ಗುಲ್ಬರ್ಗಾ

ಪ್ರಾಚೀನ ಭಾಷೆಗಳಲ್ಲಿ ಕನ್ನಡಕ್ಕೆ 2ನೇ ಸ್ಥಾನ: ದೇವರಕೊಂಡಾರೆಡ್ಡಿ

Published On :

ಕ.ಪ್ರ. ವಾರ್ತೆ  ಯಾದಗಿರಿ  ಜು. 21
ಪ್ರಾಚೀನ ಭಾಷೆಗಳ ಪೈಕಿ ಕನ್ನಡ ಭಾಷೆ ಎರಡನೇ ಸ್ಥಾನ ಪಡೆದುಕೊಂಡಿದೆ. ಕನ್ನಡದ ಉಳಿವಿಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಹೇಳಿದರು.
  ಶಾಮ್‌ಕುಮಾರ ದಾಸನ್ ಸ್ಮರಣಾರ್ಥ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಕುತ್ತು ಬರುತ್ತಿದೆ ಎಂದು ನಾವು ಆತಂಕ ವ್ಯಕ್ತಪಡಿಸುತ್ತಿದ್ದೇವೆ. ಆದರೆ ಆಳವಾಗಿ ಯೋಚನೆ ಮಾಡಿದಾಗ ಬಹುತೇಕ ರಾಜ್ಯಗಳ ಸ್ಥಳೀಯ ಭಾಷೆಗಳಿಗೆ ತೀವ್ರ ಹೊಡೆತ ಬೀಳುತ್ತಿದೆ. ಎಲ್ಲ ಭಾಷೆಗಳಿಗೆ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನಾವು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ. ಒಂದು ವೇಳೆ ಇದೇ ರೀತಿ ನಿಷ್ಕಾಳಜಿ ವಹಿಸಿದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಯನ: ಪ್ರತಿಯೊಬ್ಬರೂ ತಮ್ಮ ಮಕ್ಕಳು ಆಂಗ್ಲ ಭಾಷೆಯಲ್ಲಿ ಅಧ್ಯಯನ ಮಾಡಿದರೆ ಅನುಕೂಲ ಆಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ ಅಧ್ಯಯನ ಮಾಡಿ ಕೂಡ ಉನ್ನತ ಸ್ಥಾನಕ್ಕೇರಬಹುದು. ಇದನ್ನು ಎಲ್ಲರೂ ಮನಗಾಣಬೇಕಿದೆ. ಕನ್ನಡ ಸಾಹಿತ್ಯ ತನ್ನದೇ ವಿಭಿನ್ನತೆಯಿಂದಾಗಿ ವಿಶೇಷ ಛಾಪು ಮೂಡಿಸಿದೆ. ಇದರಿಂದಾಗಿ ಮಹಾನ್ ಕವಿಗಳು ಹಲವಾರು ಕೃತಿಗಳನ್ನು ರಚನೆ ಮಾಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಬೇರೂರಿದ್ದಾರೆ ಎಂದು ಹೇಳಿದರು.
  ಕನ್ನಡ ನೆಲ ಜಲದ ಅಭಿಯಾನ ಕುರಿತು ಉಪನ್ಯಾಸ ನೀಡಿದ ಇತಿಹಾಸ ಅನುಸಂಧಾನ ಪರಿಷತ್ ಉಪನಿರ್ದೇಶಕ ಎಸ್.ಕೆ. ಅರುಣಿ, ರಾಜ್ಯದಲ್ಲಿ ಇತಿಹಾಸ ಬರೆಯಲು ಹೊರಟರೆ ಹೈದ್ರಾಬಾದ್-ಕರ್ನಾಟಕದ ಬಗ್ಗೆಯೂ ಸಹ ಬರೆಯಬೇಕಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ಇತಿಹಾಸಕ್ಕೆ ಈ ಭಾಗದ ಕೊಡುಗೆ ಇದೆ ಎಂದು ತಿಳಿಸಿದರು.
ಸೂಫಿ ಸಂತರ ನಾಡು: ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಸೂಫಿ ಸಾಹಿತ್ಯಕ್ಕೂ ಕೂಡ ಹೈಕ ಭಾಗ ಅಪಾರ ಕೊಡುಗೆ ನೀಡಿದೆ. ಇದರಿಂದಾಗಿಯೇ ಇದನ್ನು ಸೂಫಿ ಸಂತರ ನಾಡು ಎಂದೂ ಕರೆಯಲಾಗುತ್ತಿದೆ. ಅತ್ಯಂತ ಹಳೆಯ ಮಾನವರು ಕೂಡ ಹುಣಸಗಿ ಮತ್ತು ಇಸ್ಲಾಂಪುರದಲ್ಲಿ ನೆಲೆಸಿದ್ದರು ಎಂಬುದು ಇತಿಹಾಸ ಹೇಳುತ್ತಿದೆ. ಕನ್ನಡ ನೆಲ, ಜಲ ಹಾಗೂ ಭಾಷೆಯನ್ನು ಪ್ರತಿಯೊಬ್ಬರೂ ಕಾಪಾಡಬೇಕಿದೆ. ಆಗಲೇ ನಾವು ನಾಡಿನಲ್ಲಿ ಜನಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ರಾಮಾಂಜನೇಯ, ವಿಜ್ಞಾನ ಯುಗದಲ್ಲಿ ಮಾನವೀಯತೆ ನಿರೀಕ್ಷೆಗೂ ಮೀರಿ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
  ದತ್ತಿ ದಾನಿ ಜಿಪಂ ಮಾಜಿ ಸದಸ್ಯ ಖಂಡಪ್ಪ ದಾಸನ್ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ನೋಡುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ವಲಯವಾರು ಆಯೋಜಿಸಲಾಗುತ್ತಿದೆ ಎಂದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.