ಗುಲ್ಬರ್ಗಾ

ಸುದ್ದಿ ಸಂಕ್ಷೇಪ

Published On :

ಇಂದು ಜಲ ದಿನ
ಗುಲ್ಬರ್ಗ:
ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ಸಮಗ್ರ ಅಭಿವೃದ್ಧಿ ಅಧ್ಯಯನ ಕೇಂದ್ರ(ಸಮುತ್ಥಾನ) ಸಂಯುಕ್ತಾಶ್ರಯದಲ್ಲಿ ಮಾ.22ರಂದು ಬೆಳಗ್ಗೆ 11 ಗಂಟೆಗೆ ವಿಶ್ವ ಜಲ ದಿನಾಚರಣೆ ಆಚರಿಸಲಾಗುತ್ತಿದೆ. ನಗರದ ತ್ಯಾಜ್ಯ ನೀರಿನ ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರಿನ ಮೇಲಾಗುವ ಪರಿಣಾಮ ಮತ್ತು ಪರಿಹಾರೋಪಾಯ ಎಂಬ ವಿಷಯದ ಕುರಿತು ಸಮುದಾಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ವಿಷಯಗಳ ಕುರಿತು ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

ಇಂದು ಸಮಾರೋಪ
ಗುಲ್ಬರ್ಗ:
ಶರಣಬಸವೇಶ್ವರ ವಿದ್ಯಾಸಂಸ್ಥೆಯ ಸೈನ್ಸ್ ಅಕಾಡೆಮಿ 2012- 2013 ಮತ್ತು ಕ್ರೀಡಾ ದಿನದ ಸಮಾರೋಪ ಸಮಾರಂಭವು ಮಾ.22ರಂದು ಮಧ್ಯಾಹ್ನ 12.30 ಗಂಟೆಗೆ ಸಂಸ್ಥೆಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆಯಲಿದೆ.ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಡಾ. ದಯಾನಂದ ಅಗಸರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಡಾ. ಶರಣಬಸಪ್ಪ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ

ನಾಳೆ ನೀರು ವ್ಯತ್ಯಯ
ಗುಲ್ಬರ್ಗ:
ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ 600 ಎಂಎಂ ವ್ಯಾಸದ ಗುರುತ್ವ ಕೊಳವೆ ಮಾರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದ್ದು, ತುರ್ತಾಗಿ ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಆದ ಕಾರಣ ಮಾ.23ರಂದು ಶಹಾಬಜಾರ ಟ್ಯಾಂಕ್, ಮೋಮಿನ್‌ಪುರ ಟ್ಯಾಂಕ್, ಸುಪರ್ ಮಾರ್ಕೆಟ್ ಟ್ಯಾಂಕ್, ಡಿಸಿ ಟ್ಯಾಂಕ್ ಜಗತ್, ಪೊಲೀಸ್ ಕಾಲೋನಿ ಟ್ಯಾಂಕ್, ಡಿವಿಸಿ ಟ್ಯಾಂಕ್ ಐವಾನ-ಇ-ಶಾಹಿ ಹಾಗೂ ಎಚ್‌ಎಸ್‌ಆರ್ ಟ್ಯಾಂಕ್‌ಗಳ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಗುಲ್ಬರ್ಗ ವಿಭಾಗದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಅಮಾನತಿಗೆ ಆಗ್ರಹ
ಗುಲ್ಬರ್ಗ:
ಹಣ ಪಡೆದು ಸುಳ್ಳು ಸೇವಾ ಪ್ರಮಾಣ ಪತ್ರ ನೀಡಿ ಆರೋಪ ಎದುರಿಸುತ್ತಿರುವ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೈ-ಕ ಶಿಕ್ಷಣ ಸಂಸ್ಥೆಯ ಸಿ.ಬಿ. ಪಾಟೀಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ವಿಜಯಲಕ್ಷ್ಮೀ ಕೋಸಗಿ ಅವರನ್ನು ಅಮಾನತುಗೊಳಿಸಿ ವೇತನ ತಡೆ ಹಿಡಿಯಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಆರೋಪದ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರ ಬೀಳುವವರೆಗೆ ಪ್ರಾಂಶುಪಾಲರ ಪಿಂಚಣಿ, ಬಾಕಿ ವೇತನ ತಡೆಹಿಡಿಯಬೇಕು. ಅತೀ ಶೀಘ್ರದಲ್ಲಿ ತನಿಖೆ ನಡೆಸಿ ಅವರನ್ನು ಅಮಾನತುಗೊಳಿಸಬೇಕೆಂದು ಅಧ್ಯಕ್ಷ ವೆಂಕಟೇಶ ಕಾಂಬಳೆ, ಸಂಘಟನಾ ಕಾರ್ಯದರ್ಶಿ ಮಾರುತಿ ಪವಾರ, ವಿದ್ಯಾರ್ಥಿ ಸದಸ್ಯ ವಿಕ್ರಂ ಪವಾರ ಹಾಗೂ ಆನಂದ ಕಾಂಬಳೆ ಒತ್ತಾಯಿಸಿದ್ದಾರೆ.

ಮಹಿಳೆಗೆ ಥಳಿತ: 1 ವರ್ಷ ಶಿಕ್ಷೆ
ಗುಲ್ಬರ್ಗ:
ಮಹಿಳೆಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಥಳಿಸಿದ ಆರೋಪಿಗೆ ನ್ಯಾಯಾಲಯ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ 3,500 ದಂಡ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಗೆ ಒಳಗಾಗ ಆರೋಪಿ ಮನೋಹರ. ಇತ ದಿನವೂ ಕುಡಿದು ಬಂದು ಶಿವಲೀಲಾ ಹಾಗೂ ಅವರ ಕುಟುಂಬದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಸುತ್ತಿದ್ದ. ಕುಡಿದ ಅಮಲಿನಲ್ಲಿ ಮನೋಹರ 2009ರ ಫೆ.21ರಂದು ರಾತ್ರಿ 9 ಗಂಟೆಗೆ ಶಿವಲೀಲಾ ಅವರ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿ, ಅವರಿಗೆ ಜೀವ ಬೆದರಿಕೆಯೊಡ್ಡಿದ್ದ. ಈ ಪ್ರಕರಣ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ವಿಚಾರಣೆ ನಡೆದು ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ನ್ಯಾಯಾಧೀಶೆ ಕೆ.ವಿದ್ಯಾ ಅವರು ಆರೋಪಿಯು ತಪ್ಪಿತಸ್ಥನೆಂದು 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ 3,500 ದಂಡ ವಿಧಿಸಿ ಮಾ.20ರಂದು ತೀರ್ಪು ನೀಡಿದ್ದಾರೆ. ವಸೂಲಾದ ದಂಡದ ಹಣದಲ್ಲಿ ಬಾಧಿತ ಮಹಿಳೆಗೆ 3 ಸಾವಿರ ಪರಿಹಾರ ರೂಪದಲ್ಲಿ ನೀಡುವಂತೆ ಅವರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕ ಕೆ.ಆರ್. ನಾಗರಾಜ ಅವರು ವಾದ ಮಂಡಿಸಿದ್ದರು.

ಟ್ರ್ಯಾಕ್ಟರ್ ಟ್ರಾಲಿ ಕಳ್ಳತನ
ಗುಲ್ಬರ್ಗ
: ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮದಲ್ಲಿ ಮನೆಯೊಂದರ ಬಳಿ ನಿಲ್ಲಿಸಿದ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನವಾಗಿದೆ. ಚಂದ್ರಶೇಖರ ದೊಡ್ಮನಿ ಅವರಿಗೆ ಸೇರಿದ 80 ಸಾವಿರ ಮೌಲ್ಯದ ಟ್ರಾಲಿ ಕಳ್ಳತನವಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಗಳಿಂದ ಹಲ್ಲೆ
ಗುಲ್ಬರ್ಗ:
ಇಬ್ಬರ ಮೇಲೆ ಕೆಲವು ದುಷ್ಕರ್ಮಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಘಟನೆ ಜೇವರ್ಗಿ ತಾಲೂಕಿನ ಕಲ್ಲ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಭೀಮಯ್ಯ ವಡ್ಡರ ಇರದ ಸಂದರ್ಭದಲ್ಲಿ ಅವರ ಮಗ ಮತ್ತು ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾರೆ. ಡಾ. ಯಲ್ಲಪ್ಪ ಸಾಲಿ, ಸಂಗಪ್ಪ ತಳಕೇರಿ, ಬಸವರಾಜ ಸರ್ದಾ, ಸಿದ್ದಣ್ಣಗೌಡ ಅವರು ಗ್ರಾಮದಲ್ಲಿ ರಾಜಕೀಯ ಮಾಡುತ್ತ ಅವಾಚ್ಯವಾಗಿ ನಿಂದನೆ ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ವಸೂಲಿ; ಆರೋಪ

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.21
ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಲಕ್ಷ್ಮೀ ಯೋಜನೆಯಡಿ ಬಾಂಡ್‌ಗಳನ್ನು ವಿತರಿಸಲು ಫಲಾನುಭವಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆ ಆರೋಪಿಸಿದೆ. ಸುಮಾರು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಕಟ್ಟಡ, ಕುಡಿಯುವ ನೀರಿನ ಅಭಾವ ಹಾಗೂ ಅಡುಗೆ ಅನಿಲದ ಕೊರತೆ ಕಂಡುಬರುತ್ತಿದೆ. ಅಂಗನವಾಡಿ ಶಾಲೆ ತೆರೆದ ನಂತರ ಆಯಾಗಳು ಮನೆ ಮನೆಗೆ ಬಂದು ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ದೂರಿದೆ. ಇಂತಹ ಅಂಗನವಾಡಿ ಕೇಂದ್ರಗಳಿಗೆ ಸಂಬಂಧಪಟ್ಟ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಮೂಲ ಕಾರಣವೆಂದು ವೇದಿಕೆ ತಿಳಿಸಿದೆ. ಶೀಘ್ರದಲ್ಲೇ ಈ ಅಂಗನವಾಡಿ ಕೇಂದ್ರಗಳಿಗೆ ಮೇಲಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಘಟನೆಯ ಮೂಲಕ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ರಮೇಶ ಎಂ. ಸರಡಗಿ ಎಚ್ಚರಿಸಿದ್ದಾರೆ.
ಜೆಡಿಎಸ್‌ಗೆ ರಾಜಿನಾಮೆ

ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.21
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯದ್ ಸಜ್ಜಾದ್ ಅಲಿ ಕೆ. ಇನಾಂದಾರ ಹುದ್ದೆಗೆ ಹಾಗೂ ತನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಪತ್ರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ. ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ಮೇಲೆ ನಮ್ಮ ಪಕ್ಷದವರಿಗೆ ನನ್ನ ಏಳ್ಗೆ ಕಂಡು ಸಹನೆಯಾಗಲಿಲ್ಲ. ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನನಗೆ ಯಾವುದೇ ಬೆಲೆ ಕೊಡಲಿಲ್ಲ. ಸಭೆ- ಸಮಾರಂಭಗಳಲ್ಲಿ ನನ್ನನ್ನು ಕಡೆಗಣಿಸಿದರು. ಆದ್ದರಿಂದ ಮನನೊಂದು ಈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಅವರು ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.