ಪರ್ವತದಷ್ಟು ಸಾಹಸ ಮೆರೆದ ಪರ್ವತರೆಡ್ಡಿ
-ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.26
ಚೀನಾ, ಪಾಕಿಸ್ತಾನಗಳ ವಿರುದ್ಧ ಭಾರತ ನಡೆಸಿದ ಯುದ್ಧದಲ್ಲಿ ಪಾಲ್ಗೊಂಡು ಗುಂಡೇಟು ತಿಂದರೂ ಧೃತಿಗೆಡದೇ ಹೋರಾಡಿದ ವೀರ ಕಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕುರಕುಂದಿ ಗ್ರಾಮದ ಪರ್ವತರೆಡ್ಡಿ ಪೊಲೀಸ್ ಪಾಟೀಲ್.
1960ಕ್ಕೆ ತಮ್ಮ 21ನೇ ವರ್ಷದಲ್ಲಿ ಸೇನೆ ಸೇರಿದ ಅವರು ತಾವು ಪಾಲ್ಗೊಂಡಿದ್ದ ಯುದ್ಧದ ಬಗ್ಗೆ ಹೇಳುವಾಗ 74ರ ಇಳಿ ವಯಸ್ಸಿನಲ್ಲೂ ಯುವಕರಂತಾಗುತ್ತಾರೆ. ಮದ್ದು ಗುಂಡುಗಳ ಸದ್ದು ಕೇಳಿ ಕೇಳಿ ಕಿವಿ ಸ್ವಲ್ಪ ದೂರವಾದರೂ ಅವರೊಳಗಿನ ಸೈನಿಕ ಎಚ್ಚರವಾಗಿದ್ದಾನೆ. ಅವರ ಹೋರಾಟದ ಮೆಲಕುಗಳು...
1. ಸೇನೆಗೆ ಸೇರಿದ ಆರಂಭದಲ್ಲಿನ ಅನುಭವ?
ಭಾರತೀಯ ಸೇನೆಯ 7ನೇ ಫೀಲ್ಡ್ ಮೀಡಿಯಂ ರೆಜಿಮೆಂಟ್ ಆರ್ಟಿಲರಿ ಫೋರ್ಸ್ನಲ್ಲಿ ರ್ಯಾಂಕ್ ಗನ್ನರ್ ಎಂದು ಸೇವೆಗೆ ಸೇರಿದೆ. ನಾಸಿಕದಲ್ಲಿ ತರಬೇತಿ ಪಡೆಯುವಾಗಲೇ ಮೊದಲು ಶಸ್ತ್ರಾಸ್ತ್ರಗಳನ್ನು ನೋಡಿದ್ದು. ಸಾಹಸದ ಕೆಲಸಕ್ಕೆ ಚಡಪಡಿಸುತ್ತಿದ್ದೆ.
2. ಮೊದಲ ಹೋರಾಟ?
ತರಬೇತಿ ಅವಧಿ ಮುಗಿಯುತ್ತಿದ್ದಂತೆ ಗೋವಾ, ಕಾರವಾರ ಸೆಕ್ಟರ್ಗೆ ಕಳುಹಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಪೋರ್ಚುಗೀಸರು ಗೋವಾದಿಂದ ಕಾಲ್ಕಿತ್ತಿರಲಿಲ್ಲ. ಗೋವಾ ವಿಮೋಚನೆಗಾಗಿ ಸೇನೆ ಕಾರ್ಯಾಚರಣೆ ನಡೆಸಲಾಯಿತು. ಕೇವಲ ಒಂದೇ ದಿನದಲ್ಲಿ ಪೋರ್ಚುಗೀಸರನ್ನು ಓಡಿಸಲಾಯಿತು.
3. ಬೇಸರ ತಂದ ವಿಷ್ಯ?
ಭಾರತ- ಚೀನಾ ಯುದ್ಧದಲ್ಲಿ ಇದೇ ಆಯಿತು. ಭಾರತ- ಚೀನಾ ಭಾಯಿ ಭಾಯಿ ಎಂದು ನೆಹರು ಹೇಳುತ್ತಿದ್ದರೆ, 1962ರಲ್ಲಿ ಚೀನಾ ದೇಶ ಯುದ್ಧ ಸಾರಿತ್ತು. ಗಡಿ ಭಾಗವಾದ ಲೇಹ್ ಮತ್ತು ಲಡಾಕ್ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ನಾವು ಸೆಣಸಬೇಕಾಯಿತು. ನಮ್ಮಿಂದ ಸಾಕಷ್ಟು ಪೂರ್ವ ತಯಾರಿಯೂ ಇರಲಿಲ್ಲ. 13 ದಿನ ನಡೆದ ಯುದ್ಧದಲ್ಲಿ ಭಾರತೀಯ ಸೇನೆಯ ಸಾಕಷ್ಟು ಯೋಧರು ಕಣ್ಣೆದುರಿಗೇ ವೀರ ಮರಣವನ್ನಪ್ಪಿದರು. ನಮ್ಮಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಆದ್ದರಿಂದ ಸಾಕಷ್ಟು ಭೂಪ್ರದೇಶವನ್ನು ಕಳೆದುಕೊಂಡು, ವಾಪಸಾಗಬೇಕಾಯಿತು.
4. ಅವಿಸ್ಮರಣೀಯ ಕ್ಷಣಗಳು..?
ನಮ್ಮ ಸೇನೆ ಪಾಕ್ ಯೋಧರನ್ನು 5 ದಿನಗಳ ಭೀಕರ ಯುದ್ಧದಲ್ಲಿ ಹಿಮ್ಮೆಟ್ಟಿಸಿತ್ತು. ಆಹಾರ, ಸೂಕ್ತ ಶಸ್ತ್ರಾಸ್ತ್ರಗಳಿಲ್ಲದೆ ವೈರಿಗಳೊಂದಿಗೆ ಸೆಣಸಿದೆವು. ನನ್ನೊಂದಿಗಿದ್ದ ಐವರು ಯೋಧರು ಸತ್ತರು. ಆದರೂ ಧೃತಿಗೆಡದೇ ಹೋರಾಡಿದೆವು. ನಾನು ಗನ್ನರ್ ಆಗಿದ್ದರಿಂದ ಸ್ಫೋಟಕ ಸಿಡಿಸುವುದೇ ನನ್ನ ಕೆಲಸ. ಪಾಕ್ ನೆಲದ ನೀರನ್ನೂ ಮುಟ್ಟಬಾರದೆಂದು ನೀರನ್ನೂ ಕುಡಿದಿರಲಿಲ್ಲ. ಆ ಯುದ್ಧದಲ್ಲಿ ಗೆದ್ದ ಸಂಭ್ರಮ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಇದೆ.
5. ಮತ್ತೆ ಯಾವ ಪ್ರಮುಖ ಹೋರಾಟದಲ್ಲಿದ್ರಿ?
ಪೂರ್ವ ಪಾಕಿಸ್ತಾನ- ಪಶ್ಚಿಮ ಪಾಕ್ ಇಬ್ಭಾಗವಾಗುವಾಗ ಮತ್ತೆ ಭಾರತೀಯ ಸೇನೆ ಯುದ್ಧ ಮಾಡುವಂತಾಯಿತು. ಪರಿಣಾಮ ಪೂರ್ವ ಪಾಕಿಸ್ತಾನ ವಿಮೋಚನೆಯಾಗಿ ಬಾಂಗ್ಲಾ ಉದಯವಾಯಿತು. ಆದರೆ ಆ ಯುದ್ಧದಲ್ಲಿ ಗಂಭೀರ ಗಾಯಗೊಂಡು, ಸೇವೆ ಮುಂದುವರಿಸಲು ಸಾಧ್ಯವಾಗಲಿಲ್ಲ. 12 ವರ್ಷಗಳು ಸೇವೆ ಸಲ್ಲಿಸಿದ್ದ ನಾನು 1972ರಲ್ಲಿ ಅನಿವಾರ್ಯವಾಗಿ ವೈದ್ಯಕೀಯ ನಿವೃತ್ತಿ ಪಡೆದೆ.
6. ಭಾರತೀಯ ಸೇನೆ ಕುರಿತು ನಿಮ್ಮ ಅಭಿಪ್ರಾಯ?
ಸೇನೆಯ ಮೂರೂ ವಿಭಾಗಗಳು ಈಗ ಸಶಕ್ತವಾಗಿವೆ. ಆದರೆ ಪಾಕಿಸ್ತಾನದ ಕುತಂತ್ರದಿಂದ ನಮ್ಮ ಯೋಧರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಹತ್ತಿಕ್ಕುವುದು ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

