ಚಿತ್ತಾಪುರ ಪುರಸಭೆಯಲ್ಲಿ ರಾಜಕೀಯ ರಂಗು
ಕನ್ನಡಪ್ರಭ ವಾರ್ತೆ, ಚಿತ್ತಾಪುರ, ಮಾ.5
ಚಿತ್ತಾಪುರ ಪುರಸಭೆ 23 ಸ್ಥಾನಗಳ ಚುನಾವಣೆ ರಂಗೇರಿದೆ. ಮಾ. 7ರಂದು ಮತದಾನ. ಪ್ರಮುಖ ರಾಜಕೀಯ ಪಕ್ಷಗಳ ಪರವಾಗಿ ಹೆಸರಾಂತ ನಾಯಕರೇ ಚಿತ್ತಾಪುರ ಸುತ್ತಾಡಿ ಮತದಾರ ಪ್ರಭುವಿನ ಬಾಗಿಲು ಬಡಿದದ್ದು ಈ ಬಾರಿಯ ವಿಶೇಷ.
ಕಳೆದ ಬಾರಿಯ ಮೀಸಲಾತಿಯಂತೆ ಚುನಾವಣಿ ನಡೆಯುತ್ತಿರುವುದರಿಂದ ಕೆಲ ಹಾಲಿ ಸದಸ್ಯರು ಮತ್ತೆ ಹಳೇ ವಾರ್ಡ್ಗಳಿಂದ ವಿಭಿನ್ನ ಪಕ್ಷ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್ನಿಂದ ಚುನಾಯಿತರಾಗಿ ಅಧ್ಯಕ್ಷರಾಗಿ ನಂತರ ಕಾಂಗ್ರೆಸ್ಗೆ ಸೇರ್ಪಡೆಗೊಂಡ ನಾಗರಾಜ ಬಂಕಲಗಾ ಈ ಬಾರಿ ಟಿಕೇಟ್ ವಂಚಿತರಾದರು. ವಾರ್ಡ್ ನಂ. 17ರಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ. ವಾರ್ಡ್ ನಂ. 23ರಲ್ಲಿ ಜೆಡಿಎಸ್ ನಿಂದ ಚುನಾಯಿತರಾಗಿದ್ದ ಮಧುಮತಿ ಕೋಟ್ರಕಿ ಈ ಬಾರಿ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಬಾಬು ನಾಗಾವಿ ವಾರ್ಡ್ 20ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ, ಜೆಡಿಎಸ್, ಕೆಜೆಪಿ ಎಲ್ಲಾ 23 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿರುವುದರಿಂದ ಕಣ ರಂಗೆರುವಂತೆ ಮಾಡಿದೆ.
ಕೆಲ ಅಭ್ಯರ್ಥಿಗಳು ಮತದಾರರ ಪಟ್ಟಿಯನ್ನು ಹಿಡಿದು ತಮ್ಮ ವಾರ್ಡ್ಗಳಲ್ಲಿ ಜಾತಿವಾರು ಮತಗಳ ಬಗ್ಗೆ ಲೆಕ್ಕಾಚಾರ ನಡೆಸಿದ್ದಾರೆ. ತಮಗೆ ಸಿಗಬಹುದಾದ ಮತಗಳೆಷ್ಟು, ಪಕ್ಷದ ಕಡೆಯಿಂದ ದೊರಕುವ ಮತಗಳೆಷ್ಟು ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ಜೊತೆಗೆ ವಾರ್ಡ್ ಬಿಟ್ಟು ಹಾಗೂ ದೂರದ ಊರುಗಳಲ್ಲಿರುವ ಮತದಾರರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮಗೆ ಮತ ಹಾಕಬೇಕೆಂದು ಅಂಗಲಾಚುತ್ತಿದ್ದಾರೆ.
ಒಟ್ಟಾರೆ ಎಲ್ಲಾ ರಾಜಕೀಯ ಪಕ್ಷಗಳ ಮುಂದಿನ ವಿಧಾನಸಭೆಯ ಚುನಾವಣೆಯ ದಿಕ್ಕನ್ನು ತೋರಿಸುವ ಚುನಾವಣೆ ಇದಾಗಿದ್ದು, ಶತಾಯ ಗತಾಯ ಗೆಲ್ಲುವ ನಿಟ್ಟಿನಲ್ಲಿ ತಂತ್ರ ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹುಮ್ಮಸ್ಸಿನಲ್ಲಿ ಪ್ರಚಾರ ಕೈಗೊಂಡಿವೆ. ಜಿದ್ದಾಜಿದ್ದಿನ ಪುರಸಭೆ ಚುನಾವಣೆ ಅಖಾಡ ಯಾವ ಪಕ್ಷದವರು ಅಧಿಕಾರದ ಗದ್ದುಗೆ ಹಿಡಿಯುವರು ಎಂಬುದು ಮಾ.7ರಂದು ನಡೆಯವ ಮತದಾನದ ಪೆಟ್ಟಿಗೆಯೊಳಗೆ ಗುಟ್ಟಾಗಿ ಉಳಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

