ಜಾಹೀರಾತು ನೀಡಲೂ ಅನುಮತಿ ಕಡ್ಡಾಯ!
ಕ.ಪ್ರ.ವಾರ್ತೆ ಯಾದಗಿರಿ ಮಾ.30
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಕೇಬಲ್ ನೆಟ್ವರ್ಕ್, ಮೊಬೈಲ್ ನೆಟವರ್ಕ್ ಸೇರಿದಂತೆ ಸಮೂಹ ಮಾಧ್ಯಮಗಳ ಮೂಲಕ ಜಾಹೀರಾತು ನೀಡುವ ಮುನ್ನ ಕಡ್ಡಾಯವಾಗಿ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆಯಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಪ್ರಿಂಟಿಂಗ್ ಪ್ರೆಸ್, ಕೇಬಲ್ ಅಪರೇಟರ್ಗಳ ಮಾಲೀಕರ ಸಭೆ ನಡೆಸಿ ಸೂಚನೆ ನೀಡಿದರು.
ಸಮಿತಿ ರಚನೆ: ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಸ್ವತಂತ್ರ ನಾಗರಿಕರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗಿದ್ದು, ವಾರ್ತಾಧಿಕಾರಿಗಳು ಈ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆಯು ನ್ಯಾಯಸಮ್ಮತ ರೀತಿಯಲ್ಲಿ ನಡೆಯಲು ಅನುಕೂಲವಾಗುವಂತೆ ರಾಜ್ಯಮಟ್ಟದಲ್ಲಿ ಇಂತಹ ಮಾಧ್ಯಮ ದೃಢೀಕರಣ ಹಾಗೂ ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಜಿಲ್ಲಾ ಮಟ್ಟದಲ್ಲಿ ಈ ಸಮಿತಿ ರಚಿಸಲಾಗಿದ್ದು, ಜಿಲ್ಲೆಯಲ್ಲಿ ಚುನಾವಣೆಗಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವ ಮುನ್ನ ಜಿಲ್ಲಾಮಟ್ಟದ ಸಮಿತಿಯಲ್ಲಿ ಅನುಮತಿ ಪಡೆದು ನೀಡಬೇಕಾಗುತ್ತದೆ.
ಅನುಮತಿ ದೃಢಪಡಿಸಿಕೊಂಡು ಪ್ರಸಾರ ಮಾಡಿ: ಇಂತಹ ಅನುಮತಿ ನೀಡಿದ ಬಗ್ಗೆ ನಿಗದಿತ ಅರ್ಜಿ ನಮೂನೆ ಸಹ ಇದ್ದು, ಇದರ ಮೂಲಕ ಸಮಿತಿಯಿಂದ ಅನುಮತಿ ಪಡೆದ ಬಗ್ಗೆ ದೃಢಪಡಿಸಿಕೊಂಡು ಪ್ರಿಂಟಿಂಗ್ ಪ್ರೆಸ್, ಚಲನಚಿತ್ರ ಮಾಲೀಕರು, ಸ್ಥಳೀಯ ಕೇಬಲ್ ಅಪರೇಟರ್ಗಳು ಜಾಹೀರಾತು ಪ್ರಸಾರ ಮಾಡಬೇಕು. ಕರ ಪತ್ರಗಳು ಇದ್ದಲ್ಲಿ ತಮ್ಮ ವಿಳಾಸ, ಹೆಸರು ನಮೂದಿಸಿ ಮುದ್ರಿಸಿ ಕೊಡಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಅದರಂತೆ ಹಣ ಸಂದಾಯ ಮೂಲಕ ವರದಿ ಪ್ರಕಟವಾಗಿರುವ ಬಗ್ಗೆಯೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ ಂದು ಸಭೆಯಲ್ಲಿ ತಿಳಿಸಿದರು.
ನಿಯಮ ಪಾಲಿಸದಿದ್ದಲ್ಲಿ ಕ್ರಮ: ಆಯೋಗದ ನಿರ್ದೇಶನದಂತೆ ನಿಯಮ ಪಾಲನೆ ಆಗಬೇಕು. ಒಂದು ವೇಳೆ ಯಾವುದೇ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಆಯಾ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ನಿಗದಿಪಡಿಸಿದ ಅವಧಿಯಲ್ಲಿ ಅನುಮತಿ ಪಡೆಯಬೇಕು. ಇದಕ್ಕೆ ತಪ್ಪಿದಲ್ಲಿ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯು ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ ಚುನಾವಣೆ ಆಯೋಗಕ್ಕೆ ಈ ಕುರಿತು ವರದಿ ನೀಡಲಾಗುವುದು.
ಲೆಕ್ಕವಿಡಬೇಕು: ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮುದ್ರಣ ಮಾಡಿರುವ ಕರಪತ್ರಗಳ ಬಗ್ಗೆ ಲೆಕ್ಕವನ್ನು ಇಟ್ಟುಕೊಂಡಿರಬೇಕು. ಕರಪತ್ರಗಳ ಸಂಖ್ಯೆ ಸೇರಿದಂತೆ ವಿಳಾಸ ಹೆಸರು ನಮೂದಿಸಿರಬೇಕು. ಕೇಬಲ್ ಅಪರೇಟರ್ಗಳು ನಿರಂತರ ಪ್ರಸಾರ ಮಾಡಲಾಗುವ ಜಾಹೀರಾತು ಬಗ್ಗೆ ಮತ್ತು ಖರ್ಚು ವೆಚ್ಚದ ಬಗ್ಗೆ ದರಪಟ್ಟಿ ನೀಡಬೇಕು. ಚಲನಚಿತ್ರ ಮಂದಿರಗಳಲ್ಲಿ ಪ್ರಸಾರ ಮಾಡುವ ಜಾಹೀರಾತಿನ ಬಗ್ಗೆ ಸಂದಾಯವಾದ ಬಿಲ್ಲಿನ ಬಗ್ಗೆ ತಿಳಿಸಬೇಕು.
ಪೊಲೀಸ್ ಇಲಾಖೆಯಿಂದ ಕೂಡ ಕಟ್ಟುನಿಟ್ಟಿನ ನಿಗಾ ಇಡಲಾಗುತ್ತದೆ. ಎಲ್ಲಾ ಚುನಾವಣಾಧಿಕಾರಿಗಳು ಸುರಪುರ, ಶಹಾಪುರ, ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಸಭೆ ನಡೆಸಿ ಕೇಬಲ್ ಆಪರೇಟರ್ಗಳಿಗೆ ಸೂಕ್ತ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಅಪರ ಡಿಸಿ ಜಹೀರಾ ನಸೀಮ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

