ಗುಲ್ಬರ್ಗಾ

ಫ್ಯಾನ್‌ಗೆ ಬ್ಯಾನ್ ಇಲ್ಲದಿದ್ದರೂ ಗಾಳಿ ಇಲ್ಲ..

Published On :

ಯಾದಗಿರಿ: ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿರುವ ಫ್ಯಾನ್‌ಗೆ ಮತಗಟ್ಟೆಯಲ್ಲಿ ನಿಷೇಧ ಇಲ್ಲದಿದ್ದರೂ ಬಹುತೇಕ ಮತಗಟ್ಟೆಗಳಲ್ಲಿ ಫ್ಯಾನ್ ಕಳಚಿಟ್ಟಿದ್ದರಿಂದ ಚುನಾವಣಾ ಸಿಬ್ಬಂದಿ ಸೆಕೆಯಿಂದ ಪರಿತಪಿಸುವಂತಾಯಿತು. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಚಿಹ್ನೆ ಫ್ಯಾನ್ ಆಗಿರುವುದರಿಂದ ಮತಗಟ್ಟೆಗಳಲ್ಲಿ ಫ್ಯಾನ್ ಇದ್ದರೆ ಕಳಚಿಡಬೇಕು ಎಂದು ಆದೇಶಿಸಲಾಗಿತ್ತು. ಆದರೆ ಈ ಬಾರಿ ಚುನಾವಣಾ ಆಯೋಗ ಫ್ಯಾನ್‌ಗೆ ನಿರ್ಬಂಧ ಹಾಕಿರಲಿಲ್ಲ. ಆದರೆ ಬಹುತೇಕ ಮತಗಟ್ಟೆಗಳು ಶಾಲಾ ಕೊಠಡಿಯಲ್ಲಿ ನಡೆಯುತ್ತಿರುವುದರಿಂದ ಆಯಾ ಶಾಲೆಯವರು ಮೊದಲೇ ಫ್ಯಾನ್ ಕಳಚಿಟ್ಟಿದ್ದರು. ಶಾಲೆಗಳಿಗೆ ರಜೆ ಬೀಳುವ ಮುನ್ನವೇ ಚುನಾವಣೆಯಲ್ಲಿ ಫ್ಯಾನ್ ಕಳಚಬೇಕಾಗಬಹುದು ಎಂಬ ಮುಂದಾಲೋಚನೆಯಿಂದ ಕಳಚಿಟ್ಟಿದ್ದರು. ನಂತರ ಗಡಿಬಿಡಿಯಲ್ಲಿ ಫ್ಯಾನ್ ಕಳಚಿ ಎಲ್ಲೋ ಇಟ್ಟರೆ ನಂತರ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಶಾಲೆಯವರು ಈ ರೀತಿ ಕ್ರಮ ಕೈಗೊಂಡಿದ್ದರು. ಇದರಿಂದ ಬಹುತೇಕ ಮತಗಟ್ಟೆಗಳಲ್ಲಿ ಫ್ಯಾನ್ ಇದ್ದ ಕುರುಹು ಕಾಣಿಸುತ್ತಿತ್ತೇ ಹೊರತು ಫ್ಯಾನ್ ಇರಲಿಲ್ಲ. ಇದರಿಂದ ಮತಗಟ್ಟೆ ಸಿಬ್ಬಂದಿ ತೀವ್ರ ಸಮಸ್ಯೆ ಎದುರಿಸುವಂತಾಯಿತು. ಸೆಕೆ ಜಾಸ್ತಿಯಿರುವುದರಿಂದ ಸಿಬ್ಬಂದಿ ಬೆವರಿನಲ್ಲಿ ತೋಯುತ್ತಿದ್ದರು.
ಬಲವಂತದ ಮತದಾನ: ಆರೋಪ
ಯಾದಗಿರಿ: ಯಾದಗಿರಿ ಮತಕ್ಷೇತ್ರದ ಕಾಟಮ್ಮನಹಳ್ಳಿ ಮತಗಟ್ಟೆಯಲ್ಲಿ ಕೆಜೆಪಿ ಅಭ್ಯರ್ಥಿ ಪರವಾಗಿ ಬಲವಂತದಿಂದ ಮತ ಹಾಕಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಜರುಗಿದೆ. ಇದರಿಂದ ಕೆಲ ಕಾಲ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಜೆಪಿ ಕಾರ್ಯಕರ್ತರು ಮತದಾರರಿಗೆ ಬಲವಂತ ಮಾಡಿ ತಮ್ಮ ಪಕ್ಷಕ್ಕೇ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಇದು ಮತದಾನಕ್ಕೆ ಆಗಮಿಸಿದ್ದವರಲ್ಲಿ ಗಬಿಬಿಲಿ ಸೃಷ್ಟಿಸಿತು. ಕೆಲ ಕಾಲ ಮತದಾನ ಪ್ರಕ್ರಿಯೆಯೂ ಸ್ಥಗಿತಗೊಂಡಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಪ.ಪಂಗಡಕ್ಕೆ ಸೇರಿದ ಮತದಾರರನ್ನು ಬೇಕೆಂದೇ ಒಂದೆಡೆ ಸೇರಿಸಲಾಗಿದೆ ಎಂದು ಆರೋಪಿಸಿ ಯಾದಗಿರಿ ಕ್ಷೇತ್ರದ ಚಟ್ನಳ್ಳಿ ಗ್ರಾಮದ ಎಸ್ಟಿ ಜನಾಂಗದವರು ಮತದಾನ ಬಹಿಷ್ಕರಿಸಿದರು. ನಂತರ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಗ್ರಾಮಕ್ಕೆ ಭೇಟಿ ನೀಡಿ ಸಮಜಾಯಿಶಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.