ಅಕ್ರಮಕ್ಕೆ ಬ್ರೇಕ್; 34 ಪ್ರಕರಣ ದಾಖಲು
ಯಾದಗಿರಿ: ಶಹಾಪುರ ತಾಲೂಕಿನ ಐಕೂರು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 44 ಬಾಕ್ಸ್ ಮದ್ಯವನ್ನು ಶುಕ್ರವಾರ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅಪ್ಪಣ್ಣ ಎಂಬವರನ್ನು ಬಂಧಿಸಲಾಗಿದ್ದು, ವಿವಿಧ ಬ್ರ್ಯಾಂಡ್ಗಳ ಸುಮಾರು 1.5 ಲಕ್ಷ ಮೌಲ್ಯದ 44 ಬಾಕ್ಸ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಆಗಮಿಸಿದ್ದ ಹೆಲಿಕಾಪ್ಟರ್ನಲ್ಲಿ ಸಿಕ್ಕ ಹಣ ಸೇರಿದಂತೆ ಒಟ್ಟು 34 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 33.60 ಲಕ್ಷ ನಗದು, 1,110 ಲೀ. ಅಕ್ರಮ ಮದ್ಯವನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ.
ಮತದಾನ ವೇಳೆ: ಚುನಾವಣಾ ಆಯೋಗ ದ ನಿರ್ದೇಶದಂತೆ ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಅವಧಿಯನ್ನು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಿಗದಿಪಡಿಸಲಾಗಿದೆ. ಎಲ್ಲ ರಾಜಕೀಯ ಪಕ್ಷದವರು, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು, ಎಲ್ಲ ಮತದಾರರು ಈ ಸಮಯದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈವರೆಗೆ 61.84 ಲಕ್ಷ ಹಣ, ಮದ್ಯ ವಶ
ಬೀದರ್: ಜಿಲ್ಲೆಯಲ್ಲಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ನಗದು, ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಜಾಫರ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಯಾವುದೇ ದಾಖಲಾತಿ ಇಲ್ಲದ 61.84 ಲಕ್ಷ ನಗದು, 1,139 ಲೀಟರ್ ಸಾರಾಯಿ, 2.6 ಲಕ್ಷ ಮೌಲ್ಯದ 552 ಲೀಟರ್ ಬೀಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಇಟಿ: 673 ಗೈರು
ಬೀದರ್: ಜಿಲ್ಲೆಯಲ್ಲಿ ಮೇ 1,2 ರಂದು ನಡೆದ ಸಿಇಟಿ ಪರೀಕ್ಷೆಯಲ್ಲಿ ಒಟ್ಟು 673 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ. ಜೀವಶಾಸ್ತ್ರ ಹಾಗೂ ಗಣಿತ ಶಾಸ್ತ್ರ ವಿಷಯಗಳಿಗೆ ಮೇ 1ರಂದು ನಡೆದ ಸಿಇಟಿ ಪರೀಕ್ಷೆಗೆ ಒಟ್ಟು 9,612 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆದರೆ 9,164 ವಿದ್ಯಾರ್ಥಿಗಳು ಹಾಜರಾಗಿದ್ದು, 448 ವಿದ್ಯಾರ್ಥಿಗಳು ಗೈರು ಹಾಜರಿದ್ದಾರೆ. ಮೇ 2ರಂದು ನಡೆದ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಷಯಗಳಿಗೆ ಒಟ್ಟು 9,614 ವಿದ್ಯಾರ್ಥಿಗಳು ಹಾಜರಾಗಬೇಕಾಗಿತ್ತು. ಆದರೆ 9,489 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, 125 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆಂದು ಡಿಡಿಪಿಐ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

