ಅಧಿಕಾರಿಗಳೇ, ಕಚೇರಿ ಬೀಗರ ಮನೆಯಲ್ಲ...!
ಕ.ಪ್ರ. ವಾರ್ತೆ ಯಾದಗಿರಿ ಜೂ.1
ನಗರದ ಜಿಪಂ ಸಭಾಂಗಣದಲ್ಲಿ ಉಪಾಧ್ಯಕ್ಷ ಶರಣಿಕ ಕುಮಾರ ದೋಖಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕರೆದಿದ್ದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗದ್ದರಿಂದ ಅಸಮಾಧಾನಗೊಂಡ ಸದಸ್ಯರು ಸಭೆಯನ್ನು ರದ್ದುಗೊಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣಿಕ ಕುಮಾರ ದೋಖಾ ಮಾತನಾಡಿ, ಯಾವೊಬ್ಬ ಅಧಿಕಾರಿಗಳೂ ಸಭೆಗಳಿಗೆ ಸರಿಯಾಗಿ ಬರುವುದಿಲ್ಲ. 6 ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿಲ್ಲ. ಇದರ ಅರ್ಥ ಏನು ಎನ್ನುವುದು ಗೊತ್ತಾಗುತ್ತಿಲ್ಲ. ಇವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಎತ್ತಿ ತೋರಿಸುತ್ತಿದೆ. ಅಲ್ಲದೇ ಜನಪ್ರತಿನಿಧಿಗಳೆಂದರೆ ಇವರಿಗೆ ಗೌರವ ಇಲ್ಲ. ಹೇಗಾದರೂ ನಡೆಯುತ್ತದೆ ಎಂಬ ನಿರ್ಲಕ್ಷ್ಯ ಧೋರಣೆಯನ್ನು ಅಧಿಕಾರಿಗಳು ತೋರುತ್ತಿದ್ದಾರೆ ಎಂದು ಅಸಮೈಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ತರಾಟೆ: ಅಧ್ಯಕ್ಷರು ಸಿಟ್ಟಿಗೆ ಬಂದಿರುವುದನ್ನು ಗಮನಿಸಿದ ಸಿಇಒ ಎಸ್.ಎ. ಜಿಲಾನಿ, ಗೈರು ಹಾಜರಾದ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷರು, 'ಪೋನ್ ಮಾಡಿ ಯಾಕ್ರಿ ಅವರನ್ನು ಕರೆಯುತ್ತೀರಿ, ಅವ್ರೇನು ಬೀಗಸ್ತನ ಮಾಡ್ಲಿಕ್ಕೆ ಬರ್ತಾರೇನು' ಎಂದು ಸಿಡಿಮಿಡಿಗೊಂಡರು.
ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದೆ ಇಲಾಖೆ ಸಿಬ್ಬಂದಿಯನ್ನು ಕಳುಹಿಸಿದ್ದನ್ನು ಗಮನಿಸಿದ ಸಿಇಒ, 'ಏನ್ ತಮಾಷೆ ಮಾಡ್ತಿರೇನ್ರಿ. ನಿಮಗೆ ಮಾಹಿತಿ ಗೊತ್ತಿದೆಯೋ ಇಲ್ಲವೋ.. ಮಾಹಿತಿ ಗೊತ್ತಿಲ್ಲದವರು ಸಭೆಗೆ ಬರೋದು ಅಂದ್ರೆ ಏನು, ಇಲ್ಲಿ ತಮಾಷೆ ಮಾಡಲಿಕ್ಕೆ ಬರುತ್ತೀರಾ' ಎಂದು ತರಾಟೆಗೆ ತೆಗೆದುಕೊಂಡರು.
ಸಭೆ ರದ್ದುಗೊಳಿಸಿ: ಒಟ್ಟು 25 ಪ್ರಮುಖ ಇಲಾಖೆಗಳ ಪೈಕಿ 13 ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ. ಅದರಲ್ಲೂ ಕೆಲವು ಇಲಾಖೆಯವರು ತಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಸಭೆಯ ಮಾಹಿತಿ ಪುಸ್ತಿಕೆಗೆ ಮಾಹಿತಿ ನೀಡಿಲ್ಲ. ಅಂದ ಮೇಲೆ ಸಭೆ ನಡೆಸಿ ಏನು ಪ್ರಯೋಜನ, ಸಭೆ ರದ್ದುಗೊಳಿಸಿ ಎಂದು ಶರಣಿಕಕುಮಾರ ದೋಖಾ ಸಿಇಒಗೆ ಸೂಚಿಸಿದರು.
ಜನಪ್ರತಿನಿಧಿಗಳು ನಾವೋ.. ನೀವೋ..: ಸದಸ್ಯ ದೇವರಾಜ ನಾಯಕ ಮಾತನಾಡಿ, 'ಯಾರಾದರೂ ಸರಿಯಾದ ಸಮಯಕ್ಕೆ ಸಭೆಗೆ ಬರುತ್ತೀರೇನ್ರಿ. ಜನಪ್ರತಿನಿಧಿಗಳು ನೀವೋ ನಾವೋ ಗೊತ್ತಾಗುತ್ತಿಲ್ಲ. ನಾವೆಲ್ಲ ಬಂದು ನಿಮಗಾಗಿ ತಾಸುಗಟ್ಟಲೆ ಕಾಯಬೇಕು. ಆಗ ನೀವು ಒಬ್ಬೊಬ್ಬರಾಗಿ ಬರುತ್ತೀರಿ. ಸಭೆ ಅಂದ್ರ ಗಂಭೀರತೆ ಇಲ್ಲವೇ' ಎಂದು ತರಾಟೆಗೆ ತೆಗೆದುಕೊಂಡರು. ಸಭೆಗೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಆಗಮಿಸಿದ್ದರಿಂದ ಅಧ್ಯಕ್ಷರ ಸೂಚನೆಯಂತೆ ಸಿಇಒ ಅವರು ಸಭೆಯನ್ನು ರದ್ದುಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

