ಗುಲ್ಬರ್ಗಾ

ಮತಕ್ಕಾಗಿ ನಗರಗಳಿಂದ ಮರು ಗುಳೆ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 5
ಚುನಾವಣಾ ಆಯೋಗದ ಜಾಗೃತಿ ಫಲವೋ ಅಥವಾ ಅಭ್ಯರ್ಥಿಗಳ ಕರಾಮತ್ತೋ ಗೊತ್ತಿಲ್ಲ. ಕೆಲಸಕ್ಕಾಗಿ ಗುಳೆ ಹೋಗಿದ್ದ ಮತದಾರರಲ್ಲಿ ಅನೇಕರು ಭಾನುವಾರ ತಮ್ಮ ಹಕ್ಕು ಚಲಾಯಿಸಲು ಊರಿಗೆ ವಾಪಸಾಗಿದ್ದಾರೆ. ಪ್ರಮುಖ ನಗರಗಳಿಂದ ಜಿಲ್ಲೆಗೆ ಭಾನುವಾರ ಆಗಮಿಸಿದ ರೈಲು, ಬಸ್ಸುಗಳು ಗುಳೆ ಕಾರ್ಮಿಕರಿಂದಲೇ ತುಂಬಿ ಹೋಗಿತ್ತು.
  ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ ಎಲ್ಲಾ ರೈಲುಗಳು ತುಂಬಿ ತುಳುಕುತ್ತಿದ್ದವು. ಅದರಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರೇ ಇದ್ದರು. ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಯಾದಗಿರಿ ಮಾರ್ಗದಲ್ಲಿ ಸಾಗುವ ರೈಲುಗಳ ಮೂಲಕ ಜಿಲ್ಲೆಯ ಗುಳೆ ಕಾರ್ಮಿಕರು ಬಂದಿಳಿದಿದ್ದಾರೆ.
ಮತದಾನದ ಮುನ್ನಾ ದಿನವಾದ ಶನಿವಾರ ಆರಂಭವಾದ ಮರು ಗುಳೆ ಮತದಾನ ದಿನವಾದ ಭಾನುವಾರವೂ ಮುಂದುವರಿದಿತ್ತು. ಅಲ್ಲದೇ ವಿವಿಧ ನಗರಗಳಿಂದ ಜಿಲ್ಲೆಗೆ ಬರುವ ಬಸ್‌ಗಳೂ ತುಂಬಿ ತುಳುಕುತ್ತಿದ್ದವು. ಸಾವಿರಾರು ಕಾರ್ಮಿಕ ಕುಟುಂಬಗಳು ಮತದಾನಕ್ಕಾಗಿ ಜಿಲ್ಲೆಗೆ ಬಂದಿರುವುದು ವಿಶೇಷವಾಗಿದೆ.
ವಿಶೇಷ ವಾಹನ: ರೈಲು ನಿಲ್ದಾಣಕ್ಕೆ ಬಂದಿಳಿದ ಕಾರ್ಮಿಕರನ್ನು ಕರೆದೊಯ್ಯಲು ಜೀಪು, ಟಂಟಂಗಳು ಸಿದ್ಧವಾಗಿಯೇ ನಿಂತಿದ್ದವು. 15- 20 ಕಾರ್ಮಿಕರು ಗುಂಪು ಗುಂಪಾಗಿ ಬಂದಿಳಿದು, ತಮ್ಮ ಊರಿಗೆ ಹೋಗುತ್ತಿದ್ದರು.
  ನಿಲ್ದಾಣಕ್ಕೆ ಬಂದಿಳಿದ ತಕ್ಷಣ ತಮ್ಮನ್ನು ಕರೆಸಿದವನಿಗೆ ಕರೆ ಮಾಡಿ, 'ನಾವ್ ಬಂದೀವಿ. ಗಾಡಿ ಯಾಕಡಿ ಐತಿ ಹೇಳ್ರಿ' ಎಂದು ಮೊಬೈಲ್‌ನಲ್ಲಿ ಹೇಳುತ್ತಿರುವುದೂ ಕೇಳಿಬಂತು. ಇನ್ನು ಕೆಲವರು ನೇರವಾಗಿ ಬಸ್ ನಿಲ್ದಾಣಕ್ಕೆ ತೆರಳಿ ಊರಿಗೆ ಹೋಗುತ್ತಿದ್ದರು.
  ಕಾರ್ಮಿಕರನ್ನು ಕರೆತರುವ ಜಬಾವ್ದಾರಿ ವಹಿಸಿಕೊಂಡ ಏಜೆಂಟರು ರೈಲು ಬರುವ ಸಮಯದಲ್ಲಿ ನಿಲ್ದಾಣದಲ್ಲಿ ಹಾಜರಿರುತ್ತಿದ್ದರು. ಮತದಾನಕ್ಕಾಗಿ ಬಂದ ಕಾರ್ಮಿಕರಿಗೆ ಊಟೋಪಚಾರ ಮಾಡಿಸಿ ಕರೆದೊಯ್ಯುತ್ತಿದ್ದರು. ಆದ್ದರಿಂದ ಮರುಗುಳೆಯಾದ ಕಾರ್ಮಿಕರಲ್ಲಿ ಬಹುತೇಕರು ಯಾವುದೋ ಅಭ್ಯರ್ಥಿಗಾಗಿಯೇ ಬಂದವರು ಎನ್ನುವಂತಿತ್ತು.
ಅರ್ಧದಷ್ಟೂ ವಾಪಸಾಗಿಲ್ಲ: ಕೆಲಸಕ್ಕಾಗಿ ನಗರಗಳಿಗೆ ಹೋದವರಲ್ಲಿ ಅರ್ಧದಷ್ಟೂ ಕಾರ್ಮಿಕರು ವಾಪಸಾಗಿಲ್ಲ ಎಂದು ಇಲ್ಲಿಗೆ ಬಂದಿಳಿದ ಕಾರ್ಮಿಕರೇ ಹೇಳುತ್ತಾರೆ. ಗುರುಮಠಕಲ್‌ನ ಚಂಡ್ರಕಿ ಗ್ರಾಮದ ಯಮನಪ್ಪ ಅವರನ್ನು ರೇಲ್ವೆ ನಿಲ್ದಾಣದಲ್ಲೇ ಮಾತನಾಡಿಸಿದಾಗ, 'ನಮ್ಮ ಕುಂಟುಂಬದಾಗ 6 ಮತ ಐತಿ. ಆದ್ರ ಎಲ್ರೂ ಒಮ್ಮಿಕೆ ಕೆಲ್ಸ ಬಿಟ್ಟು ಬರಾಂಗಿಲ್ಲ. ಅದ್ಕಾಗಿ ನಾನು, ನನ್ ಮಗ ಬಂದೀವಿ. ಹೆಂತಿ, ಸೊಸಿ ಎಲ್ರೂ ಬೆಂಗ್ಳೂರಾಗೇ ಅದಾರ. ಮತ ಹಾಕ್ಲಿಕ್ಕೆ ಅಂತ ನಾಲ್ಕ್ ದಿನಾ ಕೆಲ್ಸಾ ಬಿಡ್ಲಿಕ್ಕೆ ಆಗಾಂಗಿಲ್ಲ. ಬಾ ಅಂತ ಹೇಳಾರ, ಅದ್ಕ ಬಂದೀವಿ. ಇನ್ನೂ ರಗಡ ಮಂದಿ ಬೆಂಗ್ಳೂರಾಗೇ ಅದಾರ' ಎಂದು ಹೇಳಿದರು.  
ಆದರೂ ನೀರಸ: ಮತದಾರರ ಜಾಗೃತಿಗಾಗಿ ಈ ಬಾರಿ ಚುನಾವಣಾ ಆಯೋಗ ತೀವ್ರ ಪ್ರಯತ್ನ ನಡೆಸಿದೆ. ಆದರೂ ಜಿಲ್ಲೆಯಲ್ಲಿ ಭಾನುವಾರ ನಡೆದ ಮತದಾನ ನೀರಸವಾಗಿತ್ತು. ಮಧ್ಯಾಹ್ನದ ವೇಳೆಗೆ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಶೇ. 23ರಷ್ಟು ಮಾತ್ರ ಮತದಾನವಾಗಿತ್ತು. ಬೆಳಗ್ಗೆಯಿಂದಲೇ ಆರಂಭವಾದ ಪ್ರಖರ ಬಿಸಿಲಿನ ಹೊಡೆತಕ್ಕೆ ಮತದಾರ ಮನೆ ಬಿಟ್ಟು ಬರಲು ಹೆದರುವಂತಿತ್ತು.
  ನಗರ ಪ್ರದೇಶದಲ್ಲಿ ಮತದಾನ ಪ್ರಕ್ರಿಯೆ ಇನ್ನಷ್ಟು ನೀರಸವಾಗಿತ್ತು. ಗ್ರಾಮೀಣ ಭಾಗದಲ್ಲಿ ಗುಳೆ ಹೋದವರಲ್ಲಿ ಶೇ. 25ರಷ್ಟು ಜನರೂ ವಾಪಸಾಗಿಲ್ಲ. ಮತದಾನದ ಮೇಲೆ ಬಿಸಿಲು ಹಾಗೂ ಗುಳೆ ಎಫೆಕ್ಟ್ ಕಾಣಿಸುತ್ತಿತ್ತು. ಈ ಎಫೆಕ್ಟ್ ಯಾವ ಅಭ್ಯರ್ಥಿಯ ಸೋಲು, ಗೆಲವಿಗೆ ಕಾರಣವಾಗುತ್ತದೆಯೋ ಎನ್ನುವುದು ಮೇ 8ರಂದು ಗೊತ್ತಾಗಲಿದೆ. ಅಲ್ಲಿಯವರೆಗೆ ಶೇಕಡಾವಾರು ಮತದಾನದ ಮೇಲೆ ಲೆಕ್ಕಾಚಾರ ಹಾಕುವಂತಾಗಿದೆ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.