ಗುಲ್ಬರ್ಗಾ

ಕೆಜೆಪಿ- ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 4
ಮತದಾನಕ್ಕೆ ಇನ್ನೇನು 24 ಗಂಟೆ ಬಾಕಿ ಇರುವಾಗಲೇ ಮತದಾನ ಪೂರ್ವ ಹಿಂಸಾಚಾರ ಜಿಲ್ಲೆಯ ಆಳಂದ ಅಸೆಂಬ್ಲಿ ಅಂಗಳದಲ್ಲಿ ಸ್ಫೋಟಗೊಂಡಿದೆ.
ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ದಿನವಾದ ಮೇ 3ರ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬಿ.ಆರ್. ಪಾಟೀಲ್ ಅಭಿಮಾನಿ ಕೆಜೆಪಿ ಕಾರ್ಯಕರ್ತರು ಹಾಗೂ ಜೆಡಿಎಸ್‌ನ ಸುಭಾಷ್ ಗುತ್ತೇದಾರ್ ಅಭಿಮಾನಿಗಳು, ಕಾರ್ಯಕರ್ತರು ಪಡಸಾವಳಗಿ, ಚಿಂಚೋಳಿ(ಕೆ), (ಬಿ) ಮಧ್ಯೆ ಮುಖಾಮುಖಿಯಾದ ಸಂದರ್ಭ ಪರಸ್ಪರ ಮಾತಿನ ಚಕಮಕಿ, ಮಾರಾಮಾರಿ, ಕಲ್ಲು ತೂರಾಟಗಳು ನಡೆದಿವೆ.
ಪೊಲೀಸ್ ಮೂಲಗಳ ಪ್ರಕಾರ- ಸುಭಾಷ್ ಗುತ್ತೇದಾರ್ ತಮ್ಮ ಬೆಂಬಲಿಗರೊಂದಿಗೆ ಪಡಸಾವಳಗಿ, ನಾಗಲೇಗಾಂವ್, ಹೆಬಳಿ, ಸರಸಂಬಾ, ಚಿಂಚೋಳಿ(ಕೆ), (ಬಿ) ಸೇರಿದಂತೆ ಕೆಲವು ಗ್ರಾಮಗಳಿಗೆ ಭೇಟಿ ಕೊಡಲು ತೆರಳಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕೆಜೆಪಿ ಕಾರ್ಯಕರ್ತರ ಗುಂಪು ಎದುರಾಗಿದೆ. ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸುವ ಮೂಲಕ ಎರಡೂ ಗುಂಪುಗಳು ಪರಸ್ಪರ ಕಾಲು ಕೆದರಿ ಜಗಳ ಕಾದಿವೆ.
ಕಲ್ಲು ತೂರಾಟ- ಹಲವರಿಗೆ ಗಾಯ: ಈ ಹೊತ್ತಿಗೆ ಸರಿಯಾಗಿ ಕಲ್ಲು ತೂರಾಟ ನಡೆದು ವಾಹನಗಲು ಜಖಂಗೊಂಡಿವೆಯಲ್ಲದೆ ಉಭಯ ಗುಂಪುಗಳಿಗೆ ಸೇರಿರುವ 100ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗಳನ್ನು ಅನುಭವಿಸಿ ಆಸ್ಪತ್ರೆ ಸೇರಿದ್ದಾರೆ. ಈ ಹಲ್ಲೆ ಘಟನೆಯಲ್ಲಿ ದತ್ತು ಛತ್ರಿ, ಶ್ರೀಶೈಲ ಕುಂಬಾರ, ಮಹಾದೇವ ನಾಗಲೇಗಾಂವ್, ಮಹೇಶ, ಮಹಾದೇವ ಭೂಸ್ನೂರ್ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.
ಇವರಲ್ಲಿ ಕೆಲವರು ಗುಲ್ಬರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರೆ, ಇನ್ನೂ ಕೆಲವರು ಆಳಂದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಅನೇಕರು ಈ ಕಿರಿಕಿರಿಯಲ್ಲಿ ಓಡಿ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಪ್ರಕರಣದಲ್ಲಿ ಜೆಡಿಎಸ್ ಅಭ್ಯರ್ಥಿ ಸುಭಾಷ್ ಗುತ್ತೇದಾರ್- ಬೆಂಬಲಿಗರು ಹಾಗೂ ಕೆಜೆಪಿ ಹುರಿಯಾಳು ಬಿ.ಆರ್. ಪಾಟೀಲ್- ಬೆಂಬಲಿಗರು ಪರಸ್ಪರ ಪ್ರಕರಣ ದಾಖಲಿಸಿದ್ದಾರೆ.
ಕಾರಿಗೆ ಕಲ್ಲು: ಶನಿವಾರ ಜೆಡಿಎಸ್ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪುತ್ರ ಸಂತೋಷ ಗುತ್ತೇದಾರ್ ಸರಸಂಬಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಬೆಳವಣಿಗೆಯನ್ನು ಆಳಂದ ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಘಟನೆಯಲ್ಲಿ ಯಾರಿಗೂ ಹೆಚ್ಚಿನ ಅಪಾಯವಾಗಿಲ್ಲ. ಘಟನೆ ನಡೆದ ತಕ್ಷಣವೇ ಅಲ್ಲಿಂದ ಆಳಂದಕ್ಕೆ ಮರಳಿರುವ ಸಂತೋಷ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.