ಎಎಸ್ಐ ನೀಡಿದ್ದ ಸುಳ್ಳು ಜಾತಿ ಪ್ರಮಾಣಪತ್ರ ಅಸಿಂಧು: ಡಿಸಿ
ಯಾದಗಿರಿ: ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಪೊಲೀಸ್ ಪೇದೆ ಹುದ್ದೆಯಿಂದ ಎಎಸ್ಐ ಆಗಿದ್ದ ಹಿನ್ನೆಲೆಯಲ್ಲಿ ಅವರ ಜಾತಿ ಪ್ರಮಾಣಪತ್ರವನ್ನು ಅಸಿಂಧು ಎಂದು ತೀರ್ಮಾನಿಸಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಆದೇಶಿಸಿದ್ದಾರೆ.
ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಡಿಸಿಐಬಿ ವಿಭಾಗದಲ್ಲಿ ಎಎಸ್ಐ ಆಗಿದ್ದ ವಿಠ್ಠಲ ಭೀಮಶ್ಯಾ ವಗ್ಗಿ ಅವರು ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು ಎಂಬುದು ಈಗ ಪರಿಶೀಲನೆಯಿಂದ ಗೊತ್ತಾಗಿದೆ. ವಿಠ್ಠಲ ಅವರು 1981ರಲ್ಲಿ ಕುರುಬ 2ಎ ಕೆಟಗರಿಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಎಂದು ನೇಮಕಗೊಂಡಿದ್ದರು.
ನಂತರ 1994ರಲ್ಲಿ ಶಹಾಪುರ ತಹಸೀಲ್ದಾರರು ನೀಡಿದ ಗೊಂಡ ಕುರುಬ (ಪರಿಶಿಷ್ಟ ಪಂಗಡ) ಪ್ರಮಾಣ ಪತ್ರದ ಆಧಾರದಲ್ಲಿ ಪದೋನ್ನತಿ ಪಡೆದಿದ್ದರು.
ಜಾತಿ ಪತ್ರ ರದ್ದು: ಈ ಕುರಿತು ಆರೋಪ ಬಂದ ಹಿನ್ನೆಲೆಯಲ್ಲಿ ಶಹಾಪುರ ತಹಸೀಲ್ದಾರರು 2012ರಲ್ಲಿ ತನಿಖೆ ಕೈಗೊಂಡಿದ್ದರು. ಶಹಾಪುರದಲ್ಲಿ ಗೊಂಡ ಕುರುಬ ಜಾತಿಗೆ ಸೇರಿದವರು ಇಲ್ಲ ಎಂಬುದನ್ನು ಗಣನೆಗೆ ತೆಗೆದುಕೊಂಡ ಶಹಾಪುರ ತಹಸೀಲ್ದಾರರು 1994ರಿಂದ ತಮ್ಮ ಕಚೇರಿಯಿಂದ ನೀಡಲಾಗಿದ್ದ ಗೊಂಡ ಕುರುಬ ಜಾತಿ ಪ್ರಮಾಣಪತ್ರ ಹಿಂದಕ್ಕೆ ಪಡೆದು ಅದನ್ನು ರದ್ದುಗೊಳಿಸಿದ್ದಾರೆ.
ಆರ್ಥಿಕ ಸೌಲಭ್ಯ ಹಿಂದಕ್ಕೆ: ಶಹಾಪುರ ತಹಸೀಲ್ದಾರರು ನೀಡಿದ ಆದೇಶದ ಹಿನ್ನೆಲೆಯಲ್ಲಿ ವಿಠ್ಠಲ ವಗ್ಗಿ, 2ಎ ಕುರುಬ ಪ್ರವರ್ಗ ಜಾತಿಗೆ ಸೇರಿದ್ದು, ಸರ್ಕಾರಿ ಹುದ್ದೆಯನ್ನು ಪಡೆಯುವ ಉದ್ದೇಶದಿಂದ ಗೊಂಡ ಕುರುಬ (ಪರಿಶಿಷ್ಟ ಪಂಗಡ) ಜಾತಿಗೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದರು. ಸರ್ಕಾರದಿಂದ ಮೋಸದಿಂದ ಪಡೆದ ಅವರ ಪ್ರಮಾಣಪತ್ರವನ್ನು ಅಸಿಂಧು ಎಂದು ತೀರ್ಮಾನಿಸಲಾಗಿದೆ. ಅಲ್ಲದೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಪದೋನ್ನತಿ ಹೊಂದಿದ್ದು, ಇವರನ್ನು ಸರ್ಕಾರದ ನಿಯಮಗಳಂತೆ ಕ್ರಮ ಕೈಗೊಳ್ಳಬೇಕು. ಪದೋನ್ನತಿ ಪಡೆದ ದಿನಾಂಕದಿಂದ ಇಲ್ಲಿಯವರೆಗೆ ಪಡೆದ ಆರ್ಥಿಕ ಸೌಲಭ್ಯಗಳನ್ನು ಸರ್ಕಾರಕ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಮಾನವ ಹಕ್ಕು ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ.
ಸೂಕ್ತ ಕ್ರಮ: ಈ ಕುರಿತು ಎಸ್ಪಿ ವಂಶಿಕೃಷ್ಣ ಅವರನ್ನು ಕೇಳಿದಾಗ, ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶ ಪ್ರತಿ ಇನ್ನೂ ಬಂದಿಲ್ಲ. ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶಿಸಿರುವ ಜಿಲ್ಲಾಧಿಕಾರಿಯವರ ಆದೇಶವನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಯ ಮಲ್ಲಿಕಾರ್ಜುನ ಕ್ರಾಂತಿ ಹಾಗೂ ಇತರರು ಸ್ವಾಗತಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

