ಅನಧಿಕೃತ ಎಂಟು ಖಾಸಗಿ ವಾಹನ ಜಪ್ತಿ
ಯಾದಗಿರಿ: ಖಾಸಗಿ ಒಪ್ಪಂದ ವಾಹನಗಳು ಗುಲ್ಬರ್ಗ-ಸುರಪುರ ಮತ್ತು ಶಹಾಪುರ-ಗುರುಮಠಕಲ್ ಮಾರ್ಗದಲ್ಲಿ ಅನಧಿಕೃತ ಹಾಗೂ ಕಾನೂನು ಬಾಹಿರವಾಗಿ ಮಜಲು ವಾಹನಗಳಂತೆ ಸಂಚರಿಸುತ್ತಿದ್ದ 8 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಮೇ 17ರಂದು 4 ವಾಹನ ಹಾಗೂ ಜೂ. 7ರಂದು 4 ವಾಹನ ಸೇರಿದಂತೆ 8 ಒಪ್ಪಂದ ವಾಹನಗಳನ್ನು ಕಾನೂನು ಬಾಹಿರವಾಗಿ ಮಜಲು ವಾಹನಗಳಂತೆ ಸಂಚರಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಮಾಡಿ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಾಹನಗಳಿಗೆ ರಹದಾರಿ ಷರತ್ತುಗಳನ್ನು ಉಲ್ಲಂಘಿಸಿದಕ್ಕಾಗಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿ ರು. 37,500 ದಂಡ ವಸೂಲಿ ಮಾಡಲಾಗಿದೆ. ಈ ಸಂಬಂಧ ಕಾರ್ಯಾಚಾರಣೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಒಪ್ಪಂದ ವಾಹನಗಳ ಮಾಲೀಕರಿಗೆ ತಕ್ಷಣವೇ ಮಜಲು ವಾಹನಗಳಂತೆ ಕಾರ್ಯಾಚರಣೆ ಮಾಡುವುದನ್ನು ನಿಲ್ಲಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ಕೆ. ಪಾಷಾ ತಿಳಿಸಿದ್ದಾರೆ.
'ಮಾದರಿ ಗ್ರಾಮ;
ಸಹಕಾರ ಅಗತ್ಯ'
ಯಾದಗಿರಿ: ವಿಕಾಸ ಅಕಾಡೆಮಿ ಯಾದಗಿರಿ ವತಿಯಿಂದ ಇನ್ಫೋಸಿಸ್ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ತಾಲೂಕಿನ ಅನಪುರ ಮತ್ತು ಯಲ್ಹೇರಿ ಗ್ರಾಮಗಳನ್ನು ಮುಂದಿನ 18 ತಿಂಗಳುಗಳಲ್ಲಿ ಮಾದರಿ ಗ್ರಾಮಗಳನ್ನಾಗಿಸಲು ಯೋಜನೆ ರೂಪಿಸಿದ್ದು, ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಪ್ರತಿಷ್ಠಾನದ ವಾಸುದೇವ ದೇಶಪಾಂಡೆ ಕೋರಿದರು. ತಾಲೂಕಿನ ಅನಪುರ ಮತ್ತು ಯಲ್ಹೇರಿ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸರ್ವ ಗ್ರಾಮಸ್ಥರ ಸಹಕಾರದಿಂದ ಹಳ್ಳಿಯಲ್ಲಿ ಸಸಿ ನೆಟ್ಟು ಸಂರಕ್ಷಿಸುವುದು, ಶೌಚಾಲಯ ನಿರ್ಮಾಣ, ಆರೋಗ್ಯ ಶಿಬಿರಗಳ ಆಯೋಜನೆ, ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ, ಮಳೆ ನೀರು ಕೊಯ್ಲು, ಕೃಷಿ ಹೊಂಡ ನಿರ್ಮಾಣ, ಮುಚ್ಚು ಚರಂಡಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ಪರಿಶುದ್ಧ ಕುಡಿಯುವ ನೀರಿನ ಸೌಲಭ್ಯ, ನೀರಿನ ಮೂಲಗಳ ಪುನಶ್ಚೇತನ, ಬಯೋಗ್ಯಾಸ್ ಸೌರಶಕ್ತಿ ಬಳಕೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುವುದು. ಗರಿಷ್ಠ ತಲಾ 18 ಲಕ್ಷದಂತೆ ಪ್ರತಿಷ್ಠಾನದಿಂದ ನೆರವು ನೀಡಲಾಗುವುದು ಎಂದು ವಾಸು ದೇಶಪಾಂಡೆ ತಿಳಿಸಿದರು. ಕಾರ್ಯಕ್ರಮಗಳಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ, ಅನಪುರ ವಿಕಾಸ ಅಕಾಡೆಮಿ ಸಂಚಾಲಕ ಗೋಪಾಲರಡ್ಡಿ ಅನಪುರ, ಯಲ್ಹೇರಿ ಸಂಚಾಲಕ ಬಸವರಾಜ ಕಣೇಕಲ ಇತರರು ಇದ್ದರು.
ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಈ ವಿದ್ಯುತ್ ತಂತಿ...
ಯಾದಗಿರಿ: ಶಹಾಪುರ ತಾಲೂಕಿನ ನಾಲ್ವಡಗಿ ಗ್ರಾಮದ ಹೊಸ ಓಣಿಯಲ್ಲಿ ವಿದ್ಯುತ್ ತಂತಿಗಳು ಇಳಿಬಿದ್ದಿದ್ದು, ಜನ ಮತ್ತು ಜಾನುವಾರುಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಇದನ್ನು ತಕ್ಷಣ ಬದಲಾಯಿಸಬೇಕು ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಹಿಂದೆ ಜೋತು ಬಿದ್ದಿದ್ದ ತಂತಿ ಶಾರ್ಟ್ ಸರ್ಕ್ಯೂಟಿನಿಂದ ಸೊಪ್ಪಿ ಮತ್ತು ಶೇಂಗಾ ಹೊಟ್ಟಿನ ಬಣವೆಗಳು ಭಸ್ಮವಾಗಿದ್ದವು. ಅಲ್ಲದೆ ಟಿಸಿ ಸುತ್ತ ಫೆನ್ಸಿಂಗ್ ಇಲ್ಲದ ಪ್ರಯುಕ್ತ ಎಮ್ಮೆಯೊಂದು ವಿದ್ಯುತ್ ಶಾಕ್ನಿಂದ ಸತ್ತಿತ್ತು. ಗ್ರಾಮಸ್ಥರು ಈಗಾಗಲೇ ಹಲವಾರು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ತಂತಿ ಮಾರ್ಗ ಬದಲಾಯಿಸುವಂತೆ ಮನವಿ ಮಾಡಿದರೂ ಕೂಡ ಸರಿಪಡಿಸಲಿಲ್ಲ. ಮಳೆಗಾಲ ಆರಂಭವಾಗಿದ್ದು, ತಂತಿ ತುಂಡಾಗಿ ಬೀಳುವ ಸಾಧ್ಯತೆಯಿದೆ. ಅವಘಡ ಸಂಭವಿಸುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನೊಂದು ವಾರದೊಳಗೆ ವಿದ್ಯುತ್ ತಂತಿಗಳನ್ನು ಸರಿಪಡಿಸಿ, ಟಿಸಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಫೆನ್ಸಿಂಗ್ ಅಳವಡಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಉಮೇಶ ಮುದ್ನಾಳ ಆಗ್ರಹಿಸಿದ್ದಾರೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

