾತ(ಪಾಲಿಟಿಕಲ್ ವ್ಯಾಕ್ಯೂಮ್) ನಿರ್ಮಾಣವಾಗಿದೆ.
ಚುನಾವಣೆ ಸಂದರ್ಭದಲ್ಲಿ ಜನತೆಗೆ ಹತ್ತು ಹಲವು ಭರವಸೆ ನೀಡಿ, ಚುನಾವಣೆ ನಂತರ ಒಂದೂ ರಾಜಕೀಯ ಪಕ್ಷ, ತನ್ನ ಕಾರ್ಯಕರ್ತರ ಪಡೆಯೊಂದಿಗೆ ಜನರನ್ನು ಸಂಪರ್ಕಿಸುವ, ಅವರ ಸಮಸ್ಯೆಗಳಿಗೆ ಮದ್ದರೆಯುವ ಕೆಲಸ ಮಾಡಿಲ್ಲ. ಹೀಗಾಗಿ 'ಈ ಪಕ್ಷಗಳು ಹೇಳುವುದು ಒಂದು, ಮಾಡುವುದು ಮತ್ತೊಂದು' ಎಂದು ಜನತೆ ರಾಜಕೀಯ ಪಕ್ಷಗಳ ಬಗ್ಗೆ ತಾತ್ಸಾರ ಭಾವನೆ ತಾಳಿದ್ದಾರೆ.
'ಕೈ' ಪಾಳಯದಲ್ಲಿ ಹಂಗಾಮಿಗಿರಿ: ಜಿಲ್ಲೆಯಲ್ಲಿ ಹೆಚ್ಚಿನ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೇ ಜಿಲ್ಲಾಧ್ಯಕ್ಷರಿಲ್ಲ. ಡಾ. ಶರಣಪ್ರಕಾಶ ಚುನಾವಣೆ ಗೆದ್ದು ಸಚಿವರಾದ ಮೇಲೆ ನೀಡಿರುವ ರಾಜಿನಾಮೆಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನ ಇನ್ನೂ ಭರ್ತಿಯಾಗಿಲ್ಲ. ಕೆಲ ದಿನಗಳ ಮಟ್ಟಿಗೆ ಅಲ್ಲಂಪ್ರಭು ಪಾಟೀಲ್ ಹಂಗಾಮಿ ಅಧ್ಯಕ್ಷರಾಗಿದ್ದರೆ, ಈಗ ಭಾಗಣ್ಣಗೌಡ ಪಾಟೀಲ್ ಸಂಕನೂರ್ ಹಂಗಾಮಿ ಅಧ್ಯಕ್ಷರಾಗಿದ್ದಾರೆ.
ಈ ಪಕ್ಷ ಆಡಳಿತದಲ್ಲಿದ್ದರೂ ಯಾರು, ಯಾವಾಗ, ಎಷ್ಟು ಅವಧಿಗೆ ಹಂಗಾಮಿಯಾಗಿರುತ್ತಾರೆ, ಯಾರು ಪೂರ್ಣಾವಧಿ ಅಧ್ಯಕ್ಷರಾಗಿ ಬರುತ್ತಾರೆ ಎಂಬಿತ್ಯಾದಿ ಮಾಹಿತಿಗಳೇ ಜಿಲ್ಲೆಯ ಜನತೆಗೆ ಗೊತ್ತಿರುವುದಿಲ್ಲ. ಇಷ್ಟೊಂದು ಗೊಂದಲಮಯ ಸನ್ನಿವೇಶ 'ಕೈ' ಪಾಳಯವನ್ನು ಕಾಡುತ್ತಿದೆ. ಅದರಲ್ಲೂ ಧರಂ- ಖರ್ಗೆಯವರಂತಹ ಘಟಾನುಘಟಿ ನಾಯಕರ ತವರಲ್ಲೇ ಈ ಪರಿಸ್ಥಿತಿ ಪಕ್ಷಕ್ಕಾದರೆ ಮುಂದೆ ಗತಿ? ಎಂಬ ಚರ್ಚೆ ಶುರುವಾಗಿದೆ.
ಇತ್ತೀಚೆಗೆ ರೇಲ್ವೆ ಸಚಿವರಾದ ನಂತರ ಖರ್ಗೆ ಅವರನ್ನು ಸತ್ಕರಿಸುವ ಸಂದರ್ಭದಲ್ಲಿ ಭಾಗಣ್ಣಗೌಡರು ಹಂಗಾಮಿ ಎಂಬ ವಿಚಾರ ಬೆಳಕಿಗೆ ಬಂತು. ಅದಕ್ಕೂ ಮುನ್ನ 'ಕೈ' ಪಡೆಗೆ ಜಿಲ್ಲೆಯಲ್ಲಿ ಯಾರು ಅಧ್ಯಕ್ಷರು ಎಂಬುದೇ ಗೊತ್ತಿರಲಿಲ್ಲ!.
ಬಿಜೆಪಿಯಲ್ಲೂ ಅಯೋವುಯ: ರಾಜಕುಮಾರ ಪಾಟೀಲ್ ತೇಲ್ಕೂರ್ ಜಿಲ್ಲಾಧ್ಯಕ್ಷರಾಗಿದ್ದು ಅಸೆಂಬ್ಲಿ ಕಣಕ್ಕಿಳಿದು ಪರಾಭವಗೊಂಡ ನಂತರ ಅವರು ಪಕ್ಷದ ಸಂಘಟನೆ, ಇತರೆ ವಿಚಾರಗಳಲ್ಲಿ ನೇಪಥ್ಯಕ್ಕೆ ಸರಿದಿದ್ದಾರೆ. ಇದರಿಂದ ಕಮಲ ಪಡೆಯಲ್ಲಿಯೂ ಜಿಲ್ಲಾ ನಾಯಕತ್ವದ ಕೊರತೆ ಕಾಡಲಾರಂಭಿಸಿದೆ.
ಸೋತು ಸುಣ್ಣವಾಗಿರುವ ಕಮಲ ಪಡೆಗೆ ಚೈತನ್ಯ ತುಂಬುವ ಶಕ್ತಿ ಯಾರಿಗಿದೆ? ಯಾರನ್ನು ಅಧ್ಯಕ್ಷರನ್ನಾಗಿಸಬೇಕು? ಯಾವ ಜಾತಿ- ಯಾವ ಕೋಮಿನವರಿಗೆ ಮಣೆ ಹಾಕಿದರೆ ಉತ್ತಮ? ಬರುವ ಲೋಕಸಭೆ ಚುನಾವಣೆಯಲ್ಲಿ ಯಾರು ಪಕ್ಷವನ್ನು ಸೋಲಿನ ಕಹಿ ಮರೆಸಿ ಉಲ್ಲಸಿತವಾಗಿಸುವರು? ಎಂಬಿತ್ಯಾದಿ ಚರ್ಚೆಗಳು ಶುರುವಾಗಿವೆ. ಇಲ್ಲೀಗ ಅಧ್ಯಕ್ಷರ ನೇಮಕಕ್ಕೇ ಹೊಸ ಪ್ರಕ್ರಿಯೆ ಒಳಗೊಳಗೆ ಶುರುವಾಗಿದೆ.
ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಜೆಡಿಎ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ರಾಜಗೋಪಾಲರೆಡ್ಡಿ, ಶರಣಪ್ಪ ತಳವಾರ ಸೇರಿದಂತೆ ಹಲವರು ಅಧ್ಯಕ್ಷಗಿರಿ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದಾರಾದರೂ ಪಕ್ಷ ಈ ಬಗ್ಗೆ ಇನ್ನೂ ಅಂತಿಮ ನಿರ್ಣಯ ಕೈಗೊಂಡಿಲ್ಲ.
ಜೆಡಿಎಸ್‌ನಲ್ಲೂ ಗೊಂದಲ: ಆಳಂದದ ಮಾಜಿ ಶಾಸಕ ಸುಭಾಸ ಗುತ್ತೇದಾರ್ ಪಕ್ಷದ ಅಧ್ಯಕ್ಷಗಿರಿ ಒಲ್ಲೆ ಎಂದು 2 ಬಾರಿ ರಾಜಿನಾಮೆ ಪತ್ರ ವರಿಷ್ಠರಿಗೆ ಕಳುಹಿಸಿ ಸುದ್ದಿ ಮಾಡಿದ್ದರು. ಜೆಡಿಎಸ್‌ನಲ್ಲಿ ಈಗ ಯಾರು ಅಧ್ಯಕ್ಷರು ಎಂಬುದೇ ಗೊಂದಲಕಾರಿ. ಸುಭಾಸ ಗುತ್ತೇದಾರ್ ಅವರಂತೂ ಪಕ್ಷದ ಸಂಘಟನೆಯಲ್ಲಿ ಅಷ್ಟೊಂದು ಕ್ರಿಯಾಶೀಲರಾಗಿಲ್ಲ. ಹಂಗಾಮಿಯಾಗಿ ಯಾರನ್ನೂ ವರಿಷ್ಠರು ಪಕ್ಷದ ಗುಲ್ಬರ್ಗ ಜಿಲ್ಲಾ ಅಧ್ಯಕ್ಷರ ಜವಾಬ್ದಾರಿ ವಹಿಸಿಲ್ಲ. ಹೀಗಾಗಿ ಜೆಡಿಎಸ್‌ಗೆ ಯಾರು ಸಾರಥಿ ಎಂಬುದೇ ರಹಸ್ಯವಾಗಿದೆ.
ಕಾರ್ಯಕರ್ತರಂತೂ ಗೊಂದಲಕ್ಕೆ ಸಿಲುಕಿದ್ದಾರೆ. ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿವೆ. ಈ ಹಂತದಲ್ಲಿ ಪಕ್ಷ ಜಿಲ್ಲೆಯಲ್ಲಿ ಈ ಪರಿಯಾಗಿ ಕುಸಿತ ಕಂಡರೆ ಹೇಗೆ ಎಂಬುದೇ ಕಾರ್ಯಕರ್ತರ ಕಳವಳಕ್ಕೆ ಕಾರಣ. ಆದಾಗ್ಯೂ ವರಿಷ್ಠರು ಗುಲ್ಬರ್ಗದ ಪಕ್ಷದ ವಿಚಾರಗಳನ್ನು ಚರ್ಚಿಸಲು ಜುಲೈ 17ರಂದು ಬೆಂಗಳೂರಲ್ಲಿ ಸಭೆ ಕರೆದಿದ್ದಾರೆ ಎನ್ನಲಾಗಿದ್ದು, ಪಕ್ಷದ ಯುವ ಕಾರ್ಯಕರ್ತರು ಹಲವರು ಈ ಸಭೆಗೆ ಹೋಗಿ ತಮ್ಮ ನೋವು ತೋಡಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಕೆಜೆಪಿ- ಬಿಎಸ್‌ಆರ್‌ಸಿ ಎಲ್ಲಿ?: ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಹತ್ತು ಹಲವು ಹೇಳಿಕೆಗಳನ್ನು ನೀಡುತ್ತ, ಹತ್ತಾರು ಸುದ್ದಿಗೋಷ್ಠಿ- ಸಮಾವೇಶಗಳನ್ನು ನಡೆಸುತ್ತ ಜಬರದಸ್ತ್ ಸುದ್ದಿಯಲ್ಲಿರುತ್ತಿದ್ದ ಕೆಜೆಪಿ ಹಾಗೂ ಬಿಎಸ್‌ಆರ್ಸಿ ಪಕ್ಷಗಳ ಕಾರ್ಯಕರ್ತರು, ಪ್ರಮುಖ ನಾಯಕರು ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬಿದ್ದ ಮರುದಿನದಿಂದ ಮಂಗಮಾಯವಾಗಿದ್ದಾರೆ ಎಂಬುದು ಜನರ ಅಭಿಮತ.
ಜನಪರ ಧೋರಣೆಯ ಚಟುವಟಿಕೆಗಳೇ ಮಂಗಮಾಯ: ಚುನಾವಣೆ, ಸೋಲು-ಗೆಲವು ಮೀರಿ ನಿಲ್ಲುವ, ಜನಪರ ಧೋರಣೆಯನ್ನೇ ಸದಾಕಾಲ ತಮ್ಮ ಧ್ಯೇಯವಾಗಿಸಿಕೊಂಡು ಬೇರು ಮಟ್ಟದಲ್ಲಿ ಕಾರ್ಯಕರ್ತರ ಪಡೆ ಕಟ್ಟುವ ಮೂಲಕ ಜನ ಸೇವೆಗೆ ತೊಡಗಿಸಿಕೊಳ್ಳುವಂತಹ ನಡಾವಳಿ ರೂಢಿಸಿಕೊಳ್ಳಬೇಕಿದ್ದ ರಾಜಕೀಯ ಪಕ್ಷಗಳು ಇಂದು ಇಂತಹ ಜನಪರ ನಿಲುವಿನಿಂದ ದೂರ ಸರಿಯುತ್ತಿರುವ ಬೆಳವಣಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
ಅದರಲ್ಲೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ರೂಪದಲ್ಲಿ ಚುನಾವಣೆ ನಂತರವೂ ಜನರ ಜೊತೆ ಅರಿತು- ಬೆರೆತು ಹೆಜ್ಜೆ ಹಾಕುವ ಜವಾಬ್ದಾರಿ- ಹೊಣೆಗಾರಿಕೆ ಪ್ರದರ್ಶಿಸಬೇಕಿದ್ದ ರಾಜಕೀಯ ಪಕ್ಷಗಳು ಇಂದು ನಾಯಕರು ಹಾಗೂ ಕಾರ್ಯಕರ್ತರೇ ಇಲ್ಲದೆ ಲಕ್ವಾ ಹೊಡೆದಂತೆ ಆಗಿರುವುದು ಗುಲ್ಬರ್ಗದ ಬಹುದೊಡ್ಡ ದುರಂತ ಎಂಬ ಚರ್ಚೆಗಳು ಸಾಗಿವೆ.
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.