ಗುಲ್ಬರ್ಗಾ

ಬಿಸಿಲಿಗೆ ಬೆಚ್ಚದ ಸೋನಿಯಾ ಮೇಡಂ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ. 2
ಗುಲ್ಬರ್ಗದಲ್ಲಿನ ಎನ್ವಿ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಗುಲ್ಬರ್ಗಕ್ಕೆ ಸೋನಿಯಾಗಾಂಧಿ ಆಮಿಸಿದಾಗ ಸೂರ್ಯದೇವ ಬರೋಬ್ಬರಿ ನಡುನೆತ್ತಿ ಮೇಲೆಯೇ ಬಂದಿದ್ದ. ಸುಡು ಬಿಸಿಲು. ಸೋನಿಯಾಗೆ ಕಾದವರೆಲ್ಲರೂ ಬೆವರಿನಿಂದ ಸುಸ್ತಾಗುತ್ತಿದ್ದರೆ, ಸಮಾವೇಶದ ಸ್ಥಳದಲ್ಲಿ ಸಾಕಷ್ಟು ಕುಡಿಯುವ ನೀರಿನ ಸೌಕರ್ಯ ಇಲ್ಲದ್ದರಿಂದ ಬಸವಳಿದಿದ್ದರು.
ಪೆಂಡಾಲ್ ಮೇಲೆ ಬಿಸಿಲು ತಾಕದಂತೆ ಬಿಳಿ ಬಟ್ಟೆಯಿಂದ ಕಟ್ಟಲಾಗಿತ್ತು. ಇದರಿಂದ ಪೆಂಡಾಲ್ ಒಳಗಡೆ ಗಾಳಿ ಯಾವ ದಿಕ್ಕಿನಿಂದಲೂ ಸುಳಿಯದಂತಾಗಿತ್ತು. ಜನಸ್ತೋಮ ಸೇರುತ್ತಿದ್ದಂತೆಯೇ ಇಡೀ ಶ್ಯಾಮಿಯಾನಾದಲ್ಲಿ ಜನತೆ ಬೆವರುತ್ತ ಹೋದರು.
ಅಷ್ಟೊತ್ತಿಗಾಗಲೇ ಹೆಲಿಕಾಪ್ಟರ್‌ನಿಂದ ಹಾರಿ ಬಂದ ಸೋನಿಯಾ ಬಂದವರೇ ಎಲ್ಲರತ್ತ ಕೈ ಬೀಸುತ್ತ ವೇದಿಕೆ ಹತ್ತಿದರು. ದಾರಿಯಲ್ಲಿ ನಿಂತಿದ್ದ ಗಣ್ಯರು, ಅಸೆಂಬ್ಲಿ ಕಣದಲ್ಲಿರುವ ಗುಲ್ಬರ್ಗ, ಯಾದಗಿರಿ ಹುರಿಯಾಳುಗಳು, ಮಾಜಿ ಶಾಸಕರುಗಳನ್ನು ಭೇಟಿ ಮಾಡಿ ನಮಸ್ಕರಿಸಿದರು.
ಬಿರು ಬಿಸಿಲಿನ ಹಿನ್ನೆಲೆಯಲ್ಲಿ ವೇದಿಕೆಯಲ್ಲೇ ಸೋನಿಯಾ ಗಾಂಧಿಗಾಗಿ ಕೂಲರ್ ಸೌಕರ್ಯ ಕಲ್ಪಿಸಲಾಗಿತ್ತು. ಆದಾಗ್ಯೂ ಉರಿ ಬಿಸಿಲ ಉಪಟಳ ಅವರನ್ನೂ ಕಾಡಿದಂತಿತ್ತು. ಮುಖದ ಮೇಲಿನ ಬೆವರನ್ನು ಆಗಾಗ ಕರವಸ್ತ್ರದಿಂದ ಒರೆಸಿಕೊಳ್ಳುವುದು ಕಂಡಿತು.
ಸೋನಿಯಾಗೆ ಅಭ್ಯರ್ಥಿಗಳ ನಮಸ್ಕಾರ: ಸೋನಿಯಾ ಗಾಂಧಿ ಭಾಷಣ ಮುಗಿದ ನಂತರ ಮಲ್ಲಿಕಾರ್ಜುನ ಖರ್ಗೆ ತಾವೇ ಖುದ್ದು ವೇದಿಕೆಯಲ್ಲಿದ್ದು ಅಸೆಂಬ್ಲಿ ಕಣದಲ್ಲಿರುವ ಅಭ್ಯರ್ಥಿಗಳನ್ನು ಪರಿಚಯಿಸಲು ಮುಂದಾದರು. ಒಬ್ಬೊಬ್ಬರ ಹೆಸರು ಓದುತ್ತಿದ್ದಂತೆಯೇ ಅಭ್ಯರ್ಥಿಗಳು ವೇದಿಕೆಗೆ ಬಂದು ಸೋನಿಯಾ ಗಾಂಧಿಗೆ ಅಭಿನಂದಿಸಿ ಜನರತ್ತ ಕೈ ಬೀಸಿ ಹೋಗಬೇಕಿತ್ತು.
ಈ ಕಸರತ್ತಿನಲ್ಲಿ ಸರತಿಯಲ್ಲೇ ಬಂದ ಡಾ. ಅಜಯ್ ಸಿಂಗ್, ಪ್ರಿಯಾಂಕ್ ಖರ್ಗೆ, ಬಾಬೂರಾವ ಚಿಂಚನ್ಸೂರ್, ಡಾ. ಉಮೇಶ ಜಾಧವ, ಸಿದ್ದಣ್ಣ ಮಾಸ್ಟರ್ ಶೇಗಜಿ, ಯಾದಗಿರಿಯಿಂದ ಆಗಮಿಸಿದ್ದ ಅಭ್ಯರ್ಥಿಗಳು, ನಾಯಕರು ಅನೇಕರು ನೇರವಾಗಿ ಸೋನಿಯಾ ಮೇಡಮ್ ಕಾಲಿಗೆ ಬಿದ್ದು ನಮಸ್ಕರಿಸಿದರು.
ಬಾಬೂರಾವ ಚಿಂಚನ್ಸೂರ್ ಬಂದು ಸೋನಿಯಾ ಮುಂದೆ ನಿಂತಾಗಲಂತೂ ಸಭಿಕರಿಂದ ಶಿಳ್ಳೆ, ಕೇಕೆ, ಚಪ್ಪಾಳೆ ಕೇಳಿ ಬಂದಾಗ ಖುದ್ದು ಸೋನಿಯಾ ಗಾಂಧೀಜಿಯವರೂ ಮುಗುಳ್ನಗೆಯಿಂದ ಬಾಬೂರಾವರತ್ತ ನೋಡಿ ನಗಬೇಕಾಯ್ತು. ಅಷ್ಟರಲ್ಲೇ ಸಾವರಿಸಿಕೊಂಡ ಬಾಬೂರಾವ ತಕ್ಷಣ ಸೋನಿಯಾರ ಕಾಲಿಗೆ ಬಿದ್ದು ಆಶೀರ್ವಾದ ಕೋರಿದರು.
ಅವ್ಯವಸ್ಥೆ- ಜನ ತತ್ತರ: ಸೋನಿಯಾ ಕಾರ್ಯಕ್ರಮಕ್ಕೆ ಪೋಲೀಸ್ ಪರೇಡ್ ಮೈದಾನ ಬಳಸಲ್ಪಡುತ್ತಿತ್ತು. ಇದೇ ಮೊದಲ ಬಾರಿಗೆ ನೀತನ ವಿದ್ಯಾಲಯ ಮೈದಾನ ಅದಕ್ಕಾಗಿ ಬಳಸಲಾಗಿತ್ತು. ಇಲ್ಲಿನ ಮೈದಾನದ ಒಳಭಾಗದಲ್ಲಿ ಬೇಲಿ ಹಾಕುವ ಮೂಲಕ ಜನದಟ್ಟಣೆ ನಿಂಯತ್ರಿಸಲಾಗಿತ್ತು. ಭದ್ರತೆಯಿಂದಾಗಿ ನಾಲ್ಕಾರು ಕಡೆ ತಪಾಸಣೆ ದ್ವಾರಗಳೂ ಇದ್ದವು. ಹೀಗಾಗಿ ಮುಕ್ತ ಸಂಚಾರ ಇಲ್ಲಿ ಮರೀಚಿಕೆಯಾಗಿತ್ತು.
ಇದಲ್ಲದೆ ಕುಡಿಯುವ ನೀರಿನ ಸೌಕರ್ಯವಿಲ್ಲದೆ ಬಂದ ಜನತೆ ಬವಣೆ ಎದುರಿಸಿದರು. ಶ್ಯಾಮಿಯಾನದಲ್ಲಿ ಗಾಳಿ ಸುಳಿದಾಡಲೂ ಆಸ್ಪದವಿರದಂತಾಗಿತ್ತು. ಇದರಿಂದ ಸೋನಿಯಾರಿಗಾಗಿ 3 ಗಂಟೆಗಳ ಕಾಲ ಕಾಯಬೇಕಾಗಿದ್ದ ಜನತೆ ಇದೇನಪ್ಪಾ... ಎಂದು ನರಳಿದರು.
ಮಾಧ್ಯಮದವರ ಬವಣೆ ಕೇಳೋರಿರಲಿಲ್ಲ: ಸೋನಿಯಾ ವೇದಿಕೆಯ ಮುಂಭಾಗದಲ್ಲಿ ಅನುಕೂಲವಾಗಲಿ ಎಂದು ಪತ್ರಕರ್ತರಿಗೆ ಹಾಸನ ಸೌಕರ್ಯ ಮಾಡಲಾಗಿತ್ತಾದರೂ ಪತ್ರಕರ್ತರಲ್ಲದವರೇ ಅಲ್ಲಿ ಆಸೀನರಾಗಿದ್ದರು. ಸಾರ್ವಜನಿಕರಿಗೆಲ್ಲರಿಗೂ ಫ್ಯಾನ್ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ಮಾಧ್ಯಮದವರು ಕುಳಿತಂತಹ ಈ ಸ್ಥಳದಲ್ಲಿ ಎಲ್ಲಿಯೂ ಫ್ಯಾನ್ ಸವಲತ್ತು ಕಂಡು ಬರಲಿಲ್ಲ. ಮಾಧ್ಯಮದವರೂ ಸಹ ಸೋನಿಯಾ ಆಗಮನಕ್ಕಾಗಿ 2 ಗಂಟೆಗಳಿಗೂ ಹೆಚ್ಚು ಹೊತ್ತು ಕಾಯುವಂತಾಯ್ತು. ಅವರಿಗೂ ಕುಡಿಯುವ ನೀರಿಗೂ ಬವಣೆ ಪಡುವಂತಾಗಿತ್ತು.
ಉರಿ ಬಿಸಿಲಲ್ಲೇ ನಿಂತ ನಾಯಕರು: ಭದ್ರತೆ ಹಿನ್ನೆಲೆಯಲ್ಲಿ ವೇದಿಕೆಯ ಸುತ್ತಮುತ್ತ ನಾಲ್ಕಾರು ಫರ್ಲಾಂಗ್ ಯಾವುದೇ ನೆರಳು ಇರಲಿಲ್ಲ. ಹೀಗಾಗಿ ಧರಂಸಿಂಗ್, ಖರ್ಗೆ ಮೊದಲ್ಗೊಂಡು ನಾಯಕರನೇಕರು ಸೋನಿಯಾ ಆಗಮನಕ್ಕೂ ಮುಂಚೆ 1 ಗಂಟೆಕಾಲ ಬಿಸಿಲಲ್ಲೇ ಕುಳಿತು ಕಾಯುವಂತಾಯ್ತು.
ಇದಲ್ಲದೆ ಅಸೆಂಬ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಹೊರಗಿನಿಂದ ಬಂದವರು, ಗಣ್ಯರನೇಕರು ಸೋನಿಯಾ ಗಾಂಧಿ ಭೇಟಿಯಾದ ನಂರತವೂ ಅಲ್ಲಿಂದ ಹೊರ ಹೋಗಲು ಅವಕಾಶವಿಲ್ಲದಂತಾಗಿ ಅನಿವಾರ್ಯವಾಗಿ ಬಿಸಿಲಲ್ಲೇ ವೇದಿಕೆ ಅಕ್ಕಪಕ್ಕ ಸುತ್ತಾಡಬೇಕಾಗಿ ಬಂತು. ಸೋನಿಯಾ ಇನ್ನೇನು ಬರುತ್ತಾರೆ ಎಂದು ಗೊತ್ತಾದಾಗ ಮಾತ್ರ ಮಾಜಿ ಸಿಎಂ ಧರಂಸಿಂಗ್ ಅವರಿಗೆ ವೇದಿಕೆ ಹತ್ತಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಯ್ತು. ಅದಕ್ಕೂ ಮುನ್ನ ಧರಂಸಿಂಗ್ ಅವರೂ ಉರಿ ಬಿಸಿಲಲ್ಲೇ ಕುಳಿತುಕೊಂಡಿದ್ದರು.
ಹಣ್ಮಂತರಾವ ಕೂಲ್ ಕೂಲ್ ನಿರೂಪಣೆ: ಬಿರು ಬಿಸಿಲು ಉಪಟಳಕ್ಕೆ ಸೇರಿದ್ದ ಎಲ್ಲರೂ ಬೆಚ್ಚಿದ್ದರೂ ಸಮಾರಂಭದ ನಿರೂಪಣೆಯಲ್ಲಿ ಮಗ್ನರಾಗಿದ್ದ ಎಐಸಿಸಿ ಕರ್ನಾಟಕ ವೀಕ್ಷಕ ಹಣಮಂತರಾವ ಮಾತ್ರ ಸೋನಿಯಾರೇ ಬಿಸಿಲಲ್ಲಿ ಸುತ್ತುತ್ತಿದ್ದಾರೆ. ನೀವು ಇಷ್ಟು ಬಿಸಿಲಿಗೆ ಅಂಜುವಿರಾ ನಿಮಗೆ ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದು ಸಭಿಕರನ್ನು ಉದ್ದೇಶಿಸಿ ಹೇಳುತ್ತಿದ್ದರು. ಆದರೆ ಹಣಮಂತರಾವ ಹೇಳಿದಂತೆ ಕುಡಿಯುವ ನೀರು ಸೇರಿದಂತೆ ಯಾವ ಸೌಕರ್ಯಗಳೂ ಸಾರ್ವಜನಿಕರಿಗೆ ಇರಲಿಲ್ಲ. ಅವರು ದೂರದಲ್ಲೆಲ್ಲೋ ನಿಂತು ನಿರೂಪಣೆ ಮಾಡುತ್ತಿರುವುದರಿಂದ ಸಭಿಕರ ಮಧ್ಯೆ ಏನೆಲ್ಲಾ ತಳಮಳ ಆಗುತ್ತಿದೆ ಎಂಬುದರ ಸ್ಪಷ್ಟ ಅರಿವು ಅವರಿಗೆ ಇರಲಿಲ್ಲ. ಹೀಗಾಗಿ ಸಮಾರಂಭ ಪೂರ್ತಿ ಹಣಮಂತರಾವ ತುಂಬ ಕೂಲಾಗಿ ವಿವರಿಸುತ್ತಲೇ ಸಾಗಿದರು.

ಸೋನಿಯಾ ಬಂದ್ರೆ ಜನರಿಗೂ ತೊಂದ್ರೆ!
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ.2

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ನಿರ್ಬಂಧಿಸಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಲು ಗುರುವಾರ ಸೋನಿಯಾ ಗಾಂಧಿ ನಗರದ ನೂತನ ವಿದ್ಯಾಲಯ ಮೈದಾನಕ್ಕೆ ಆಗಮಿಸಿದ್ದರು.
ಸೋನಿಯಾ ಗಾಂಧಿ ಬೆಳಗ್ಗೆ 11.30ಕ್ಕೆ ನಗರಕ್ಕೆ ಬರುವುದು ನಿಗದಿಯಾಗಿತ್ತು. ಹೀಗಾಗಿ ಭದ್ರತಾ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೃತ್ತದಿಂದ ಹಳೆ ಡಿಪಿಒ ವರೆಗಿನ ರಸ್ತೆ ಹಾಗೂ ತಹಸೀಲ್ದಾರ್ ಕಚೇರಿ ಎದುರಿನ ರಸ್ತೆ, ಜಗತ್ ವೃತ್ತದಿಂದ ಗೋವಾ ಹೊಟೇಲ್ ಹಾಗೂ ಧರ್ಮಸಿಂಗ್ ಅವರ ಮನೆಯವರೆಗೆ ಇರುವ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಂಪೂರ್ಣವಾಗಿ ನಿರ್ಭಂದಿಸಿರುವುದರಿಂದ ಜನತೆ ತೊಂದರೆ ಪಡಬೇಕಾಯಿತು.
ಪರ್ಯಾಯ ರಸ್ತೆಗಳು ತೀವ್ರ ಇಕ್ಕಟ್ಟಾಗಿರುವುದರಿಂದ ವಾಹನಗಳ ದಟ್ಟನೆಯಿಂದಾಗಿ ಬಸ್, ಜೀಪ್ ಸೇರಿದಂತೆ ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿತ್ತು. ಉರಿ ಬಿಸಿಲಿನಲ್ಲಿ ಜನತೆ ವಿಪರೀತ ಯಾತನೆ ಅನುಭವಿಸಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.