ಪಿಯುಸಿ: ಮತ್ತೂ ಕೊನೆ ಸ್ಥಾನದಲ್ಲೇ ಗಟ್ಟಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 6
ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯ ಫಲಿತಾಂಶ ಶೇ.46ರಷ್ಟಾಗಿದೆ. ಹಿಂದಿನ ಮೂರು ವರ್ಷಗಳಂತೆ ಈ ಸಲವೂ ಜಿಲ್ಲೆ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಆದರೆ ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಸರಾಸರಿ ಫಲಿತಾಂಶದಲ್ಲಿ ಶೇ.14ರಷ್ಟು ಪ್ರಗತಿ ಕಾಣುವ ಮೂಲಕ ಅಲ್ಪ ತೃಪ್ತಿ ತಂದಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಸಂಜೆ ಪ್ರಕಟವಾಗಿದ್ದು, ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಪರೀಕ್ಷೆಗೆ ಕುಳಿತಿದ್ದ 6,804 ವಿದ್ಯಾರ್ಥಿಗಳ ಪೈಕಿ 3,129 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ 31ನೇ ಸ್ಥಾನದಲ್ಲಿತ್ತು. ಈ ಬಾರಿಯೂ ಅದೇ ಸ್ಥಾನದಲ್ಲಿ ಗಟ್ಟಿಯಾಗಿದೆ. ಕಳಪೆ ಫಲಿತಾಂಶವು ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ. 2011ರಲ್ಲಿ ಶೇ. 29.92ರಷ್ಟು ಫಲಿತಾಂಶ ಬಂದು ಕೊನೆಯ ಸ್ಥಾನದಲ್ಲಿತ್ತು.
ಸತತ 4ನೇ ಬಾರಿ ಕಳಪೆ: ಜಿಲ್ಲೆಯ ಪಿಯುಸಿ ಫಲಿತಾಂಶ ಸತತ 4 ವರ್ಷಗಳಿಂದಲೂ ಕಳಪೆಯಾಗಿದೆ. ಈ ವರ್ಷವೂ ಸೇರಿದಂತೆ 4ನೇ ಬಾರಿಯೂ ಜಿಲ್ಲೆ 31ನೇ ಸ್ಥಾನಕ್ಕೇ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಶೇ. 46ರಷ್ಟಾಗಿದೆ. ಕಳೆದ ವರ್ಷವೂ ಇಷ್ಟೇ ಫಲಿತಾಂಶ ಬಂದಿತ್ತು.
2011ರಲ್ಲಿ ಬಾರಿ ಶೇ. 29.92ರಷ್ಟಾಗಿತ್ತು. 2009- 10ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಪಿಯು ಫಲಿತಾಂಶ ಶೇ. 33.47 ಆಗಿತ್ತು. ಕೊನೆಯ ಸ್ಥಾನವಾದರೂ ಫಲಿತಾಂಶದಲ್ಲಿ ಏರಿಕೆಯಾಗಿದ್ದರೆ ಚಿಂತೆಗೆ ಕಾರಣಗಳಿರಲಿಲ್ಲ. ಆದರೆ, ಫಲಿತಾಂಶದಲ್ಲೂ ಹೆಚ್ಚಿನ ಏರಿಕೆ ಕಂಡು ಬಾರದಿರುವುದು ಉಪನ್ಯಾಸಕ ವರ್ಗ ಹಾಗೂ ಪಾಲಕರ ಚಿಂತೆಗೆ ಕಾರಣವಾಗಿದೆ.
ಉಪನ್ಯಾಸಕರ ಕೊರತೆ: ಜಿಲ್ಲೆಯಲ್ಲಿ ಒಟ್ಟು 45 ಪಿಯುಸಿ ಕಾಲೇಜುಗಳಿದ್ದು, ಅದರಲ್ಲಿ 23 ಸರ್ಕಾರಿ, 3 ಅನುದಾನಿತ ಹಾಗೂ 19 ಅನುದಾನರಹಿತ ಕಾಲೇಜುಗಳಿವೆ. ಆದರೆ ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಅದರಲ್ಲೂ ವಿಜ್ಞಾನ ವಿಭಾಗವಿರುವ ಕಾಲೇಜುಗಳಲ್ಲಿ ಉಪನ್ಯಾಸಕರು ಇಲ್ಲ. ಇದರಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತಿದೆ.
ಅಲ್ಲದೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಪದವಿ ಪೂರ್ವ ಹಂತದಲ್ಲಿ ಭಾಷಾ ವಿಷಯಗಳೂ ಕಠಿಣವಾಗುತ್ತಿದೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ.
ನಿರಾಸೆ ಮೂಡಿಸಿದ ಫಲಿತಾಂಶ: ಈ ಬಾರಿಯ ಪಿಯು ಫಲಿತಾಂಶ ಕಳಪೆಯಾಗಿರುವುದಕ್ಕೆ ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಇದರಿಂದ ಎಸ್ಸೆಸ್ಸೆಲ್ಸಿ ನಂತರ ಜಿಲ್ಲೆಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಬಗ್ಗೆ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಬ್ಬಿಣದ ಕಡಲೆಯಾಗುತ್ತಿದೆ. ಈ ಫಲಿತಾಂಶ ಪಾಲಕರಲ್ಲೂ ಆತಂಕ ಮೂಡಿಸಿದ್ದು, ಸರ್ಕಾರ ಮುಂದಿನ ದಿನಗಳಲ್ಲಾದರೂ ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಆಗ್ರಹ.
ರಿಪೀಟರ್ಸ್ ಸಮಸ್ಯೆ: ಈ ಬಾರಿ ಪರೀಕ್ಷೆ ಬರೆದ 6,804 ವಿದ್ಯಾರ್ಥಿಗಳ ಪೈಕಿ ಹೊಸದಾಗಿ ಪರೀಕ್ಷೆ ಬರೆದವರ ಸಂಖ್ಯೆ 4,103. ಆದರೆ 2,114 ರಿಪೀಟರ್ಸ್ ಆಗಿದ್ದಾರೆ. ಅಲ್ಲದೆ, 587 ವಿದ್ಯಾರ್ಥಿಗಳು ಬಾಹ್ಯವಾಗಿ ಪರೀಕ್ಷೆ ಬರೆದಿದ್ದಾರೆ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ ಎಂದು ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಂಕ್ರಪ್ಪ ಗುಳಬಾಳ ತಿಳಿಸಿದ್ದಾರೆ. ಏನೇ ಆದರೂ ಕಳಪೆ ಸಾಧನೆಗೆ ಈಗ ಹೊಣೆ ಹೊರುವ ಕಾಲ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

