ಗುಲ್ಬರ್ಗಾ

ಪಾದಯಾತ್ರೆ, ರೋಡ್ ಶೋ, ಮತಯಾಚನೆ, ಪ್ರಚಾರ

Published On :

ಕನ್ನಡಪ್ರಭ ವಾರ್ತೆ  ಜೇವರ್ಗಿ ಮೇ 3
ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಶುಕ್ರವಾರ ಜೇವರ್ಗಿಯಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಪಾದಯಾತ್ರೆ ಮೂಲಕ ಮತಯಾಚಿಸಿದರೆ,  ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಪರ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಮತಯಾಚಿಸಿರುವುದು ವಿಶೇಷವಾಗಿತ್ತು.
ಪಟ್ಟಣದ ಅಭಿವೃದ್ಧಿ: ಬಿಜೆಪಿ ಸರ್ಕಾರದ 5 ವರ್ಷದ ಆಡಳಿತಾವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಹಿಂದೆಂದೂ ಬಾರದಂತಹ 25 ಕೋಟಿ ಬೃಹತ್ ಅನುದಾನ ತಾವು ಬಿಡುಗಡೆಗೊಳಿಸಿ ಪಟ್ಟಣ ಅಭಿವೃದ್ಧಿಗೊಳಿಸಿದ್ದು, ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ತಮಗೆ ಮತ್ತೊಮ್ಮೆ ಆಶೀರ್ವದಿಸಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಸಭೆಯ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಶುಕ್ರವಾರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಮಹಾಲಕ್ಷ್ಮೀ ದೇವಸ್ಥಾನದಿಂದ ಆರಂಭವಾದ ರೋಡ್ ಶೋ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ನಂತರ ಪಟ್ಟಣದ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಮತಯಾಚಿಸಿದರು.
ಪ್ರಚಾರದಲ್ಲಿ ರಮೇಶಬಾಬು ವಕೀಲ, ಬಸವರಾಜ ಸಾಹು ಗೋಗಿ, ಡಾ. ಶಿವರಾಜ ಪಾಟೀಲ್ ಹರವಾಳ, ಗುರುಶಾಂತಯ್ಯ ಹಿರೇಮಠ, ಮರೆಪ್ಪ ಬಡಿಗೇರ, ಮಲಶೆಟ್ಟಪ್ಪಗೌಡ ಹಿರೇಗೌಡ, ಅರಣಕುಮಾರ ಅಂಗಡಿ, ಪವನ ಕುಲಕರ್ಣಿ, ಮಲ್ಲಿಕಾರ್ಜುನ ಕಲ್ಲಾ, ಭೀಮರಾವ ಮಡಿವಾಳಕರ್, ದತ್ತು ಪೂಜಾರಿ, ಅಕ್ಬರ್ ಮುಲ್ಲಾ, ಮಹಿಬೂಬ್ ಇನಾಂದಾರ, ವಿಶ್ವನಾಥ ಇಮ್ಮಣ್ಣಿ, ದೇವು ಕೋಳಕೂರ, ಚಂದನ ಮಹೇಂದ್ರಕರ್, ರಜನ್ ಪತಂಗೆ, ನಿಂಗಣ್ಣ ಭಂಡಾರಿ ಸೇರಿದಂತೆ ಕಾರ್ಯಕರ್ತರು ಇದ್ದರು.
ಅಜಯ್ ಪರ ತಾಯಿ ಪ್ರಭಾವತಿ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಪರ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ನಡೆಸಿದರು.
ಪ್ರಚಾರದಲ್ಲಿ ಅಮೀರಸಾಬ್ ಜಮಾದಾರ, ಸುಧೀಂದ್ರ ವಕೀಲ, ಸೋಫಿ ಜಮಾದಾರ, ಇಜಾಜ್ ನಮಾಜಿ, ಸಲ್ಲಿಂ ಕಣ್ಣಿ, ಖಾದರ ಗುತ್ತೇದಾರ, ಮಾರುತಿ ದಾಯಪುಲೆ, ಗುಡುಸಾಬ್ ವಡಿಗೇರಿ, ಮಹಿಬೂಬ್ ನೂರಿ, ಸುಧೀಂದ್ರ ಜೋಶಿ, ಮಹ್ಮದ್ ಯುನುಸ್, ಎಂ.ಡಿ.ಹನೀಫ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಚಿಂಚೋಳಿಯಲ್ಲಿ ತೆರೆ
ಚಿಂಚೋಳಿ ಮೀಸಲು ವಿಧಾನಸಭೆ ಮತಕ್ಷೇತ್ರಕ್ಕೆ ಮೇ 5ರಂದು ನಡೆಯುವ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ಅಂತ್ಯಗೊಳ್ಳುವುದರ ಮೂಲಕ ಚುನಾವಣಾ ಪ್ರಚಾರಕ್ಕೆ ತೆರೆ ಬಿತ್ತು.
ಬಿಜೆಪಿ ಅಭ್ಯರ್ಥಿ ರಮೇಶ ಯಾಕಾಪುರ, ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ, ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು ತಮ್ಮ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತ್ತು ಬಹಿರಂಗ ಸಭೆ ನಡೆಸಿ ಚುನಾವಣಾ ಪ್ರಚಾರ ನಡೆಸಿದರು.
ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರು ಮುಸ್ಲಿಂ ಬಾಂಧವರ ಮತಗಳ ಓಲೈಕೆಗಾಗಿ ಜುಮ್ಮಾ ಮಸೀದಿ ಹತ್ತಿರ ಬಿಸಿಲಿನಲ್ಲಿ ಕಾದು ಕುಳಿತು ಮತಯಾಚಿಸಿದ್ದು ವಿಶೇಷವಾಗಿತ್ತು. ಈ ಸಲ ಕೆಜೆಪಿ ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಏ.21ರಂದು ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರ ಪರ ಚುನಾವಣಾ ಪ್ರಚಾರ ನಡೆಸಿದರು. ಆದರೆ ಕಾಂಗ್ರೆಸ್- ಬಿಜೆಪಿ- ಜೆಡಿಎಸ್ ಪಕ್ಷಗಳಿಂದ ಸ್ಪರ್ಧಿಸಿದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾರು ಬರಲಿಲ್ಲ.
ಕಾಂಗ್ರೆಸ್ ರೋಡ್ ಶೋ
ಚಿತ್ತಾಪುರ: ಪಟ್ಟಣದಲ್ಲಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳರ ನೇತೃತ್ವದಲ್ಲಿ ಕಾರ್ಯಕರ್ತರು ಶುಕ್ರವಾರ ಮತಯಾಚನೆ ಮಾಡಿದರು.
ಚಿತಾವಲಿ ಚೌಕ್ ಮೂಲಕ ಕಪಡಾ ಬಜಾರ, ಚನತಾ ಚೌಕ್, ಸ್ಟೇಷನ್ ಪ್ರದೇಶ, ಭುವನೇಶ್ವರಿ, ಅಂಬೇಡ್ಕರ್ ಚೌಕ್ ಸೇರಿದಂತೆ ವಿವಿಧೆಡೆ ರೋಡ್ ಶೋ ನಡೆಸಿ ಮತ ನೀಡುವಂತೆ ಮನವಿ ಮಾಡಿದರು. ಸಾವಿರಾರು  ಸಂಖ್ಯೆಯಲ್ಲಿ ಮಹಿಳೆಯರು, ಪುರಷರು ಪಕ್ಷದ ಧ್ವಜ ಹಿಡಿದು ಗಮನ ಸೆಳೆದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಮುಖಂಡರಾದ ಸೋಮಶೇಖರ ಪಾಟೀಲ್, ಚಂದ್ರಶೇಖರ ಕಾಶಿ, ಡಾ. ಪ್ರಭುರಾಜ ಕಾಂತಾ, ಮುಕ್ತಾರಪಟೇಲ್, ಈರಪ್ಪ ಬೋಯಿ, ಶೀಲಾ ಕಾಶಿ, ರವೀಂದ್ರ ಸಜ್ಜನಶೆಟ್ಟಿ, ಶಿವುಕುಮಾರ ಸುಲ್ತಾನಪುರ, ನಾಗಣ್ಣ ಕಂಠಿ, ಬಾಬುವಿಯ್ಯಾ ಕಲಗುರ್ತಿ, ಬಸವರಾಜ ಸಂಗಾವಿ, ಓಂಕಾರೇಶ್ವರ ರೇಷ್ಮಿ, ಬಸವರಾಜ ಪಾಟೀಲ್, ಗಫೂರ ಕುರೇಶಿ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಮುಡಬೂಳ, ಮಾರುತಿ ಹುಳಗೋಳ, ಶಂಕರ ಚೋಕ್ಲಾ ಹಾಗೂ ಪುರಸಭೆ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಎಸ್‌ಯುಸಿಐ ರೋಡ್ ಶೋ
ಗುಲ್ಬರ್ಗ: ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಎಸ್‌ಯುಸಿಐ-ಸಿ ಜಿಲ್ಲಾ ಸಮಿತಿಯಿಂದ ಗುಲ್ಬರ್ಗ ದಕ್ಷಿಣ ಅಭ್ಯರ್ಥಿ ವಿ.ನಾಗಮ್ಮಾಳ್ ಚುನಾವಣಾ ಪ್ರಚಾರದ ನಿಮಿತ್ತ ಅಂತಿಮ ದಿನದ ಪ್ರಚಾರದ ರೋಡ್ ಶೋ ನಡೆಸಿ ಮತದಾರರ ಬೆಂಬಲ ಕೋರಲಾಯಿತು.
ಮುಖ್ಯ ರಸ್ತೆಗಳಲ್ಲಿ ನಡೆದ ಈ ರೋಡ್ ಶೋ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭಗೊಂಡು ರೇಲ್ವೆ ನಿಲ್ದಾಣ, ರಾಷ್ಟ್ರಪತಿ ವೃತ್ತ, ಕಣ್ಣಿಮಾರ್ಕೆಟ್‌ನಿಂದ ಎಂಎಸ್‌ಕೆ ಮಿಲ್‌ಗೆ ಹೋಗಿ ನಂತರ ಎಸ್.ಬಿ. ಕಾಲೇಜು ರೋಡ್‌ನಿಂದ ಆನಂದ ಹೋಟೆಲ್, ಶರಣಬಸವೇಶ್ವರ ದೇವಸ್ಥಾನ ರಸ್ತೆ ಮೂಲಕ ಲಾಲ್‌ಗಿರಿ ರಸ್ತೆ, ಆನಂತರ ಸರ್ದಾರ್ ಪಟೇಲ್ ಚೌಕ್‌ನಿಂದ ಜಗತ್ ವೃತ್ತದ ಮೂಲಕ ಸೂಪರ್ ಮಾರ್ಕೆಟ್ ಕಡೆಗೆ ಸಾಗಿತು. ಅಲ್ಲಿಂದ ಕಿರಾಣಾ ಬಜಾರ್, ಚಪ್ಪಲ್ ಬಜಾರ್ ಮೂಲಕ ತಿರಂದಾಜ್ ಚಿತ್ರಮಂದಿರ ಅಲ್ಲಿಂದ ಸರ್ಕಾರಿ ಮಹಿಳಾ ಪಿಯು ಕಾಲೇಜು ರಸ್ತೆ ಮೂಲಕ ಐವಾನ್-ಏ-ಶಾಹಿ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ವೃತ್ತಕ್ಕೆ ಸಮಾಪ್ತಿಗೊಂಡಿತು.
ಅಭ್ಯರ್ಥಿ ವಿ.ನಾಗಮ್ಮಾಳ್ ಅವರೊಂದಿಗೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್, ಜಿಲ್ಲಾ ಸಮಿತಿಯ ಸದಸ್ಯರಾದ ಕೆ.ಸೋಮಶೇಖರ್, ಶರಣಗೌಡ ಗೂಗಲ್, ಉಮಾದೇವಿ, ಗೌಸ್ ಪಟೇಲ್ ಮತ್ತಿತರ ಬೆಂಬಲಿಗರು ಪಾಲ್ಗೊಂಡಿದ್ದರು.
'ಕೆಜೆಪಿಗೆ ಐತಿಹಾಸಿಕ ಗೆಲವು'
ಆಳಂದ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯಸಾಧನೆ ಮತ್ತು ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಮತದಾರರು ಬದಲಾವಣೆ ಬಯಸಿ ಕೆಜೆಪಿಗೆ ತೋರಿದ ಇಷ್ಟೊಂದು ಉತ್ಸಾಹವೇ ತಮಗೆ ಐತಿಹಾಸಿಕ ಗೆಲವು ತಂದುಕೊಡಲಿದೆ ಎಂದು ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಪ್ರಮುಖ ರಸ್ತೆಗಳ ಮೂಲಕ ರೋಡ್ ಶೋ ಮತ್ತು ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದರು.
ಈ ಮೊದಲು ತಹಸೀಲ್ದಾರ್ ಕಚೇರಿ ಮಾರ್ಗವಾಗಿ ಮುಖ್ಯರಸ್ತೆ, ಶ್ರೀರಾಮಮಾರುಕಟ್ಟೆ, ಬಸ್ ನಿಲ್ದಾಣ, ರಜ್ವಿರೋಡ್ ಮಟಕಿ ಕ್ರಾಸ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡು ಮತ ನೀಡುವಂತೆ ಬಿ.ಆರ್. ಪಾಟೀಲ್ ಮತ್ತವರ ಬೆಂಬಲಿಗರು ಮನವಿ ಮಾಡಿದರು.
ಪಕ್ಷದ ತಾಲೂಕಾಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ್, ಬಿ.ಕೆ. ಪಾಟೀಲ್, ಮಲ್ಲೇಶಪ್ಪ ಬಿರಾದಾರ, ಗುರುಶರಣ ಪಾಟೀಲ್ ಕೊರಳ್ಳಿ, ಪಂಡಿತ ಶೇರಿಕಾರ, ರಾಹುಲ್ ಪಾಟೀಲ್, ರೇವಣಸಿದ್ದಪ್ಪ ನಾಗೂರೆ, ಶಂಭುಲಿಂಗಯ್ಯ ಸ್ವಾಮಿ, ಸುಲೆಮಾನ ಮುಕುಟ್, ಬಸೀರ ಶಾಬ್ದಿ, ಆಸೀಫ್ ಮೈಂದರ್ಗಿ, ಮಹಾಂತಪ್ಪ ಸಾಲೇಗಾಂವ, ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ್, ಗೋಪಿನಾಥ ಸಿಂಗೆ, ಬಾಬುರಾವ ಅರುಣೋದಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಗುರುನಾಥ ಪಾದಯಾತ್ರೆ
ಚಿತ್ತಾಪುರ: ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಸಿ.ಗುರುನಾಥ ಗುರುವಾರ ಪಾದಯಾತ್ರೆ ಮೂಲಕ ಪ್ರಮುಖ ಬೀದಿಗಳಲ್ಲಿ ಹಾಗೂ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕೆಜೆಪಿ ಕಚೇರಿಯಿಂದ ಹೊರಟ ಪಾದಯಾತ್ರೆ ಸ್ಟೇಷನ್ ಪ್ರದೇಶ, ಜಾಫರ್ ಗಂಜ್, ಲಾಡ್ಜಿಂಗ್ ಕ್ರಾಸ್, ಜನತಾ ಚೌಕ್, ಚಿತಾವಲಿ ಚೌಕ್, ಭುವನೇಶ್ವರಿ ಚೌಕ್, ಬಸ್ ನಿಲ್ದಾಣ, ಅಂಬೇಡ್ಕರ್ ಚೌಕ್, ಆಸರ ಮೊಹಲ್ಲಾ, ವೆಂಕಟೇಶ ನಗರ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಮತಯಾಚಿಸಿದರು.
ತಾಲೂಕಾಧ್ಯಕ್ಷ ಗೋಪಾಲ್ ರಾಠೋಡ, ಮುಖಂಡ ಬಸವರಾಜ ಬೆಣ್ಣೂರ, ಚಂದ್ರಶೇಖರ ಅವಂಟಿ, ಶಾಂತಕುಮಾರ ಮಳಖೇಡ, ನಾಗರಡ್ಡಿ ಗೋಪಸೇನ, ಮಲ್ಲಿಕಾರ್ಜುನ ರೆಡ್ಡಿ ಇಜಾರ, ಪುರಸಭೆ ಸದಸ್ಯ ಹೀರು,  ಸುಧಾಕರ ಮರಗೋಳ, ಬಸವರಾಜ ಸಿಂಪಿ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದರು.
ಮರಗೋಳದಲ್ಲಿ ಕೈ ಪ್ರಚಾರ
ಚಿತ್ತಾಪುರ: ತಾಲೂಕಿನ ಮರಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಚುನಾವಣಾ ಪ್ರಚಾರ ಜರುಗಿತು. ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ, ತಾಪಂ ಅಧ್ಯಕ್ಷ ಶರಣಗೌಡ ಪಾಟೀಲ್, ಜಿಪಂ ಸದಸ್ಯ ರಮೇಶ ಮರಗೋಳ ಮಾತನಾಡಿದರು. ಮುಖಂಡ ಶಂಕರ ಬಿರಾದಾರ, ದೇವಿಂದ್ರ ಅರಣಕಲ್ ಮಾತನಾಡಿದರು. ಮುಖಂಡರಾದ ಶಿವರಾಜ ಗುತ್ತೇದಾರ, ಮಲ್ಲಿಕಾರ್ಜುನ ಕೊಂಡಪಳ್ಳಿ, ಸಿದ್ದು ಮುಗುಟಿ, ಜಗನ್ನಾಥ ಪವಾಡಶೆಟ್ಟಿ, ಜಗನ್ನಾಥ ಗುಂಡಗುರ್ತಿ, ದೇವಿಂದ್ರ ನಾಟಿಕಾರ ಉಪಸ್ಥಿತರಿದ್ದರು. ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು.
ಗಾರಂಪಳ್ಳಿ; 'ಕೈ' ಯಾಚನೆ
ಚಿಂಚೋಳಿ: ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಉಮೇಶ ಜಾಧವ ಅವರ ಪರವಾಗಿ ಪಕ್ಷದ ಹಲವಾರು ಮುಖಂಡರು ಮತಯಾಚನೆ ಮಾಡಿದರು.
ಡಾ. ವಿನಯಕುಮಾರ ಗುತ್ತೇದಾರ, ಪ್ರವೀಣಕುಮಾರ ತೇಗಲತಿಪ್ಪಿ, ಬಸವರಾಜ ಮಲಕೂಡ, ಫಜಲ್ ಕೇಶ್ವಾರ, ಗ್ರಾಪಂ ಸದಸ್ಯ ಮಸ್ತಾನ ಅಲಿ ಮಂಜಲಿ, ಉಸ್ಮಾನ ಅಲಿ ಮಾರುಫ, ಮೋಹನ ಗುತ್ತೇದಾರ, ಮಹಿಬೂಬ್ ಅಲಿ ಕೇಶ್ವಾರ, ಬಸವಂತ ಮಾಳಗಿ, ಗುರು ಗುತ್ತೇದಾರ, ನರಸಯ್ಯ ಗಾರಂಪಳ್ಳಿ ಮುಂತಾದವರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮತ್ತು ಮತಯಾಚನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.