ಗುಲ್ಬರ್ಗಾ

ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮಾ.7
ಜಿಲ್ಲೆಯಲ್ಲಿರುವ 1 ಮಹಾನಗರ ಪಾಲಿಕೆ, 1 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿ ಸೇರಿದಂತೆ ಇರುವ 8 ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ.65 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎನ್.ಎಸ್. ಪ್ರಸನ್ನಕುಮಾರ್ ತಿಳಿಸಿದ್ದಾರೆ.
  ಬೆಳಗ್ಗೆ 7ರಿಂದಲೇ ಆರಂಭವಾದ ಮತದಾನ 10 ಗಂಟೆ ನಂತರ ಚುರುಕು ಪಡೆಯಿತು. ಮತ್ತೆ ಬಿರು ಬಿಸಿಲಲ್ಲಿ ಅಲ್ಪ ತಗ್ಗಿತ್ತು. ಮತ್ತೆ 3 ಗಂಟೆ ಬಳಿಕ ಚುರುಕು ಪಡೆದು ಶೇ.65ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು.
  ಅಂಗವಿಕಲರು ಮತ್ತು ವಯೋವೃದ್ಧ ಮತದಾರರು ತಮ್ಮ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಗುಲ್ಬರ್ಗ ಮಹಾನಗರ ಪಾಲಿಕೆ ವಾರ್ಡ್ 45ರ ಸುಂದರನಗರಲ್ಲಿ ನಡೆದ ಹೊಡೆದಾಟರ ಪ್ರಸಂಗ ಹೊರತುಪಡಿಸಿ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತದಾನದ ವಿವರ...
1. ಗುಲ್ಬರ್ಗ ಮಹಾನಗರ ಪಾಲಿಕೆ- ಶೇ.60ರಿಂದ 65 (ಪ್ರಾಥಮಿಕ ಮಾಹಿತಿ ಪ್ರಕಾರ)
2. ಶಹಾಬಾದ್ ನಗರಸಭೆ- ಶೇ. 63
3. ಚಿತ್ತಾಪುರ ಪುರಸಭೆ- ಶೇ. 62
4. ಸೇಡಂ ಪುರಸಭೆ- ಶೇ. 71
5. ಆಳಂದ ಪುರಸಭೆ- ಶೇ. 69
6. ಚಿಂಚೋಳಿ ಪಪಂ- ಶೇ. 66
7. ಚಿತ್ತಾಪುರ ಪಪಂ- ಶೇ. 62
8. ಜೇವರ್ಗಿ ಪಪಂ- ಶೇ. 71
ಗುಲ್ಬರ್ಗ ಮಹಾನಗರ ಪಾಲಿಕೆ ಇನ್ನೂ 17 ಮತಗಟ್ಟೆಗಳ ಶೇಕಡಾವಾರು ಫಲಿತಾಂಶದ ಲೆಕ್ಕಾಚಾರ ಸಾಗಿದೆ. ಹೀಗಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ನಿಖರ ಫಲಿತಾಂಶದ ವಿವರ ಇನ್ನೂ ದೊರಕಿಲ್ಲ.
ಪಾಲಿಕೆ: ಶೇ.60ರಿಂದ 65 ಮತದಾನ
ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಗುರುವಾರ 55 ವಾರ್ಡ್‌ಗಳಿಗೆ ನಡೆದ ಮತದಾನ ಸುಂದರ ನಗರದ ಪೊಲೀಸ್- ಬಿಜೆಪಿ ಅಭ್ಯರ್ಥಿ ಕಾದಾಟದ ಘಟನೆಯೊಂದನ್ನು ಹೊರತುಪಡಿಸಿದಲ್ಲಿ ಶಾಂತಿಯಿಂದ ಕೂಡಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ಗುಲ್ಬರ್ಗ ಮಹಾನಗರದಲ್ಲಿ ಶೇ. 60 ರಿಂದ 65 ರಷ್ಟು ಮತದಾನವಾಗಿದೆ. ಅಹಿತಕರ ಘಟನೆ ತಪ್ಪಿಸಲು ಮುಂಜಾಗ್ರತೆ ಕ್ರಮವಾಗಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಸೇಡಂ ಪುರಸಭೆ: ಶೇ.71.36
ಇಲ್ಲಿನ ಪುರಸಭೆಯ 23 ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ಜರುಗಿತು. ವಾರ್ಡ್ ನಂ.3 ಪಟೇಲಗಲ್ಲಿಯಲ್ಲಿ ಅತಿಹೆಚ್ಚು ಅಂದರೆ ಶೇ. 80.98 ಮತದಾನವಾಗಿದ್ದು, ವಾರ್ಡ್ ನಂ. 11 ಕಿರಾಣಾ ಬಜಾರನಲ್ಲಿ ಅತೀ ಕಡಿಮೆ ಮತದಾನ ಅಂದರೆ ಶೇ. 58. 08 ಮತದಾನವಾಗಿದೆ.
  ಬಿಸಿಲನ್ನು ಲೆಕ್ಕಿಸದೇ ಜನರು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು. ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಸೇಡಂ ಸಹಾಯಕ ಆಯುಕ್ತರ ನೇತೃತ್ವದ ತಂಡ ಪ್ರತಿ ವಾರ್ಡಿನಲ್ಲಿ ತೀವ್ರ ನಿಗಾ ವಹಿಸಿ ಶಾಂತಿಯುತ ಮತದಾನಕ್ಕೆ ಕಾರಣರಾದರು.
 ವಾರ್ಡ್ ನಂ.13,  18ರಲ್ಲಿ ಮಧ್ಯಾಹ್ನದ ನಂತರ ರಾಜಕೀಯ ನಾಯಕರು ಜಮಾಯಿಸಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದಾಗ ಈ ತಂಡ ಅಲ್ಲಿಗೆ ದೌಡಾಯಿಸಿ, ನಾಯಕರನ್ನು ಅಲ್ಲಿಂದ ಕಳುಹಿಸಿತು. ನಗರದ ಒಟ್ಟು 23,688 ಮತದಾರರ ಪೈಕಿ 16,667 ಮತದಾರರು ಮತ ಹಾಕಿದ್ದಾರೆಂದು ತಹಸೀಲ್ದಾರ್ ಪ್ರಕಾಶ ಕುದುರೆ ತಿಳಿಸಿದ್ದಾರೆ.
ಅಫಜಲ್ಪುರ: ಶೇ. 67.29 ಮತದಾನ
ಪಟ್ಟಣ ಪಂಚಾಯ್ತಿ ಚುನಾವಣೆಗೆ ಗುರುವಾರ ನಡೆದ ಮತದಾನ ಶಾಂತಿಯಿಂದ ಕೂಡಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 18, 348 ಮತದಾರರ ಪೈಕಿ 12, 346 ಮತದಾರರು ಮತ ಚಲಾಯಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಚಿಂಚೋಳಿ: ಶೇ.65.52
ಚಿಂಚೋಳಿ: ಸ್ಥಳೀಯ ಪಟ್ಟಣ ಪಂಚಾಯತಿ 18 ವಾರ್ಡ್‌ಗಳಿಗೆ ಗುರುವಾರ ನಡೆದ ಚುನಾವಣೆ ಶಾಂತಿಯುತವಾಗಿ ಮತದಾನ ನಡೆದಿದ್ದು ಶೇ. 65.52 ಮತದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಚುನಾವಣಾಧಿಕಾರಿಗಳಾದ ಮಲ್ಲಿಕಾರ್ಜುನ ಪಾಲಾಮೂರ ಮತ್ತು ಜರ್ನಾಧನರೆಡ್ಡಿ ತಿಳಿಸಿದ್ದಾರೆ. ಪಟ್ಟಣ ಪಂಚಾಯತಿಯಲ್ಲಿ ಒಟ್ಟು ಮತದಾರರಾದ 12,511 ರಲ್ಲಿ ಪುರುಷರು- 4, 235 ಮತ್ತು ಮಹಿಳೆಯರು- 3, 962 ಮತ ಚಲಾಯಿಸಿದ್ದಾರೆ. ವಿವರ ಕೆಳಗಿನಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.