ಹಾಸ್ಟೆಲ್‌ನಲ್ಲಿ ಶಸ್ತ್ರಚಿಕಿತ್ಸೆ ಪಡೆದ ಬಾಣಂತಿಯರ ವಿಶ್ರಾಂತಿ!
ಕನ್ನಡಪ್ರಭ ವಾರ್ತೆ, ಕೆಂಭಾವಿ, ಜು.24
ಪಟ್ಟಣದ ಸರ್ಕಾರಿ ಆಸ್ಪತ್ರೆ ಮಳೆಯಿಂದ ಸೋರುತ್ತಿರುವ ಹಿನ್ನೆಲೆಯಲ್ಲಿ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ತಾಯಂದಿರನ್ನು ಇಲ್ಲಿಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕರ ವಸತಿ ನಿಲಯದಲ್ಲಿ ನೆಲದ ಮೇಲೆ ಮಲಗಿಸಲಾಗಿದೆ.
ಆಸ್ಪತ್ರೆಯ ಕಟ್ಟಡ ಚಿಕ್ಕದಾಗಿದ್ದು, ಅದು ಕೂಡಾ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಮಳೆಯಿಂದಾಗಿ ಸಂಪೂರ್ಣ ಸೋರುತ್ತಿದೆ ಎಂಬ ಕಾರಣ ನೀಡಿ ವಿದ್ಯಾರ್ಥಿ ನಿಲಯವನ್ನು ಆಸ್ಪತ್ರೆಯನ್ನಾಗಿ ಮಾಡಿಕೊಂಡ ಅಪರೂಪದ ಘಟನೆ ನಡೆದಿದೆ.
ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಣಂತಿಯರಿಗೆ ಮಲಗಿಸಲು ಸ್ಥಳಾವಕಾಶ ಇಲ್ಲದ ಪ್ರಯುಕ್ತ ಸ್ವಚ್ಛತೆಯಿಲ್ಲದ ಪ್ರದೇಶವಾದ ಬಾಲಕರ ವಸತಿ ನಿಲಯದಲ್ಲಿ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಾಣಂತಿಯರನ್ನು ನೆಲದ ಮೇಲೆ ಮಲಗಿಸಲಾಗಿತ್ತು.
ಕೋಟ್ಯಂತರ ಅನುದಾನ ಮಂಗಮಾಯ: ಸರ್ಕಾರಿ ಆಸ್ಪತ್ರೆಯು 1963ರಲ್ಲಿಯೇ ಸ್ಥಾಪನೆಯಾಗಿದ್ದು, ವಿಚಿತ್ರ ಎಂದರೆ ಪಟ್ಟಣದ 38 ಸಾವಿರ ಜನಸಂಖ್ಯೆಗೆ ಆರೋಗ್ಯ ಸೇವೆ ಒದಗಿಸಲು ಕೇವಲ 6 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇಲ್ಲಿದೆ. ಸುತ್ತಲಿನ ಸುಮಾರು 70 ಗ್ರಾಮಗಳ ಜನರಿಗೆ ಸೇವೆ ನೀಡಬೇಕಾದ ಆಸ್ಪತ್ರೆ ಇಷ್ಟೊಂದು ಅನಾರೋಗ್ಯದಿಂದ ಬಳಲುತ್ತಿದೆ.
ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿರ್ವಹಣೆಗೆ ಪ್ರತಿ ವರ್ಷ ಆರೋಗ್ಯ ಸೇವೆ ಮತ್ತು ಬಾಣಂತಿ, ಶಿಶುಗಳ ಸಂರಕ್ಷಣೆಗಾಗಿ ಕೋಟ್ಯಂತರ ರು. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಆ ಹಣ ಎಲ್ಲಿ ಸೋರಿ ಹೋಗುತ್ತದೆಯೋ ಗೊತ್ತಿಲ್ಲ.
ನೂರಾರು ಶಸ್ತಚಿಕಿತ್ಸೆಗೆ ಒಬ್ಬರೇ ವೈದ್ಯಾಧಿಕಾರಿ: ಪ್ರತಿ ತಿಂಗಳು ಸಂತಾನಶಕ್ತಿಹರಣ ಶಸ್ತ್ರಚಿಕೆತ್ಸೆ ಶಿಬಿರ ನಡೆಯುತ್ತದೆ. ಪ್ರತಿ ಬಾರಿಯೂ 100ಕ್ಕೂ ಅಧಿಕ ತಾಯಂದಿರು ಬರುತ್ತಾರೆ. ಮಂಗಳವಾರ ರಾತ್ರಿ ಈ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಬಾಣಂತಿಯರು ಶಸ್ತ್ರ ಚಿಕಿತ್ಸೆಗಾಗಿ ಬಂದಿದ್ದರು. ಇಲ್ಲಿಯ ವೈದ್ಯರಿಂದ ಇಷ್ಟೊಂದು ಜನರಿಗೆ ಚಿಕಿತ್ಸೆ ನೆರವೇರಿಸಲು ವಿಳಂಬವಾಗುತ್ತಿದೆ. ಬಾಣಂತಿಯರು ಎರಡು ದಿನ ಖಾಲಿ ಹೊಟ್ಟೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ.
ಸ್ಥಳದ ಅಭಾವ ಕಾರಣವಂತೆ: ಜಿಲ್ಲೆಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯಾಧಿಕಾರಿ ಒಬ್ಬರೇ ಇರುವುದರಿಂದ ರಾತ್ರಿ ಹಗಲು ಎನ್ನದೇ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವ ಪರಿಸ್ಥಿರಿ ಜಿಲ್ಲೆಯ ಜನತೆಗೆ ಬಂದೊದಗಿದೆ. ಈ ಆಸ್ಪತ್ರೆಯಲ್ಲಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಮಲಗಿಸಲು ಸ್ಥಳದ ಅಭಾವವಿದ್ದು, ಪಕ್ಕದ ಬಾಲಕರ ವಸತಿ ನಿಲಯದಲ್ಲಿ ಬಾಣಂತಿಯರನ್ನು ಮಲಗಿಸಿದ್ದೇವೆಂದು ತಾಲೂಕು ವೈದ್ಯಾಧಿಕಾರಿ ಆರ್.ವಿ. ನಾಯಕ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ತೊಂದರೆ: ವಸತಿ ನಿಲಯದ ವಿದ್ಯಾರ್ಥಿಗಳು ಇದರಿಂದ ತೀವ್ರ ತೊಂದರೆ ಅುಭವಿಸುತ್ತಿದ್ದಾರೆ. ತಮ್ಮ ನಿಲಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪ್ರಯುಕ್ತ ನಿಲಯವೆಲ್ಲಾ ಸಂಪೂರ್ಣ ಆಸ್ಪತ್ರೆ ವಾಸನೆಯಿಂದ ಕೂಡಿದೆ ಎಂದು ನಿಲಯದ ವಿದ್ಯಾರ್ಥಿ ಪರಶುರಾಮ ಹೇಳುತ್ತಾನೆ. ನಮಗೆ ಅಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಶಿಶುಗಳೊಂದಿಗೆ ಬಾಣಂತಿಯರು ಬರುವುದರಿಂದ ವಸತಿ ನಿಲಯದ ವಾತಾವರಣ ಹದಗೆಟ್ಟಿದೆ ಎಂದು ತಮ್ಮ ವಿದ್ಯಾರ್ಥಿಗಳು ತಮಗಾಗುತ್ತಿರುವ ತೊಂದರೆ ಬಗ್ಗೆ ತಿಳಿಸುತ್ತಾರೆ.
ಜೀವಗಳೊಂದಿಗೆ ಆಟ: 'ಏನ್ ಹೇಳ್ಬೇಕಪ್ಪಾ, ಆಪರೇಷನ್ ಮಾಡ್ಕೋಬೇಕಂದ್ರ ಎರಡು ದಿನಗಳಿಂದ ಉಪಾಸ ಇರ್ತೀವ್ರಿ. ಈ ದವಾಖಾನ್ಯಾಗ ಆಪರೇಷನ್ ಮಾಡ್ಸಗೋಬೆಕಂದ್ರ ಜೀವಾನೆ ಕೈಯಾಗ ಹಿಡ್ಕೊಂಡಂಗ. ಒಂದು ಕಡೆ ಆಪರೇಷನ್ ಮಾಡ್ಯಾರ ಎಲ್ಲೋ ಹುಡುಗರ ಹಾಸ್ಟೆಲ್ದಾಗ ತಂದು ಹಾಕ್ಯಾರ್ರಿ. ನಮ್ಮ ಬಡ ಜೀವ ಸಂಗಾತ ಆಟ ಆಡತಾರ್ರಿ' ಎಂದು ಶರಣಮ್ಮ ಹೇಳಿದಳು.
ಶಿಬಿರ ಮುಂದೂಡಬೇಕಿತ್ತು..: ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಆಸ್ಪತ್ರ ಸೋರುತ್ತಿದೆ ಎಂದು ತಿಳಿದ ಮೇಲೆ ಈ ಶಿಬಿರವನ್ನು ಮೂಂದೂಡಿಸಬೇಕಾಗಿತ್ತು. ಆದರೆ ಆಸ್ಪತ್ರೆ ಬಿಟ್ಟು ಬೇರೆ ಸ್ಥಳದಲ್ಲಿ ಹಾಕಿ ಶಸ್ತ್ರ ಚಿಕಿತ್ಸೆ ಮಾಡುವುದು ಏನಿತ್ತು ಎಂದು ಸಂತಾನಹರಣ ಚಿಕಿತ್ಸೆಗೆ ಒಳಗಾದ ಪುರುಷ ತಿರುಪತಿ ಕರಡಕಲ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

