ಗುಲ್ಬರ್ಗಾ

ಸದಸ್ಯರ ಸ್ವಪ್ರತಿಷ್ಠೆ; ಜಿಪಂ ಸಭೆ ಬಲಿ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.7
ಸದಸ್ಯರ ಸ್ವಪ್ರತಿಷ್ಠೆಯಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಮುಂದೂಡಿದ ಪ್ರಸಂಗ ಶುಕ್ರವಾರ ಜರಗಿತು.
  ಏಳು ತಿಂಗಳ ನಂತರ ಶುಕ್ರವಾರ ಕರೆದ 8ನೇ ಸಾಮಾನ್ಯ ಸಭೆ ನಿಗದಿತ 11ಕ್ಕೆ  ಪ್ರಾಂರಂಭವಾಯಿತು. ಜಿಪಂ.ನ 21 ಸದಸ್ಯರು ಹಾಜರಿ ಪುಸ್ತಕಕ್ಕೆ ಸಹಿ ಹಾಕಿದರು. ಇನ್ನೇನು ಸಭೆ ಪ್ರಾರಂಭ ಮಾಡಬೇಕು ಅನ್ನುವಷ್ಟರಲ್ಲಿ 11 ಜನ ಪುರುಷ ಸದಸ್ಯರು ಸಭೆಯಿಂದ ಹೊರಗೆ ಹೋದರು. ಹೋಗುವ ಮುನ್ನ ಇದು ಬಹಿಷ್ಕಾರವಲ್ಲ, ಚರ್ಚಿಸಿ ಹಿಂದಿರುಗುತ್ತೇವೆ ಎಂದು ಹೇಳಿದರು.
ಕೋರಂ ಕೊರತೆಯೂ ಅಲ್ಲ!: ಅರ್ಧ ಗಂಟೆ ಕಾದರೂ ಯಾವೊಬ್ಬ ಸದಸ್ಯರೂ ಸಭೆಗೆ ಬರಲಿಲ್ಲ. ಎಲ್ಲ ಸದಸ್ಯರು ಸಹಿ ಮಾಡಿದ್ದರಿಂದ ಕೋರಂ ಕೊರತೆ ಎಂದು ಹೇಳಲು ಬರುವುದಿಲ್ಲ. ಅದಕ್ಕಾಗಿ ಇನ್ನೂ ಅರ್ಧ ಗಂಟೆ ಸಮಯ ನೀಡುತ್ತೇವೆ. ಆ ಸಮಯದೊಳಗೆ ಬಂದರೆ ಸಭೆ ಪ್ರಾರಂಭಿಸುತ್ತೇವೆ. ಇಲ್ಲವಾದಲ್ಲಿ ರದ್ದುಪಡಿಸಲಾಗುವುದು ಎಂದು ಜಿಪಂ ಸಿಇಒ ಜಿಲಾನಿ ಸ್ಪಷ್ಟಪಡಿಸಿದರು.
  ಸದಸ್ಯರ ಆಗಮನಕ್ಕಾಗಿ ಸುಮಾರು ಗಂಟೆ ಕಾಲ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಮಹಿಳಾ ಸದಸ್ಯರು ಕಾದು ಸುಸ್ತಾದರು. ಸಮೀಪದ ಕೊಠಡಿಯಲ್ಲಿ ಪುರುಷ ಸದಸ್ಯರು ಸೇರಿ ಗಂಭೀರ ಚರ್ಚೆ ನಡೆಸಿದರು. ಆದರೂ ಸಭೆಗೆ ಬರಲು ಒಪ್ಪಲಿಲ್ಲ.
ಮಹಿಳಾಮಣಿಗಳ ತಿರುಗೇಟು: ನಂತರ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಇತರರು ಮನವೊಲಿಸಿ ಸಭೆಗೆ ಬರುವಂತೆ ತಿಳಿಸಿದರು. ಆದರೆ ಅಷ್ಟರೊಳಗೆ ಕಾದು ಸುಸ್ತಾಗಿದ್ದ ಮಹಿಳಾ ಸದಸ್ಯರು ಸಭೆಯಿಂದ ಹೊರನಡೆದರು. ಆಗ ಎಚ್ಚೆತ್ತುಕೊಂಡ ಸದಸ್ಯರು ಒಂದೂವರೆ ಗಂಟೆಯ ನಂತರ ಸಭೆಗೆ ಪ್ರವೇಶಿಸಿದರು. ಆಗ ಮಹಿಳಾ ಸದಸ್ಯರನ್ನು ಕರೆತರಲು ಅಧ್ಯಕ್ಷೆ ಶರಣಮ್ಮ ಶಾಣ್ಯಾನೋರ ಅವರೇ ಖುದ್ದಾಗಿ ಹೋದರು. ಆದರೆ ಯಾವುದಕ್ಕೂ ಸೊಪ್ಪು ಹಾಕದ ಸದಸ್ಯೆಯರು ಸಭೆಗೆ ಬಾರದೇ ತಿರುಗೇಟು ನೀಡಿದರು.
  ನಂತರ ಅಧ್ಯಕ್ಷೆ ಮರೆಮ್ಮ ಶ್ಯಾಣ್ಯಾನೋರ ವಾಪಸ್ ಬಂದು ಸಭೆಯನ್ನು ಜೂ.11ಕ್ಕೆ ಮುಂದೂಡುವಂತೆ ಸಿಇಒಗೆ ಸೂಚಿಸಿದರು. ಅನಿವಾರ್ಯವಾಗಿ ಸಿಇಒ ಸಿ.ಎ. ಜಿಲಾನಿಯವರು ಅಧ್ಯಕ್ಷರ ಸೂಚನೆ ಮೇರೆಗೆ  ಸಭೆಯನ್ನು ಮುಂದೂಡಿರುವುದಾಗಿ ಪ್ರಕಟಿಸಿದರು.
ಘಟನೆಗೇನು ಕಾರಣ?: ಶುಕ್ರವಾರ ನಡೆಯುವ ಸಭೆಯನ್ನು ಒಂದೆರಡು ದಿನ ಬಿಟ್ಟು ನಡೆಸಲು ಪುರುಷ ಸದಸ್ಯರು ಮನವಿ ಮಾಡಿದ್ದರಂತೆ. ಆದರೆ ಅವರ ಗಮನಕ್ಕೆ ತಾರದೆ ಅಧ್ಯಕ್ಷರು ಮತ್ತು ಇತರ ಕೆಲ ಸದಸ್ಯರು ಶುಕ್ರವಾರವೇ ಸಭೆ ನಡೆಸಲು ಸೂಚಿಸಿದ್ದರಂತೆ. ಅದಕ್ಕಾಗಿ ನಮ್ಮ ಮಾತಿಗೆ ಬೆಲೆ ಇಲ್ಲದ ಮೇಲೆ ಈ ಸಭೆಗೆ ಏಕೆ ಬರಬೇಕು ಎಂದು ಸಭೆಯಲ್ಲಿ ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಹೊರನಡೆದರು.
  ಬಹಿರಂಗವಾಗಿ ಸಭಾತ್ಯಾಗ ಮಾಡದಿದ್ದರೂ ಉದ್ದೇಶ ಮಾತ್ರ ಅದೇ ಆಗಿತ್ತು. ಹೀಗಾಗಿ ಕಳೆದ ಏಳು ತಿಂಗಳ ನಂತರ ನಡೆದ ಈ ಸಾಮಾನ್ಯ ಸಭೆ ಕೇವಲ ಸದಸ್ಯರ ಸ್ವಪ್ರತಿಷ್ಠೆತೆಗೆ ಬಲಿಯಾಯಿತು.
ಸಮಸ್ಯೆಗಿಂತ ಸ್ವಪ್ರತಿಷ್ಠೆಯೇ ಮೇಲು: ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರತೆ ಇರುವಾಗ ಮತ್ತು ಚುನವಣಾ ನೀತಿ ಸಂಹಿತೆಯಿಂದಾಗಿ ಅನೇಕ ಪ್ರಮುಖ ಯೋಜನೆಗಳಿಗೆ ಮಂಜೂರಾತಿ ದೊರಕದೆ ಅಭಿವೃದ್ಧಿ ಕುಂಠಿತಗೊಂಡಿರುವಾಗ ಜನಪ್ರತಿನಿಧಿಗಳ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಭೆಯ ಗಂಭೀರತೆ ಅರಿಯದೆ ಕೇವಲ ತಮ್ಮ ಸ್ವಪ್ರತಿಷ್ಠೆಗೆ ಒತ್ತು ಕೊಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳಿಗೆ ಹಿಂಸೆ: ಜನಪ್ರತಿನಿಧಿಗಳ ಈ ವರ್ತನೆಯಿಂದ ಸಭೆಯಲ್ಲಿ ಹಾಜರಿದ್ದ ಜಿಲ್ಲಾಮಟ್ಟದ ಅಧಿಕಾರಿಗಳು ಮೌನವಾಗಿ ಹಿಂಸೆ ಅನುಭವಿಸಿದರು. ಸುಮಾರು ಎರಡು ಗಂಟೆ ಕಾಲ ಸಭೆ ನಡೆಯುತ್ತದೆ ಎಂದು ಕಾದು ಅವರು ಸುಸ್ತಾದರು. ಇತ್ತ ಹೊರಗೂ ಹೋಗಲಾರದೆ ಅತ್ತ ಒಳಗೂ ಇಲಾಖೆ ಬಗ್ಗೆ ಚರ್ಚಿಸಲಾಗದೇ ಕುಳಿತರು. ಜನಪ್ರತಿನಿಧಿಗಳ ವರ್ತನೆಯನ್ನು ವಿರೋಧಿಸಲಾಗದೆ ಮನದಲ್ಲಿಯೇ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾ ಕೊನೆಗೆ ಸಭೆ ಮುಂದೂಡಿದ ಬಳಿಕ ಹೊರ ನಡೆದರು. ಅಧಿಕಾರಿಗಳು ಸ್ವಲ್ಪ ತಡವಾಗಿ ಬಂದರೂ ತರಾಟೆಗೆ ತೆಗೆದುಕೊಳ್ಳುವ ಜನಪ್ರತಿನಿಧಿಗಳು ಶುಕ್ರವಾರದ ತಮ್ಮ ವರ್ತನೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೋ ಎನ್ನುವುದು ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.