'ಗುರುವಿನ ಮೇಲೆ ವಿಶ್ವಾಸವಿಟ್ಟರೆ ಫಲ'
ಕ.ಪ್ರ. ವಾರ್ತೆ, ಕೆಂಭಾವಿ, ಮಾ.25
ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಭಗವಂತನ ಸೇವೆಗೆ ನಮ್ಮನ್ನು ನಾವು ಮೀಸಲಿಟ್ಟು ಅವನನ್ನು ಮನಸಾ ಸ್ಮರಿಸಿದಾಗ ಮಾತ್ರ ನಮ್ಮ ಜನ್ಮ ಪಾವನವಾಗುತ್ತದೆ. ದೇವರ ಮೇಲೆ ಭಕ್ತಿ, ಗುರುಗಳ ಮೇಲೆ ವಿಶ್ವಾಸವಿಟ್ಟು ಪ್ರತಿಯೊಂದು ಕಾರ್ಯ ಮಾಡಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗಲು ಸಾಧ್ಯ ಎಂದು ಬೀದರನ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಡೆದ ಶರಣಬಸವೇಶ್ವರ ಪುರಾಣದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದಂತೆ ನಾವು ಕೆಲಸಗಳನ್ನು ಮಾಡಬೇಕೇ ಹೊರತು ಅದರಿಂದಾಗುವ ಲಾಭಗಳನ್ನು ನಿರೀಕ್ಷಿಸಬಾರದು. ದೇವರ ಮೇಲೆ ನಂಬಿಕೆ ಇಟ್ಟು ಯಾವುದೇ ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಿದರೂ ಯಶಸ್ವಿಯಾಗಲು ಸಾಧ್ಯ ಎಂದರು.
ಗುರುಗಳ ಮೂಲಕ ದೇವರ ಕಾಣಿರಿ: ಪುರಂದರದಾಸರು, ಕಬೀರದಾಸರು, ಸೂರದಾಸರು, ಅಕ್ಕಮಹಾದೇವಿ ಮುಂತಾದ ಅನೇಕ ಮಹಾಮಹಿಮರು ದೇವರ ಸೇವೆಗೆ ತಮ್ಮನ್ನು ತಾವೇ ಮೀಸಲಿಟ್ಟು ಮೋಕ್ಷವನ್ನು ಕಂಡುಕೊಂಡರು. ನಾವು ಹುಟ್ಟಿದ್ದೇ ದೇವರ ಸೇವೆಗಾಗಿ. ಅವನ ಪ್ರಾರ್ಥನೆಯೇ ನಮ್ಮ ಮೊದಲ ಗುರಿ ಎಂದು ತಿಳಿದು ಗುರುಗಳ ಮುಖೇನ ದೇವರನ್ನು ಕಾಣಬೇಕು ಎಂದು ಹೇಳಿದರು.
ಪರಮಾತ್ಮನನ್ನು ತಂದೆ ನೀನೆ, ತಾಯಿ ನೀನೆ, ಬಂಧು ನೀನೆ, ಬಳಗ ನೀನೆ.. ಎಂದು ಹೇಳಿದಂಥ ಬಸವಣ್ಣನವರ ವಚನದ ಸಾರಾಂಶವನ್ನು ತಿಳಿದು ಪರಮಾತ್ಮನ್ನು ಆರಾಧಿಸಬೇಕು. ನಮ್ಮ ಪಾಪಾನುಸಾರವಗಿ ನಮಗೆ ಅನೇಕ ಜನ್ಮಗಳು ಪ್ರಾಪ್ತವಾಗುತ್ತವೆ. ಈ ಮಾನವ ಜನ್ಮ ಬಂದಿರುವುದು ನಮ್ಮ ಪುಣ್ಯದ ಸಂಕೇತ. ಆದ್ದರಿಂದ ಇದನ್ನು ಹಾಳು ಮಾಡದೆ ನಿರಂತರವಾಗಿ ಭಗವಂತನ ಭಕ್ತಿ- ಭಜನೆ ಮಾಡುತ್ತಾ ನಮ್ಮ ಜೀವನದ ಕ್ಷಣಗಳನ್ನು ಕಳೆಯಬೇಕೆಂದು ಕಿವಿಮಾತು ಹೇಳಿದರು.
ಪುರಾಣ, ಕೀರ್ತನೆಗಳಿಂದ ಮಾನಸಿಕ ನೆಮ್ಮದಿ: ಹುಬ್ಬಳ್ಳಿಯ ಶಾಂತಾಶ್ರಮ ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ, ಲಿಂಗನಗೌಡ ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಹಿರೇಮಠದ ಚನ್ನಬಸವ ಸ್ವಾಮೀಜಿ, ಮಹಾರಾಷ್ಟ್ರ ಕುಳಗೇರಿಯ ಬಸವರಾಜ ಮಹಾರಾಜ, ಶಾಸಕ ಶರಣಬಸಪ್ಪ ದರ್ಶನಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ, ಅದಪ್ಪ ಆವಟಿ, ಕಲ್ಲಪ್ಪ ಬಿದರಿ, ಮಹಾದೇವಪ್ಪ ವಜ್ಜಲ, ಸಿದ್ದರಾಮಪ್ಪ ಕುವತನೂರ ಇದ್ದರು. ಬಸವರಾಜ ಬಂಟನೂರ, ಯಮುನೇಶ ಯಾಳಗಿ ಮತ್ತು ಕಾಳಪ್ಪ ವಿಶ್ವಕರ್ಮ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಡಾ. ವೆಂಕನಗೌಡ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

