ಪರಿಸರ ತಂಡ ಕನ್ನೆಳ್ಳಿ ಶಾಲೆಗೆ ಭೇಟಿ
ಸುರಪುರ: ಪರಿಸರ ರಕ್ಷಣೆ ನಮ್ಮಲ್ಲರ ಹೊಣೆಯಾಗಿದೆ. ಪರಿಸರವನ್ನು ರಕ್ಷಿಸಿದರೆ ಆರೋಗ್ಯ ಭಾಗ್ಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಶಿಕ್ಷಕರು ಮೇಲಿಂದ ಮೇಲೆ ತಿಳಿವಳಿಕೆ ನೀಡಬೇಕೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡದ ಪ್ರೊ. ಚಂದ್ರಶೇಖರ ಹೇಳಿದರು. ತಾಲೂಕಿ ಕನ್ನೆಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯು ಪರಿಸರ ಮಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳನ್ನು ಆರು ಗುಂಪುಗಳಾಗಿ ಪರಿಸರ ಕುರಿತು ಸಂವಾದ ನಡೆಸಿದರು. ತಂಡದಲ್ಲಿ ಗೋಪಾಲಕೃಷ್ಣ ಸಣ್ಣತಂಗಿ, ಸಿ.ಎನ್. ಮಂಜಪ್ಪ, ಜಿ.ವಿಶ್ವಮೂರ್ತಿ, ಡಾ. ಲಕ್ಕಿ, ಪೃಥ್ವಿರಾಜ್, ಬಿ.ವೆಂಕಟೇಶ, ಸಣ್ಣ ವೆಂಕಟೇಶ, ಶಾಲೆಯ ಮುಖ್ಯಗುರು, ಶಿಕ್ಷಕ ವರ್ಗದವರು ಇದ್ದರು.
ರೈತರಿಗೆ ನೀಡದ ಪರಿಹಾರ; ಆಕ್ರೋಶ
ಯಾದಗಿರಿ: ಜಿಲ್ಲೆಯಲ್ಲಿ ಬಡ ಹಾಗೂ ಸಣ್ಣ ರೈತರಿಗೆ ಬರ ಪರಿಹಾರ ಮರೀಚಿಕೆಯಾಗಿದ್ದು, ಇದುವರೆಗೆ ಪರಿಹಾರದ ಚೆಕ್ ವಿತರಣೆಯಾಗಿಲ್ಲ ಎಂದು ಕಲ್ಯಾಣ ಕರ್ನಾಟಕ ಯುವ ಸೇನೆ ತಾಲೂಕು ಅಧ್ಯಕ್ಷ ವಿಜಯಕುಮಾರ ಮಗ್ದಂಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಯಾದಗಿರಿ ತಾಲೂಕಿನ ಗುರುಮಠಕಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಮಗ್ಗಂಪುರ ಸೇರಿದಂತೆ ಪಸಪುಲ್, ಅರಕೇರಾ ತಾಂಡಾ, ಕುಂಟಿಮರಿ, ಯಲಸತ್ತಿ ಇನ್ನಿತರ ಅನೇಕ ಹಳ್ಳಿಗಳಲ್ಲಿ ಬರಪರಿಹಾರದ ಚೆಕ್ ವಿತರಿಸದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಇನ್ನಾದರೂ ಬಡ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರದ ಚೆಕ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಚುನಾವಣೆ ಬಹಿಷ್ಕಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೇನೆ ಜಿಲ್ಲಾಧ್ಯಕ್ಷ ರವಿ ಮುದ್ನಾಳ, ರಾಜ್ಯ ಉಪಾಧ್ಯಕ್ಷ ವಿಷ್ಣು, ನಿರಂಜನ, ನಗರಾಧ್ಯಕ್ಷ ಲಕ್ಷ್ಮಣ ಪವಾರ ಎಚ್ಚರಿಸಿದ್ದಾರೆ.
ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ಯಾದಗಿರಿ: ತಾಲೂಕಿನ ಅಜಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ, ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೈದಾಪುರ ವಲಯ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ವೆಂಕಪ್ಪ ದು. ಅಲೆಮನೆ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಅಳಿವಿನ ಪ್ರಶ್ನೆ ಎದುರಿಸುತ್ತಿದ್ದು, ಕನ್ನಡದ ಕಂಪು ಹರಡಲು ಶ್ರಮಿಸಬೇಕೆಂದು ಕರೆ ನೀಡಿದರು. ಮುಖ್ಯಗುರು ನರಸಿಂಹಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಅಶೋಕ ಲೋಖರೆ, ಇಡ್ಲೂರು ಶಾಲೆಯ ಶ್ರೀಧರ ನಾಯಕ ಇದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ವೆಂಕಪ್ಪ ದು. ಅಲೆಮನಿ ಹಾಗೂ ರಾಜ್ಯಮಟ್ಟದ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಸ್. ಗಡ್ಡಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

