ರಾಮಕಥಾ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ
ಕನ್ನಡಪ್ರಭ ವಾರ್ತೆಗುಲ್ಬರ್ಗಮಾ.23
ನಗರದ ನೂತನ ವಿದ್ಯಾಲಯ ಮೈದಾನದ ಸಭಾ ಮಂಟಪದಲ್ಲಿ ಆರು ದಿನಗಳ ಕಾಲ ನಡೆದ ರಾಮಕಥಾ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿದೆ.
ರಾಮಕಥಾ ನಡೆಸಿಕೊಟ್ಟ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಭಕ್ತರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಿದ್ದು, ಸಮಾರೋಪದ ವೈಶಿಷ್ಟ್ಯವಾಗಿತ್ತು.
ಟೀಕೆಗೆ ತಲೆಕೆಡಿಸಿಕೊಳ್ಳಲ್ಲ: ರಾಮಕಥಾಕ್ಕೆ ಪ್ರಗತಿಪರರು, ವಿಚಾರವಾದಿಗಳು ಪ್ರತಿಭಟನೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಸ್ವಾಮೀಜಿ ಮಾರ್ಮಿಕ ಉತ್ತರವನ್ನೇ ನೀಡಿದರು. ಟೀಕಿಸುವವರ ಬಗ್ಗೆ ನಮಗೆ ಚಿಂತೆಯೇ ಇಲ್ಲ. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಬಿಡುವ ತಮಗಿಲ್ಲ. ಮಾಡಲು ಬೇರೆ ಕೆಲಸಗಳಿವೆ. ಶುಭದ ಬಗ್ಗೆಯಷ್ಟೇ ಪ್ರತಿಕ್ರಿಯಿಸಿರುತ್ತೇವೆ ಎಂದರು.
ಪ್ರತಿಭಟನೆ, ಟೀಕೆ- ಟಿಪ್ಪಣೆಗಳ ಮಧ್ಯೆಯೂ ಸಾವಿರಾರು ಜನರು ಬಂದಿರುವುದನ್ನು ನೋಡಿದರೆ ಜನರಿಗೆ ಒಳಿತಿನ ಹುಚ್ಚು ಹಿಡಿದಿದೆ, ಹೊಸ ಸ್ಫೂರ್ತಿ ಸಿಕ್ಕಿದೆ ಎಂದೇ ಭಾವಿಸುವುದಾಗಿ ಹೇಳಿದರು.
ಭಯೋತ್ಪಾದನೆಯನ್ನೇಕೆ ಟೀಕಿಸಲ್ಲ...?: ಬಸವಕಲ್ಯಾಣದ ವಿಭೂತಿ ಮಠದ ಬಸವಾನಂದ ಸ್ವಾಮೀಜಿ ಸಂವಾದದಲ್ಲಿ ಪಾಲ್ಗೊಂಡು, ರಾಮಕಥಾ ವಿರೋಧಿಸುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಇಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಇಲ್ಲ. ಕೋಮವಾದವೂ ಇಲ್ಲ. ರಾಮನ ಆದರ್ಶ, ನಡೆ, ನುಡಿ, ಮೌಲ್ಯಗಳ ಪುನರ್ ಅವತರಣವಷ್ಟೇ ನಡೆಯುತ್ತಿದೆ. ನಿಜಕ್ಕೂ ಇದೊಂದು ಅದ್ಭುತ ಕಾರ್ಯ. ರಾಘವೇಶ್ವರ ಭಾರತೀ ಸ್ವಾಮೀಜಿ ಈ ಮೂಲಕ ಯುವ ಜನರಲ್ಲಿ ಹೊಸ ಸ್ಫೂರ್ತಿ ತಂದುಕೊಡುತ್ತಿದ್ದಾರೆ ಎಂದರು.
ಭಾರತದಲ್ಲಿ ಭಯೋತ್ಪಾದನೆ ಮತ್ತು ಧರ್ಮದ ಹೆಸರಿನಲ್ಲಿ ಇನ್ನೊಂದು ಧರ್ಮದವರನ್ನು ಕೊಲ್ಲುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇಂಥದ್ದನ್ನು ಖಂಡಿಸುವ ಧೈರ್ಯ ತೋರಲಿ ಎಂದು ಅವರು ಪ್ರಗತಿಪರರಿಗೆ ಸವಾಲು ಹಾಕಿದರು.
ಗಂವ್ಹಾರದ ಸೋಪಾನನಾಥ ಸ್ವಾಮೀಜಿ, ಸಿಂದಗಿಯ ದತ್ತಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮಕಥಾ ಸಮಿತಿಯ ಪಾಂಡುರಂಗ ಜೋಶಿ ಮಹಾರಾಜರು, ಅಧ್ಯಕ್ಷ ಭೀಮಸೇನರಾವ ಮಾಡ್ಯಾಳಕರ್, ಕಾರ್ಯಾಧ್ಯಕ್ಷ ಸುಭಾಷ ಕಮಲಾಪುರೆ, ರಾಘವೇಂದ್ರ ಕುಲಕರ್ಣಿ ಕೋಗನೂರ, ಬಸವರಾಜ ಡಿಗ್ಗಾವಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

