ಗುಲ್ಬರ್ಗಾ

29ರಿಂದ ಮಹಾದೇವಿಯಕ್ಕಗಳ 6ನೇ ಸಮ್ಮೇಳನ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.26
ಶರಣ- ಶರಣೆಯರ ವಿಚಾರಧಾರೆಗಳನ್ನು ತಿಳಿಸಿಕೊಡಲು ಮತ್ತು ಮಹಿಳೆಯರನ್ನು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುವ ಮಹಾದೇವಿಯಕ್ಕಗಳ 6ನೇ ಸಮ್ಮೇಳನವನ್ನು ಜೂ.29, 30ರಂದು ಎರಡು ದಿನಗಳ ಕಾಲ ನಗರದ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಮತ್ತು ಸಂಚಾಲಕಿ ಡಾ. ಜಯಶ್ರೀ ದಂಡೆ ತಿಳಿಸಿದರು.
  ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವ ಸಮಿತಿಯ ಅಕ್ಕನ ಬಳಗದ ನೇತೃತ್ವದಲ್ಲಿ ನಡೆಯುತ್ತಿರುವ 6ನೇ ಮಹಾದೇವಿಯಕ್ಕಗಳ ಸಮ್ಮೇಳನ ಇದಾಗಿದ್ದು, ಎರಡು ದಿನಗಳ ಸಮ್ಮೇಳನದಲ್ಲಿ ಹತ್ತು ವಿಷಯಗಳ ಚಿಂತನ- ಮಂಥನ ನಡೆಯಲಿದೆ ಎಂದರು.
ಶರಣೆ ಕರುಣಾದೇವಿ ಉದ್ಘಾಟನೆ: ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣ ಕಾಯಕ ಜೀವಿಗಳಾಗಿರುವ ಶಾರದಾ ಅರವಿಂದ ಜತ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನವನ್ನು ಶರಣೆ ಕರುಣಾದೇವಿ ಧನ್ನೂರ ಉದ್ಘಾಟಿಸಲಿದ್ದಾರೆ. ಶರಣಮ್ಮ ಜಂಬಗಿ ಅವರು ಷಟಸ್ಥಲ ಧ್ವಜಾರೋಹಣವನ್ನು ಮತ್ತು ಮಹಾದೇವಿಯಕ್ಕಗಳ ಭಾವಚಿತ್ರಗಳ ಮೆರವಣಿಗೆಗೆ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡುವರು ಎಂದರು.
  ಉದ್ಘಾಟನೆ ನಂತರ ಮ.12ಕ್ಕೆ ಪ್ರೊ. ನಿಂಗಮ್ಮ ಪತಂಗೆ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ನಡೆಯಲಿದೆ. ಗೀತಾ ಪಾಟೀಲ್, ಶೈಲಜಾ ಲಠ್ಠೆ, ಭಾರತಿ ಸಾಲಿಮಠ ಅವರು ಶರಣೆಯರ ಕುರಿತು ಉಪನ್ಯಾಸ ನೀಡುವರು. ವಿಶೇಷ ಉಪನ್ಯಾಸದಲ್ಲಿ ಮಹಿಳಾ ಸ್ವಾವಲಂಬನೆ ಕುರಿತು ಬೆಂಗಳೂರಿನ ಭುವನೇಶ್ವರಿ, ಮಹಿಳಾ ಕಾನೂನು ಬಗ್ಗೆ ಶಕುಂತಲಾ ಬೆಲ್ದಾಳ ಮಾತನಾಡುವರು. ನಂತರ ಜನಪದ ಹಾಡು ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
ಅನುಭಾವಗೋಷ್ಠಿ: ಜೂ.30ರಂದು ಬೆ.10ಕ್ಕೆ ಅನುಭಾವಗೋಷ್ಠಿಯಲ್ಲಿ ಚಿತ್ಕಳಾ ಮಠಪತಿ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಕಾಯಕ ಕುರಿತು ಡಾ. ಶಾರದಾ ಜಾಧವ, ದಾಸೋಹ ಬಗ್ಗೆ ಡಾ. ಅಮೃತಾ ಕಟ್ಕೆ, ನಂತರ ಡಾ. ಆರುಂಧತಿ ಪಾಟೀಲ್ ಮಹಿಳಾ ಆರೋಗ್ಯ ಮತ್ತು ಮನೆ ಮದ್ದು ಕುರಿತು ಡಾ. ನಿರ್ಮಲಾ ಕೆಳಮನಿ ಉಪನ್ಯಾಸ ನೀಡಲಿದ್ದಾರೆ.
  ಮಂಗಲ ಹರಹುದಲ್ಲಿ(ಸಮಾರೋಪ) ಸೊಲ್ಲಾಪುರದ ಸಿಂಧುತಾಯಿ ಕಾಡಾದಿ ಅನುಭಾವ ನೀಡುವರು. ಅಧ್ಯಕ್ಷತೆಯನ್ನು ಶಾರದಾ ಜತ್ತಿ ವಹಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಭಾವತಿ ಧರ್ಮಸಿಂಗ್, ರಾಧಾಬಾಯಿ ಖರ್ಗೆ, ಭಾರತಿ ಧರ್ಶನಾಪುರ, ಬಸಲಿಂಗಮ್ಮ ಪಾಟೀಲ್, ಭಾಗ್ಯಶ್ರೀ ಪಾಟೀಲ್, ಪ್ರೇಮಲತಾ ಪಾಟೀಲ್, ಮಹಾದೇವಿ ಉಪ್ಪಿನ, ಲಕ್ಷ್ಮೀಬಾಯಿ ಸುಲ್ತಾನಪುರ, ಕಸ್ತೂರಿ ಮೇಳಕುಂದಿ, ಸರಸ್ವತಿ ಮಾಲೆ ಮೊದಲಾದವರನ್ನು ಗೌರವಿಸಲಾಗುವುದೆಂದು ವಿಲಾಸವತಿ ಖೂಬಾ ವಿವರಿಸಿದರು.
  ಸುದ್ದಿಗೋಷ್ಠಿಯಲ್ಲಿ ಡಾ. ಸುಜಾತಾ ಪಾಟೀಲ್, ಸುನೀತಾ ರಾಜೇಂದ್ರ, ಸುವರ್ಣ, ತನುಜಾ ಪ್ರವೀಣ, ಡಾ. ಶಕುಂತಲಾ ದುರ್ಗಿ, ಅನುಸೂಯ ನಡಕೆಟ್ಟಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.