ಕಾಡ ಕುದ್ರಿ ಓಡಿ ಬಂದಾಗ... ಡಾ. ಕಂಬಾರ ಖುಷ್ ಹುವಾ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.27
ಕಾಡ ಕುದರಿ ಓಡಿ ಬಂದಿತ್ತ... ಎಂದು ಗಾಯಕ ಗೋಪಿ ನಾಲವಾರ ಹಾಡಿಗೆ ತಲೆದೂಗಿದ ಸಾಹಿತಿ ಕಂಬಾರ ಮರುಕ್ಷಣವೇ ಭಾರತಿ ಸಾಲಿಮಠ ಅವರು ಮೂಡಲಮನೆ ಕಿರುತೆರೆ ಧಾರಾವಾಹಿಯ ರೆಂಬೆ ಕೊಂಬಿಮ್ಯಾಗ ಗೂಡ ಕಟ್ಟತಾವ ರೆಕ್ಕೆ ಬಲಿತ ಹಕ್ಕಿ... ಹಾಡು ಹೇಳಿದಾಗ ಬೆಕ್ಕಸ ಬೆರಗಾದರು.
ಹಾಡುಗಳ ಆಲಿಕೆಯಲ್ಲಿ ತಲ್ಲೀನ: ಸಿ.ಎಸ್. ಮಾಲೀಪಾಟೀಲರು ಶರಣು ಹೇಳತೇವ ನಿಮಗ... ಎಂದಾಗ ಕುಳಿತಲ್ಲೆ ನಸುನಗೆ ಸೂಸಿದ ಜ್ಞಾನಪೀಠ ವಿಜೇತ ಕವಿ, ಲಕ್ಷ್ಮೀ ಶಂಕರ ಜೋಷಿಯವರ ಏನ ಹೇಳಲವ್ವ, ಶ್ಯಾಮರಾವ ದೊಡ್ಮನಿ ಹಾಗೂ ರಾಜಶೇಖರ ಮಾಂಗ್ ಇವರ ಮರೆತವಂದ್ರ ಮರೆಯಲಿ ಹ್ಯಾಂಗ ಮತ್ತು ಕನ್ನಡತಾಯಿ ಕುರಿತಾದ ಕಂಬಾರರ ಹಾಡುಗಳಿಗೆ ಸುಶ್ರಾವ್ಯವಾಗಿ ಧವ್ನಿ ನೀಡಿದಾಗ ವೇದಿಕೆಯಲ್ಲಿದ್ದ ಕಂಬಾರರು ಹಾಡುಗಳನ್ನು ಆಲಿಸುವುದರಲ್ಲೇ ತಲ್ಲೀನರಾಗಿದ್ದರು.
ಇಲ್ಲಿನ ಕನ್ನಡ ಭವನ ಪ್ರಾಂಗಣದಲ್ಲಿರುವ ರಂಗ ಮಂದಿರದ ಆವರಣದಲ್ಲಿ ಶನಿವಾರ ಕಸಾಪ ಆಯೋಜಿಸಿದ್ದ ಕಂಬಾರರ ಸಮ್ಮುಖದಲ್ಲಿನ ಹೇಳತೇನ ಕೇಳಾ... ಎರಡೂವರೆ ಗಂಟೆಗಳ ಅವಧಿ ನಡೆದ ಸಮಾರಂಭದ ನೋಟಗಳಿವು. ಶಾಲಾ ಮಕ್ಕಳು, ಸಾಹಿತ್ಯಾಸಕ್ತರು ಅಧಿಕವಾಗಿದ್ದ ಸಮಾರಂಭದಲ್ಲಿ ಕಂಬಾರರ ಆಯ್ದ 6 ಹಾಡುಗಳು, ಅದಕ್ಕೊಪ್ಪುವ ಚಿತ್ರ, ಅದಕ್ಕೆ ಕಳಶವಿಟ್ಟಂತಹ ವಿಮರ್ಶಾಪರ ಮಾತುಗಳು ಕೇಳಿ ಬಂದವು.
ಸಂವಾದಕ್ಕಿಳಿದ ಕಂಬಾರರು: ರಂಗಕರ್ಮಿ ಪ್ರಭಾಕರ ಜೋಷಿ ಪ್ರಶ್ನೆಯೊಂದಿಗೆ ಸಾಹಿತಿ ಕಂಬಾರರು ಸೇರಿದ್ದವರೊಂದಿಗೆ ಸಂವಾದಕ್ಕೆ ಮುಂದಾದರು. ಬೋಳೆ ಶಂಕರ ನಾಟಕದ ಕಥಾವಸ್ತು ಹಾಗೂ 30 ವರ್ಷಗಳ ನಂತರ ಬಂದ ತಮ್ಮ ಮತ್ತೊಂದು ಕೃತಿಯ ಕಥಾ ವಸ್ತು ಎರಡೂ ಒಂದೇ ತೆರನಾಗಿವೆಯಲ್ಲ... ಎಂಬ ಜೋಷಿಯವರ ಪ್ರಶ್ನೆಗೆ ಸ್ಪಂದಿಸಿದ ಕಂಬಾರರುರ ಕಥೆ ಸಾರ್ವಕಾಲಿಕ. ಕಥೆಗಾರ, ಕವಿ, ಸಾಹಿತಿಗೆ ಇಂತಹ ವಿಷಯ- ವಸ್ತುಗಳು ಆಗಾಗ ಕಾಡುತ್ತಲೇ ಇರುತ್ತವೆ. ಹೀಗಾಗಿ ಆ ವಸ್ತು ಅನೇಕ ರೂಪಗಳಲ್ಲಿ ಪ್ರಕಟಗೊಳ್ಳುತ್ತಲೇ ಸಾಗುತ್ತದೆ ಎಂದರು.
ಚಿತ್ರ ಪ್ರದರ್ಶನ: ಕಲಾವಿದರಾದ ಎ.ಎಸ್. ಪಾಟೀಲ್, ಬಸವರಾಜ ಜಾನೆ, ಎಸ್.ಎಂ. ನೀಲಾ, ಅಂಬಾರಾಯ ಚಿನಮಳ್ಳಿ, ಬಸವರಾಜ ಕಲೆಗಾರ, ನಾಗರಾಜ ಕುಂಬಾರ ಇವರು ಕಂಬಾರರ ಹಾಡುಗಳಿಗೆ ವೇದಿಕೆಯಲ್ಲೇ ಚಿತ್ರ ಬರೆದು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಡಾ. ಸ್ವಾಮೀರಾವ ಕುಲ್ಕರ್ಣಿ, ಡಾ. ಮೀನಾಕ್ಷಿ ಬಾಳಿ, ಶಂಕರಯ್ಯ ಘಂಟಿ, ಡಾ. ಸುಜಾತಾ ಜಂಗಮಸೆಟ್ಟಿ, ಡಾ. ಅಮೃತಾ ಕಟಕೆ, ಪ್ರಭಾಕರ ಜೋಷಿ ಇವರು ಮಾತುಕತೆ ನಡೆಸುವ ಮೂಲಕ ತಜ್ಞಾನಪೀಠ ಪುರಸ್ಕೃತ ಸಾಹಿತಿಯ ಮನ ಹೊಕ್ಕು ಸೇರಿದ್ದವರಿಗೆ ಅವರ ಚಿಂತನೆಯ ಅನೇಕ ಮಗ್ಗುಲಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದರು.
ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ನಿರೂಪಣೆಯಿಂದಲೇ ಗಮನ ಸೆಳೆಯುತ್ತ ಕಂಬಾರರ 'ಬೆಪ್ಪು ತಕ್ಕಡಿ ಬೋಳೆ ಶಂಕರ' ನಾಟಕ ಪಠ್ಯವಾಗಿರುವುದನ್ನು ಸ್ಮರಿಸುತ್ತ ಶಾಲಾ ಮಕ್ಕಳು ಕಂಬಾರರ ನೋಡಲು ಬಂದಿದ್ದನ್ನು ಹೇಳುತ್ತ ಗಮನ ಸೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

