ಯೋಧ, ರೈತ, ಶಿಕ್ಷಕ ದೇಶದ ದೊಡ್ಡ ಆಸ್ತಿ
ಕನ್ನಡಪ್ರಭ ವಾರ್ತೆ, ಸುರಪುರ, ಜೂ.17
ದೇಶವನ್ನು ಕಾಯುವ ಯೋಧ, ಅನ್ನ ನೀಡುವ ರೈತ ಮತ್ತು ವಿದ್ಯೆ ನೀಡುವ ಶಿಕ್ಷಕ ದೇಶದ ಬಹುದೊಡ್ಡ ಆಸ್ತಿ ಇದ್ದಂತೆ. ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶ ರಕ್ಷಣೆ ಮಾಡುವ ಯೋಧರಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.
ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಸೋಮವಾರ ಹುತಾತ್ಮ ಯೋಧ ಶರಣಬಸವ ಕೆಂಗೂರಿಯ ಪ್ರಥಮ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಿಮ್ಮನ್ನು ಸಮಾಜ ನೆನಪಿಸುವಂತೆ ಬದುಕಿ: ಕೆಲವರು ಇದ್ದೂ ಸತ್ತಂತಿರುತ್ತಾರೆ. ಇನ್ನು ಕೆಲವರು ಸತ್ತು ಇದ್ದವರಾಗಿರುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಶರಣಬಸವ ಇದ್ದವರ ಸಾಲಿನಲ್ಲಿ ಸೇರುತ್ತಾನೆ. ಮುಂದಿನ ದಿನಗಳಲ್ಲಿ ಯೋಧ ಕೆಂಗೂರಿಯ ಸ್ಮಾರಕ ಭವನದೊಂದಿಗೆ ಆತನ ಪ್ರತಿಮೆ ಸ್ಥಾಪಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಯೋಧನ ಹೆಸರಲ್ಲಿ ದತ್ತಿ ಸ್ಮಾರಕನಿಧಿ ಸ್ಥಾಪಿಸಿ: ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ, ದೇಶ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದ ಯೋಧ ಕೆಂಗೂರಿಯ ಹೆಸರು ಚಿರಕಾಲ ಉಳಿಯಬೇಕಾದರೆ ಯೋಧನ ಹೆಸರಿನಿಂದ ಧತ್ತಿ ಸ್ಮಾರಕ ನಿಧಿ ಸ್ಥಾಪಿಸಬೇಕು. ಶಾಲಾ ಕಾಲೇಜಿನ ಪ್ರತಿಭಾವಂತ ಮಕ್ಕಳಿಗೆ ಪ್ರತಿ ವರ್ಷ ಯೋಧನ ಸ್ಮರಣಾರ್ಥವಾಗಿ ಪ್ರತಿಭಾ ಪುರಸ್ಕಾರ ನೀಡಬೇಕು. ಮುಂಬರುವ ದಿನಗಳಲ್ಲಿ ಸಗರ ನಾಡಿನ ಹುತಾತ್ಮ ಯೋಧರ ಪುಣ್ಯಸ್ಮರಣೆಯನ್ನು ಸರ್ಕಾರಿ ಸಹಭಾಗಿತ್ವದಲ್ಲಿ ಆಚರಿಸುವಂತಾಗಬೇಕು ಎಂದು ಪ್ರತಿಪಾದಿಸಿದರು.
ದೇವರಗೋನಾಲದ ಹೈಯಾಳ ಲಿಂಗೇಶ್ವರ ದೇವಸ್ಥಾನದ ಮಾರ್ಥಂಡಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಚಂದಲಾಪುರದ ಯೋಧ ನಿಂಗಣ್ಣ ವಂಟೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ರಾಜೂಗೌಡರ ತಂದೆ ಶಂಬನಗೌಡ ಕೊಡೆಕಲ್, ಎಚ್.ಸಿ. ಪಾಟೀಲ, ಡಾ. ಸಂಗಣ್ಣ ರಾಂಪೂರ, ನಿಂಗಣ್ಣ ಬಾದ್ಯಾಪುರ, ಹುಲಗಮ್ಮ ಪಾಟೀಲ, ರಂಗನಗೌಡ ಪಾಟೀಲ, ಪ್ರಕಾಶ ಅಂಗಡಿ, ಉಲ್ಲಪ್ಪ ಹುಲಕಲ್, ಪಿಎಸ್ಐ ಹನುಮಂತಪ್ಪ ಪಟ್ಟೇದ, ಮಲ್ಲಯ್ಯ ಕಮತಗಿ ಇತರರು ಇದ್ದರು.
ಹುತಾತ್ಮ ಯೋಧರ ಪಾಲಕರಿಗೆ ಗೌರವ: ಇದೇ ವೇಳೆ ತಾಲೂಕಿನ ಯೋಧರಾದ ನಿಂಗಣ್ಣ ವಂಟೂರ್, ಗಂಗಾಧರ ಕರಡಕಲ್ ಹಾಗೂ ಸಗರ ಗ್ರಾಮದ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳರ ಪತ್ನಿ ಮತ್ತು ಕೆಂಗೂರಿ ಹುತಾತ್ಮ ಯೋಧನ ತಂದೆ ತಾಯಿರನ್ನು ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಸುರಪುರದ ಗಾಂಧೀ ವೃತ್ತದಿಂದ ರಂಗಂಪೇಟ ಮಾರ್ಗವಾಗಿ ಕವಡಿಮಟ್ಟಿ ಗ್ರಾಮದವರೆಗೆ ಕನಕ ಯುವಸೇನೆಯ ವತಿಯಿಂದ ಹುತಾತ್ಮ ಯೋಧ ಕೆಂಗೂರಿಯ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಯಲ್ಲಪ್ಪ ಕಮತಗಿ ಸ್ವಾಗತಿಸಿ ಬಸವರಾಜ ನಿರೂಪಿಸಿ ಕೃಷ್ಣಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

