ಅಕ್ರಮ ಮರಳು ದಾಸ್ತಾನು ಮೇಲೆ ದಾಳಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜೂ.28
ಗುಲ್ಬರ್ಗ- ಸೇಡಂ ರಸ್ತೆಯಲ್ಲಿನ ಇಎಸ್ಐಸಿ ಆಸ್ಪತ್ರೆ ಮುಂದಿನ ಬಯಲಲ್ಲಿ ಸಂಗ್ರಹಿಸಲಾಗಿದ್ದ ನೂರಾರು ಮೆಟ್ರಿಕ್ ಟನ್ ಮರಳನ್ನು ಜಿಲ್ಲಾಡಳಿತದ ಅಧಿಕಾರಿಗಳ ತಂಡ ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ.
ಗುಲ್ಬರ್ಗ ಉಪ ವಿಭಾಗೀಯ ಸಹಾಯಕ ಆಯುಕ್ತ ಹರ್ಷ ಶೆಟ್ಟಿ, ಗುಲ್ಬರ್ಗ ತಹಸೀಲ್ದಾರ್ ವಿನೋದ ರೆಡ್ಡಿ, ಪಿಡಬ್ಲ್ಯುಡಿ ಎಂಜಿನಿಯರ್ ಮುಸ್ತಾಕ್, ವಿಶ್ವವಿದ್ಯಾಲಯ ಪೊಲೀಸ್ ಅಧಿಕಾರಿ ಪ್ರದೀಪ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜೆಸಿಬಿ ಹಾಗೂ ಟಿಪ್ಪರ್, ಲಾರಿಗಳ ಸಮೇತ ಮರಳು ದಾಸ್ತಾನು ಇರುವ ಸ್ಥಳಕ್ಕೆ ಹೋಗಿ ಅದನ್ನು ಅಲ್ಲಿಂದ ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಉದ್ವಿಗ್ನ ವಾತಾವರಣ: ಮರಳು ಸಾಗಣೆಯಲ್ಲಿ ತೊಡಗಿರುವ ಲಾರಿ- ಟಿಪ್ಪರ್ ಮಾಲೀಕರು ಹಾಗೂ ಕಾರ್ಮಿಕರು ಜಮಾಯಿಸಿ ಮರಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ, ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಮುಂದಾದ ಕಾರ್ಮಿಕರು ಹಾಗೂ ಲಾರಿ- ಟಿಪ್ಪರ್ ಮಾಲೀಕರು, ತಾವು 2 ವರ್ಷಗಳ ಹಿಂದೆಯೇ ರಾಯಲ್ಟಿ ತುಂಬಿದ್ದು ಆ ಮರಳು ಇದಾಗಿದೆ ಎಂದು ವಾದ ಮಂಡಿಸಿದ ರು.
ಲಘು ಲಾಠಿ ಪ್ರಹಾರ: ಅಧಿಕಾರಿಗಳು ಇಂತಹ ಯಾವ ವಾದಗಳಿಗೂ ಸೊಪ್ಪು ಹಾಕದೆ ಮರಳು ವಶಪಡಿಸಿಕೊಂಡರು. ಅಲ್ಲಿಂದ ತಮ್ಮ ಮರಳು ದಾಸ್ತಾನು ಸ್ಥಳಕ್ಕೆ ಅದನ್ನು ಸಾಗಿಸಲು ಮುಂದಾದಾಗ ಕೆಲವರು ಕಿಡಿಗೇಡಿಗಳು ಜಿಲ್ಲಾಡಳಿತ ವಶಪಡಿಸಿಕೊಂಡ ಜೆಸಿಬಿ ಹಾಗೂ ಟಿಪ್ಪರ್ಗಳ ಮೇಲೆ ಕಲ್ಲು ತೂರಿದರು.
ಪರಿಸ್ಥಿತಿ ಕೈ ಮೀರುವ ಲಕ್ಷಣ ಅರಿತ ಅಧಿಕಾರಿಗಳ ತಂಡ ಪೊಲೀಸ್ ನೆರವು ಕೋರಿತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಅಲ್ಲಿ ಸೇರಿದ್ದ ನೂರಾರು ಕಾರ್ಮಿಕರು ಹಾಗೂ ವಾಹನ ಮಾಲೀಕರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದರು. ಪ್ರತಿಭಟನೆಗೆ ಮುಂದಾದವರ ಪೈಕಿ ಕಲ್ಲು ತೂರಿದರು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳದಲ್ಲೇ ನಾಲ್ವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರಿ ಯಾರ್ಡ್ಗೆ ಸ್ಥಳಾಂತರ: ಮರಳು ಅಕ್ರಮವಲ್ಲ, ರಾಯಲ್ಟಿ ತುಂಬಿ ಇಲ್ಲಿ ಸಂಗ್ರಹಿಸಲಾಗಿದೆ ಎಂದು ಅಲ್ಲಿದ್ದ ಕೆಲವರು ಮಂಡಿಸಿದ್ದ ವಾದಗಳಿಗೆ ಅಧಿಕಾರಿಗಳು ಯಾವ ಬೆಲೆ ನೀಡಲಿಲ್ಲ. 'ಇಂತಹ ಆಧಾರ ರಹಿತ ಮಾತುಗಳನ್ನಾಡದೆ ದಾಖಲೆಗಳ ಸಮೇತ ಚರ್ಚೆಗೆ ಬನ್ನಿ' ಎಂಬ ಅಧಿಕಾರಿಗಳ ಆಹ್ವಾನಕ್ಕೆ ಅಲ್ಲಿದ್ದ ಯಾರೂ ದಾಖಲೆ ಪ್ರದರ್ಶನಕ್ಕೆ ಮುಂದೆ ಬರಲೇ ಇಲ್ಲ ಎಂದು 'ಕನ್ನಡಪ್ರಭ' ಜೊತೆ ಮಾತನಾಡುತ್ತ ಗುಲ್ಬರ್ಗ ತಹಸೀಲ್ದಾರ್ ವಿನೋದ ರೆಡ್ಡಿ ಹೇಳಿದ್ದಾರೆ.
ಸ್ಥಳೀಯವಾಗಿ ಒಬ್ಬರು ತಮ್ಮ ನಿವೇಶನದ ಮುಂದೆಯೇ ಮರಳು ದಾಸ್ತಾನು ಮಾಡಿದ್ದಾಗಿ ಹೇಳಿ ಸಂಬಂಧಿತ ದಾಖಲೆಗಳನ್ನು ತೋರಿಸಿದ್ದರಿಂದ ಅವರ ದಾಸ್ತಾನು ನಾವು ಮುಟ್ಟುಗೋಲು ಹಾಕಿಕೊಂಡಿಲ್ಲ. ಉಳಿದಂತೆ ಅಲ್ಲಿ ರಾಶಿ ಹಾಕಲಾಗಿರುವ ಎಲ್ಲಾ ಮರಳನ್ನು ಬುದ್ಧ ವಿಹಾರ ಬಳಿ 5 ಎಕರೆ ಭೂಮಿಯಲ್ಲಿ ದಾಸ್ತಾನು ಮಾಡಲಾಗುತ್ತದೆ ಎಂದು ತಹಸೀಲ್ದಾರ್ ವಿನೋದ ರೆಡ್ಡಿ ಹೇಳಿದ್ದಾರೆ.
ಸೇಡಂ ರಸ್ತೆಯಲ್ಲಿ ಸಂಗ್ರಹಿತವಾಗಿದ್ದ ಮರಳು ರಾಶಿ ಅಕ್ರಮ. ಇದರಲ್ಲಿ ಯಾವುದೇ ಶಂಕೆ ಇಲ್ಲ. ಮರಳು ನೀತಿಯ ಅನ್ವಯ ಯಾರೂ ಹೀಗೆ ಮರಳನ್ನು ಸಂಗ್ರಹಿಸುವಂತೆಯೇ ಇಲ್ಲ. ಸಾಗಣೆದಾರರು ಅಪಾರ ಪ್ರಮಾಣದಲ್ಲಿ ಮರಳು ಸಂಗ್ರಹಿಸಿದ್ದಾರೆ. ಇದು ಅಕ್ರಮ ದಾಸ್ತಾನು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಹಸೀಲ್ದಾರ್ ವಿನೋದ ರೆಡ್ಡಿ ತಿಳಿಸಿದ್ದಾರೆ.
ಅಕ್ರಮ ಮರಳು ರಾಶಿಯನ್ನು ಸರ್ಕಾರದ ಯಾರ್ಡ್ಗೆ ಸಾಗಿಸಲಾಗುತ್ತದೆ. ಸಾರ್ವಜನಿಕರು ತಮಗೆ ಮರಳು ಬೇಕಾದಲ್ಲಿ ತಮ್ಮ ಅಗತ್ಯತೆ ಬಗ್ಗೆ ಮಾಹಿತಿ ನೀಡಿ ಯಾರ್ಡ್ನಿಂದ ನೇರವಾಗಿ ಮರಳನ್ನು ಸರ್ಕಾರ ನಿಗದಿಪಡಿಸುವ ಬೆಲೆಗೆ ತಕ್ಕಂತೆ ಪಡೆಯಬಹುದಾಗಿದೆ ಎಂದೂ ತಹಸೀಲ್ದಾರ್ ಹೇಳಿದ್ದಾರೆ.
ಮರಳು ನಮ್ಮದು; ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ
ಮರಳು ದಾಸ್ತಾನು ಮಾಡಿರುವ ವರ್ತಕರು, ಲಾರಿ ಸಾಗಣೆದಾರರು ಸ್ಥಳಕ್ಕೆ ಭೇಟಿ ನೀಡಿದ್ದ 'ಕನ್ನಡಪ್ರಭ' ಜೊತೆ ಮಾತನಾಡುತ್ತ, ಮರಳು ನಮ್ಮದು. ನಾವು ದಶಕದಿಂದ ಇಲ್ಲಿ ಸಂಗ್ರಹಿಸಿ ಮಾರಾಟ ಮಾಡುತ್ತೇವೆ. ನಮಗೆ ಯಾವುದೇ ಸೂಚನೆ ನೀಡದೆ ಜಿಲ್ಲಾಡಳಿತ ಹೀಗೆ ಕ್ರಮಕ್ಕೆ ಮುಂದಾಗಿರುವುದು ಅನ್ಯಾಯ. ನಮಗೆ ಲಿಖಿತ ಸೂಚನೆ ಬಂದಿಲ್ಲ. ನಾವೇ ರಾಯಲ್ಟಿ ಕೊಟ್ಟು ಮರಳು ಇಲ್ಲಿಂದ ಖಾಲಿ ಮಾಡುತ್ತೇವೆ ಎಂದರೂ ಕೇಳುತ್ತಿಲ್ಲ. ಈ ತಪ್ಪು ಪುನರಾವರ್ತನೆಯಾಗದು ಎಂದು ಹೇಳಿದರೂ ಯಾರೂ ಕೇಳುತ್ತಿಲ್ಲ. ನಾವು ಜಿಲ್ಲಾಡಳಿತದ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಚಿಂತನೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

