ಗುಲ್ಬರ್ಗಾ

ಅಪರೂಪದ ಗವಿ ವರ್ಣಚಿತ್ರಗಳ ಪತ್ತೆ

Published On :

ಯಾದಗಿರಿ: ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ಅಪರೂಪದ ಪ್ರಾಗೈತಿಹಾಸಿಕ ಕಾಲದ ವರ್ಣಚಿತ್ರಗುಳ್ಳ ಬಂಡೆಯೊಂದು ಪತ್ತೆಯಾಗಿದೆ.
ಇಲ್ಲಿಯ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಪಾಟೀಲ ಬಸನಗೌಡ ಈ ಬಗ್ಗೆ ತಿಳಿಸಿ, ತಾಲೂಕಿನ ವರ್ಕನಳ್ಳಿ ಗ್ರಾಮದಲ್ಲಿ ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಹೊರವಲಯದ ಬೆಟ್ಟದ ಹತ್ತಿರವಿರುವ ರಕ್ತಗುಂಡ ಎಂದು ಕರೆಯುವ ಹೆಬ್ಬಂಡೆಯ ಮೇಲೆ ಕೆಮ್ಮಣ್ಣಿನ ಚಿತ್ರಗಳುಳ್ಳ ಒಂದು ಹೆಬ್ಬಂಡೆ ಪತ್ತೆಯಾಗಿದೆ.
ಇದರ ಹಿನ್ನಲೆ ಸಂಗ್ರಹಿಸಲು ಪ್ರಾಕ್ತನ ತಜ್ಞ ಎ.ಸುಂದರ ಅವರನ್ನು ಸಂಪರ್ಕಿಸಿದಾಗ, ಈ ವರ್ಣಚಿತ್ರಗಳು ನಮಗೆ ತಿಳಿದ ಮಟ್ಟಿಗೆ ರಾಜ್ಯದಲ್ಲಿ ಎಲ್ಲಿಯೂ ದೊರೆತಿಲ್ಲ. ಈ ಚಿತ್ರಗಳಲ್ಲಿನ ಮನುಷ್ಯ ಹಾಗೂ ಪ್ರಾಣಿಗಳ ರೇಖೆಗಳು ಸ್ಪಷ್ಟವಾಗಿ ಗುರ್ತಿಸಲು ಸುಲಭ ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಗವಿ ವರ್ಣಚಿತ್ರಗಳು: ಈ ಭಾಗದಲ್ಲಿ ಹೈದರಾಬಾದ್ ಸರ್ಕಾರವಿದ್ದಾಗ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಾಲೂಕಿನ ಬಳಿಚಕ್ರದ ಬಳಿ ವರ್ಣಚಿತ್ರಗಳುಳ್ಳ ಕಲ್ಲಿನ ಬಂಡೆಗಳನ್ನು ಶೋಧಿಸಿದ್ದರು.
ಅದರಲ್ಲಿ ಕೂಡ ಹಲವಾರು ಮನುಷ್ಯ ಹಾಗೂ ಪ್ರಾಣಿಗಳ ರೇಖಾಚಿತ್ರಗಳಿದ್ದವು. ಉತ್ತರ ಕರ್ನಾಟಕದಲ್ಲಿ ಶೋಧಿಸಿದ ನೂರಾರು ಗವಿ ವರ್ಣಚಿತ್ರಗಳು ಈ ಪ್ರಕಾರದಲ್ಲಿವೆ.  
ಆದರೆ ವರ್ಕನಳ್ಳಿಯಲ್ಲಿ ದೊರೆತ ವರ್ಣಚಿತ್ರಗಳು ವಿವಿಧ ಕಾಲದವು ಮತ್ತು ಉತ್ತರ ಕರ್ನಾಟಕದಲ್ಲಿ ದೊರೆತಿರುವ ವರ್ಣಚಿತ್ರಗಳಿಂತ ಭಿನ್ನವಾಗಿವೆ. ಕಲ್ಲಿನ ಮೇಲೆ ವಿಶಾಲವಾಗಿ ಬಿಡಿಸಿದ ಈ ಚಿತ್ರಗಳು ಸುಂದರವಾಗಿವೆ. ರೇಖೆಗಳ ಮೇಲೆ ಚಿತ್ರಕಾರನ ಕೈಹಿಡಿತವನ್ನು ಗಮನಿಸಿದರೆ ಇದು 4ನೇ ಶತಮಾನದ ಶಂಖಲಿಪಿಯ ಬರಹವಿರಬಹುದು ಎಂಬ ಅನುಮಾನ ಮೂಡುತ್ತಿದೆ. ಜೊತೆಗೆ ಈ ಚಿತ್ರಗಳಲ್ಲಿ ಒಂದೆಡೆ ಗುಬ್ಬಿ ಇನ್ನೊಂದೆಡೆ ಮೀನಿನಾಕೃತಿಗಳನ್ನು ಗುರ್ತಿಸಬಹುದಾಗಿದೆ.
 ಶಂಖಲಿಪಿ ಬರವಣಿಗೆ ಇಲ್ಲದಿದ್ದಲ್ಲಿ ಇದೊಂದು ಪ್ರಾಗೈತಿಹಾಸ ಕಾಲದ ಅಪರೂಪದ ವರ್ಣಚಿತ್ರಗಳೆಂದು ಹೇಳಬಹುದು ಎಂದು ಮಾಹಿತಿ ನೀಡಿದ್ದಾರೆ.   
ಮಾಹಿತಿ: ಮೂರು ತೆರನಾಗಿರುವ ಹೆಬ್ಬಂಡೆಯಲ್ಲಿ ಮಧ್ಯ ಭಾಗದ ಬಂಡೆಯ ಮೇಲೆ ಈ ವರ್ಣಚಿತ್ರಗಳನ್ನು ಚಿತ್ರಿಸಲಾಗಿದೆ. ತಾಲೂಕಿನ ಇನ್ನೂ ಹಲವೆಡೆ ಇಂತಹ ವರ್ಣಚಿತ್ರಗಳುಳ್ಳ ಬಂಡೆಗಳಿರುವ ಮಾಹಿತಿ ಸಿಕ್ಕಿದೆ. ಅದನ್ನು ಖಚಿತಪಡಿಸಿಕೊಳ್ಳಲು ಕ್ಷೇತ್ರ ಕಾರ್ಯ ನಡೆಸುವ ಅಗತ್ಯ ಇದ್ದು, ಪುರಾತತ್ವ ಇಲಾಖೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕ್ಷೇತ್ರ ಕಾರ್ಯ ನಡೆಸಬೇಕೆಂದು ಪಾಟೀಲ್ ಬಸನಗೌಡ ಮನವಿ ಮಾಡಿದ್ದಾರೆ.
ಕ್ಷೇತ್ರ ಕಾರ್ಯದಲ್ಲಿ ದೀಪಕ ಹಬೀಬ್, ವಿಜಯಕುಮಾರ ಅವರು ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.