ಗುಲ್ಬರ್ಗಾ

ಮತ್ತೆ ಮರಗಳ ಹನನ...

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.17
ಗುಲ್ಬರ್ಗದ ಹಸಿರಿಗೆ ಉಸಿರೇ ಇಲ್ಲ ಅನ್ಬಹುದೇನೋ, ಮೊದ್ಲೇ ಮರಗಳಿಲ್ಲದ ನಗರ, ಈಗ ಅಭಿವೃದ್ಧಿ ನೆಪದಲ್ಲಿ ಇದ್ದ ಮರಗಿಡಗಳಿಗೂ ಕೊಡಲಿ ಪೆಟ್ಟು.
ಸಿಎಂ ನಗರೋತ್ಥಾನ ಎಂದು 4ರಸ್ತೆ ನಿರ್ಮಿಸಲು 2 ವರ್ಷಗಳ ಹಿಂದೆ ಪಟೇಲ್ ವೃತ್ತ- ಆಳಂದ ನಾಕಾದ ದಾರಿಗುಂಟ ನಳನಳಿಸುತ್ತಿದ್ದ ಮರಗಳನ್ನೆಲ್ಲ ಅಂದಾಧುಂದಿಯಾಗಿ ಕತ್ತರಿಸಿದ್ದು ನಗರ ಜನತೆ ಇನ್ನೂ ಮರೆತಿಲ್ಲ.
ಇದೀಗ ಐವಾನ್- ಏ- ಷಾಹಿ ಮಾರ್ಗದಿಂದ ಏಶಿಯನ್ ಮಾಲ್ ರಸ್ತೆ ಬಳಸಿ ಗುಲ್ಬರ್ಗ ವಿವಿ ಜ್ಞಾನಗಂಗೆ ಕ್ಯಾಂಪಸ್ಸ್‌ಲ್ಲಿ ತಲೆ ಎತ್ತಿರುವ ಇಎಸ್‌ಐಸಿ ವೈದ್ಯಕೀಯ ಸಂಕೀರ್ಣಕ್ಕೆ ಹೆಚ್ಚು ಸಾಮರ್ಥ್ಯದ ವಿದ್ಯುತ್ ಮಾರ್ಗ (ಎಚ್ಟಿ ಲೈನ್) ಹಾಕುವ ಕೆಲಸ ಶುರುವಾಗಿದೆ ಎಂದು ಜೆಸ್ಕಾಂ ಈ ಕಾಮಗಾರಿಯ ದಾರಿಗಡ್ಡ ಬರುತ್ತಿವೆ ಎಂದು ಮೂವತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬೆಳೆದು ನಿಂತಿರುವ ಬೇವು, ಅರಳಿ, ಹೊಂಗೆ ಸೇರಿದಂತೆ ಹಲವು ಬಗೆಯ ಮರಗಳನ್ನು ಕಡಿದು ಹಾಕುತ್ತಿದೆ.
ವಾಸ್ತವದಲ್ಲಿ ಗುಲ್ಬರ್ಗ ದಕ್ಷಿಣ ಪವರ್ ಸಬ್ ಸ್ಟೇಷನ್‌ನಿಂದ ಉದ್ದೇಶಿತ ಎಚ್ಟಿ ಲೈನ್ ಆರಂಭವಾಗಿ ಇಎಸ್‌ಐಸಿ ಆಸ್ಪತ್ರೆವರೆಗೂ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಒಂದು ಬದಿಯಲ್ಲಿ ವಿದ್ಯುತ್ ಲೈನ್ ಇದೆ. ಖಾಲಿ ಇರುವ ಇನ್ನೊಂದು ಮಗ್ಗುಲಲ್ಲಿ ಈ ಎಚ್ಟಿ ಲೈನ್ ಎಳೆಯುವ ಕೆಲಸ ಜೆಸ್ಕಾಂ ಕೈಗೆತ್ತಿಕೊಂಡಿದ್ದು ಅಲ್ಲಿನ ಮರಗಳಿಗೆ ಕೊಡಲಿ ಪೆಟ್ಟು ನೀಡಲಾರಂಭಿಸಿದೆ.
ಈ ರಸ್ತೆಗುಂಟ ಸಾಗುವ ಸಾರ್ವಜನಿಕರಲ್ಲಿ ಸಿಂಹಪಾಲು ಮಂದಿ ಅದ್ಯಾಕೆ ಬೆಳೆದು ನಿಂತಿರುವ ಮರಗಳಿಗೆ ಕೊಡಲಿ ಹಾಕಲಾಗುತ್ತಿದೆಯೋ ಎಂದು ಕುತೂಹಲದಿಂದ ನೋಡುವಂತಾಗಿದೆ. ಏಕೆಂದರೆ ನಗರದಲ್ಲಿ ಅಲ್ಪಸ್ವಲ್ಪ ಹಸಿರು ರಸ್ತೆಗುಂಟ ಇರುವ ಪ್ರದೇಶವೆಂದರೆ ಐವಾನ್- ಏ- ಷಾಹಿ ಪ್ರದೇಶ ಮಾತ್ರ. ಅಲ್ಲೇ ಈ ರೀತಿ ಬೇಕಾಬಿಟ್ಟಿ ಮರಗಳನ್ನು ಬೋಳು ಮಾಡುವ ಕೆಲಸ ನಡೆಯುತ್ತಿದೆ ಎಂದರೆ ಹೇಗೆ ಎಂಬುದೇ ಇವರೆಲ್ಲರ ಆತಂಕ.
ಅರಣ್ಯ ಇಲಾಖೆ- ಜೆಸ್ಕಾಂ ಭಿನ್ನರಾಗ: 'ಕನ್ನಡಪ್ರಭ' ಮರಗಳ ಮಾರಣ ಹೋಮದ ಕುರಿತಂತೆ ಮೊದಲು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಯತ್ನಿಸಿದಾಗ ರೇಂಜ್ ಫಾರೆಸ್ಟ್ ಅಧಿಕಾರಿ (ಆರ್‌ಎಫ್‌ಓ) ಸಿದ್ರಾಮಪ್ಪ ಮಾತಿಗೆ ಸಿಕ್ಕರಲ್ಲದೆ ಮರಗಳನ್ನು ಕಡಿಯುತ್ತಿರುವ ಬೆಳವಣಿಗೆ ಇಲಾಖೆ ಗಮನಕ್ಕಿದೆ ಎಂದರು.
ಇಎಸ್‌ಐಸಿ ಆಸ್ಪತ್ರೆಗೆ ವಿದ್ಯುತ್ ಲೈನ್ ಹಾಕಲಾಗುತ್ತಿದೆ. ಮರಗಳನ್ನು ತೆಗೆದು ಮಾರ್ಗ ತೆರವು ಮಾಡಿಕೊಡುವಂತೆ ಜೆಸ್ಕಾಂ, ಇಎಸ್‌ಐಸಿ ಕೋರಿಕೊಂಡಿದೆ. ಈ ಅರ್ಜಿ ಇಲಾಖೆಗೆ ಬಂದು 2 ತಿಂಗಳಾಯ್ತು. ಅದರ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ಚರ್ಚಿಸಿ ಮರಗಳನ್ನು ತೆರವು ಮಾಡಿ ಕೊಡಲು ನಿರ್ಧರಿಸಿದ್ದೇವೆ ಎಂದರು.
ಎಚ್ಟಿ ಲೈನ್ ಎಳೆಯುವ ಮಾರ್ಗ ತುಸು ಆಚೀಚೆ ಮಾಡಿದರೂ ಹತ್ತಾರು ಆರೋಗ್ಯವಂತ ಮರಗಳನ್ನು ಉಳಿಸಬಹುದಿತ್ತಲ್ಲ ಎಂಬ ಪ್ರಶ್ನೆಗೆ ಆರ್‌ಎಫ್‌ಓ ಸಿದ್ರಾಮಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ ಮರಗಳನ್ನು ತೆಗೆದು ಹಾಕುವ ಕೆಲಸ ಇಲಾಖೆ ಗಮನದಲ್ಲಂತೂ ದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದರು.
ಇಲಾಖೆಗೆ ಮನವಿ: ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಬಸವರಾಜ ಪಾಟೀಲರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ ಅವರೂ ಈ ಹೊಸ ಮಾರ್ಗಮಧ್ಯೆ ಬರುವ ಮರಗಳನ್ನು ಟ್ರಿಮ್ಮಿಂಗ್ ಮಾಡುವ ಅಗತ್ಯತೆ ಇತ್ತು. ಸುರಕ್ಷತೆ ಹಾಗೂ ಯಾವುದೇ ಅವಘಡ ಸಂಭವಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ನಾವು ಈ ಕಾರ್ಯಕ್ಕೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆವು ಎಂದರು.
ದುರಂತವೆಂದರೆ ಹೊಸ ವಿದ್ಯುತ್ ಮಾರ್ಗ ಎಳೆಯುವ ಅಧಿಕೃತ ಏಜನ್ಸಿ ಜೆಸ್ಕಾಂ ಕೇವಲ ಮರಗಳ ಟ್ರಿಮ್ಮಿಂಗ್‌ಗೆ ಮನವಿ ಮಾಡಿದರೆ ವಾಸ್ತವದಲ್ಲಿ ಬೆಳೆದು ನಿಂತಿರುವ ಮರಗಳನ್ನೆಲ್ಲ ಒಂದೂ ತಪ್ಪಲು, ರೆಂಬೆ- ಕೊಂಬೆ ಇಲ್ಲದಂತೆ ಬೋಳು ಮಾಡಿ ನಿಲ್ಲಿಸಲಾಗುತ್ತಿದೆ.
ಟ್ರಿಮ್ಮಿಂಗ್ -ಕೊಡಲಿ ಪೆಟ್ಟು, ಯಾವುದು ಸತ್ಯ: ಮರಗಳನ್ನು ಟ್ರಿಮ್ಮಿಂಗ್ ಮಾಡುವುದು ಎಂದರೆ ಹೀಗೆ ಬುಡ ಬಿಟ್ಟು ಅದರ ಭಾಗಗಳನ್ನೆಲ್ಲ ಕತ್ತರಿಸಿ ನೆಲಕ್ಕೆ ಹಾಕುವುದೆ, ಹೀಗಾದರೆ ಮರ ಹಸಿರು ಚಿಗುರಲು ಸಾಧ್ಯವೆ ವಿದ್ಯುತ್ ಲೈನ್‌ಗೆ ತಗುಲಬಾರದು ಎಂದು ಮರಗಳ ರೆಂಬೆಗಳನ್ನು ಮಾತ್ರ ಕತ್ತರಿಸಿ ಮರವನ್ನು ಹಾಗೆ ಬಿಡುವುದು ಟ್ರಿಮ್ಮಿಂಗ್. ಆದರಲ್ಲಿ ಟ್ರಿಮ್ಮಿಂಗ್ ಹೆಸರಲ್ಲಿ ಮರ ಬೆಳೆಯದಂತೆ ಮಾಡಲಾಗಿತ್ತು.
ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಅಧಿಕಾರಿ ಸಿದ್ರಾಮಪ್ಪ ಅವರ ಪ್ರಕಾರ ವಿದ್ಯುತ್ ಮಾರ್ಗದಲ್ಲಿ ಬರುವ 29ಕ್ಕೂ ಹೆಚ್ಚು ಬೇವು- ಅರಳಿ ಮರಗಳನ್ನು ಹೀಗೆಯೇ ಮಾಡಲಾಗುತ್ತಿದೆ. ಟ್ರಿಮ್ಮಿಂಗ್ ಹೆಸರಲ್ಲಿ ಮರವನ್ನು ಇಡಿಯಾಗಿ ಕತ್ತರಿಸಿ ಬೊಡ್ಡೆಯೊಂದನ್ನೇ ಇಟ್ಟು ಇದೇ ಟ್ರಿಮ್ಮಿಂಗ್ ಎಂದು ಸಾರಿಸುವ ಕೆಲಸಕ್ಕೆ ಅರಣ್ಯ ಇಲಾಖೆ, ಜೆಸ್ಕಾಂ ಎರಡೂ ಇಲಾಖೆಗಳು ಮುಂದಾದಂತಿವೆ.
ಲೋಕಾಯುಕ್ತ ಗಮನ ಸೆಳೆದಿತ್ತು:
ನೆರಳಿಲ್ಲದ ನಗರವೆಂದೇ ಹೆಸರಾಗಿರುವ ಗುಲ್ಬರ್ಗದಲ್ಲಿ ನೂರಾರು ಕೋಟಿ ರುಪಾಯಿ ಹಣ ಬಂದರೂ ಅರಣ್ಯ ಭೂಮಿ ಹಿಗ್ಗಿಲ್ಲ ಎಂಬ ವಿಚಾರ ಈಚೇಗೆ ಇಲ್ಲಿಗೆ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಗಮನ ಸೆಳೆದು ಅವರು ಅರಣ್ಯ ವಿಸ್ತೀರ್ಣದ ಕಾರ್ಯಕ್ಕೆ ಪ್ರತ್ಯೇಕ ನಾಗರಿಕ ಸಮಿತಿಯನ್ನೇ ನೇಮಕ ಮಾಡಲು ಆದೇಶಿಸಿದ್ದರು. ಲೋಕಾಯುಕ್ತರ ಕಳಕಳಿಗೆ ವ್ಯತಿರಿಕ್ತವಾದಂತಹ ಬೆಳವಣಿಗೆಗೆ ಗುಲ್ಬರ್ಗ ನಗರ ಸಾಕ್ಷಿಯಾಗುತ್ತಿರುವುದು ದುರಂತವಲ್ಲದೆ ಮತ್ತೇನು ಎಂಬ ಪ್ರಶ್ನೆ ಮೂಡಿದೆ.
ಪರ್ಯಾಯ ಎಲ್ಲಿ ಸ್ವಾಮಿ: ಮರಗಳ ಸಾಮೂಹಿಕ ಹನನ ನಡೆದಲ್ಲಿ ಅದಕ್ಕೆ ಪರ್ಯಾವಾಗಿ ಬೇರೆಡೆ ಮರಗಳನ್ನು ನೆಟ್ಟು ಬೆಳೆಸುತ್ತಾರೆ. ಹಾಗೆ ಬೆಳೆಸಿ ಪಾರ್ಯಯ ನೆಡುತೋಪು ಮಾಡುವಂತೆ ಅರಣ್ಯ ಇಲಾಖೆಯೂ ಕಟ್ಟುನಿಟ್ಟು ಸೂಚನೆ ನೀಡುತ್ತದೆ. ಆದರೆ ಇಎಸ್‌ಐಎಸಿ ಆಸ್ಪತ್ರೆ ಹೊಸ ವಿದ್ಯುತ್ ಲೈನ್ ಕಾಮಗಾರಿಯಲ್ಲಿ ಮರಗಳ ಮಾರಣಹೋಮಕ್ಕೆ ಕಾರಣರಾಗಿರುವವರಿಗೆ ಇಂತಹ ಯಾವುದೇ ಸೂಚನೆ ಅರಣ್ಯ ಇಲಾಖೆ ನೀಡಿದಂತಿಲ್ಲ. ಹೀಗಾಗಿ ಇಷ್ಟೊಂದು ಮರಗಳನ್ನು ಏಕಾಕಲಕ್ಕೆ ಕಡಿದು ಕುಪ್ಪೆ ಹಾಕಲಾಗುತ್ತಿದ್ದರು ಎಲ್ಲಿಯೂ ಹೊಸ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಶುರುವಾಗಿಲ್ಲ.

ಟ್ರಿಮ್ಮಿಂಗ್‌ಗೆ ಕೋರಿದ್ದೇವೆ
ನಾವಂತೂ ಮರಗಳನ್ನು ಸಂಪೂರ್ಣ ಕಡಿಯುವುದು ಬೇಡ, ಟ್ರಿಮ್ಮಿಂಗ್ ಮಾಡಬೇಕೆಂದು ಕೋರಿ ಅರ್ಜಿ ಕೊಟ್ಟಿದ್ದೇವು. ಮರಗಳನ್ನು ಸಂಪೂರ್ಣ ಬೋಳು ಮಾಡಲಾಗುತ್ತಿದೆ ಎಂಬ ವಿಚಾರ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಮ್ಮ ಎಇಇಗಳಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲನೆಗೂ ತಿಳಿಸುವೆ. ಸುರಕ್ಷತೆ ಹಾಗೂ ಇತರೆ ದೃಷ್ಟಿಕೋನದಿಂದ ಮರಗಳ ಟ್ರಿಮ್ಮಿಂಗ್ ಅಗತ್ಯವಿದೆ.
ಬಸವರಾಜ ಪಾಟೀಲ್, ಎಕ್ಜಿಕ್ಯೂಟಿವ್ ಎಂಜಿನಿಯರ್, ಜೆಸ್ಕಾಂ, ಗುಲ್ಬರ್ಗ

ಇಎಸ್‌ಐಸಿ ಕೋರಿದಂತೆ ಕೆಲ್ಸ
ಇಎಸ್‌ಐಸಿ ಆಸ್ಪತ್ರೆಗೆ ಹೊಸ ವಿದ್ಯುತ್ ಮಾರ್ಗ ಹಾಕಬೇಕು, ಮರಗಳನ್ನು ತೆರವು ಮಾಡಿಕೊಡುವಂತೆ ಅರಣ್ಯ ಇಲಾಖೆಗೆ ಅಲ್ಲಿಂದ ಅರ್ಜಿ ಬಂದು 2 ತಿಂಗಳಾಯ್ತು. ಆ ಕೆಲಸ ಈಗ ಸಾಗಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿ ನಮಗಂತೂ ಗೊತ್ತಿಲ್ಲ. 29ಕ್ಕೂ ಹೆಚ್ಚು ಮರಗಳು ಈ ಮಾರ್ಗದಲ್ಲಿವೆ. ಅವುಗಳನ್ನೆಲ್ಲ ತೆಗೆಯುತ್ತೇವೆ.
ಸಿದ್ರಾಮಪ್ಪ, ರೇಂಜ್ ಫಾರೆಸ್ಟ್ ಅಧಿಕಾರಿ, ಗುಲ್ಬರ್ಗ

ಸ್ಥಳದಲ್ಲಿದ್ದು ನೋಡಿದ್ದರೆ...
ಮರಗಳ ಟ್ರಿಮ್ಮಿಂಗ್‌ಗಾಗಿ ಕೋರಿರುವ ಜೆಸ್ಕಾಂ ಆಗಲಿ, ಮರಗಳನ್ನು ತೆರವು ಮಾಡುವ ಕೆಲಸಕ್ಕೆ ಪರವಾನಗಿ ನೀಡಿರುವ ಅರಮ್ಯ ಇಲಾಖೆಯೇ ಆಗಲಿ ಇವೆರಡೂ ಏಜನ್ಸಿಗಳಿಂದ ಪ್ರತಿನಿಧಿಗಳು ಸ್ಥಳದಲ್ಲಿದ್ದು, ಅಲ್ಲಿನ ಕೆಲಸಕ್ಕೆ ತುಸು ಮುತುವರ್ಜಿ ತೋರಿದ್ದರೂ ಈ ರೀತಿ ಮರಗಳ ಹನನವೋ, ಟ್ರಿಮ್ಮಿಂಗೋ.. ಎಂಬ ಪ್ರಶ್ನೆ ಉದ್ಭವವಾಗುತ್ತಿರಲಿಲ್ಲವೇನೋ, ಏಕೆಂದರೆ ಮರಗಳ ರೆಂಬೆ- ಕೊಂಬೆಗಳನ್ನೆಲ್ಲ ಕಡಿದು ಹಾಕಿ ಕೇವಲ ಕಾಂಡ ಮಾತ್ರ ಬಿಡಲಾಗಿದೆ. ಹೀಗಾದರೆ ಮರ ಮತ್ತೆ ಕೊನರುವುದೆ?
-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.