ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ ಶೇ.78.47ರಷ್ಟು ಫಲಿತಾಂಶ

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಮೇ 6
ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಶೇ.78.47ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಜಿಲ್ಲೆ 28ನೇ ಸ್ಥಾನದಲ್ಲಿದೆ.
ಕಳೆದ ಬಾರಿಗಿಂತ ಜಿಲ್ಲೆ 5 ಸ್ಥಾನ ಮೇಲೇರಿದ್ದು, ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ. ಕಳೆದ ಬಾರಿ ಶೇ. 69.79ರಷ್ಟು ಫಲಿತಾಂಶ ಬಂದು ರಾಜ್ಯ ಮಟ್ಟದಲ್ಲಿ ಜಿಲ್ಲೆ 33ನೇ ಸ್ಥಾನದಲ್ಲಿತ್ತು. ಜಿಲ್ಲೆಯ 184 ಪ್ರೌಢಶಾಲೆಗಳ 9,728 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರಲ್ಲಿ 7,634 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರದ್ದೇ ಮೇಲುಗೈ: ಪರೀಕ್ಷೆ ಎದುರಿಸಿದ 5,735 ಬಾಲಕರಲ್ಲಿ 4,388 ಮಕ್ಕಳು ಉತ್ತೀರ್ಣರಾಗಿ ಶೇ.76.51 ಫಲಿತಾಂಶ ದಾಖಲಿಸಿದ್ದಾರೆ. 3,993 ಬಾಲಕಿಯರು ಪರೀಕ್ಷೆ ಎದುರಿಸಿ 3,246 ವಿದ್ಯಾರ್ಥಿನಿಯರು ಪಾಸಾಗುವ ಮೂಲಕ ಶೇ. 81.29ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಂತೆ ಇಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ. 9ರಷ್ಟು ಹೆಚ್ಚು: ಕಳೆದ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.69.79 ಆಗಿತ್ತು. ಈ ಬಾರಿ ಸುಮಾರು ಶೇ. 9ರಷ್ಟು ಹೆಚ್ಚಾಗಿದ್ದು, ಹಿಂದುಳಿದ ಜಿಲ್ಲೆಯ ಮಟ್ಟಿಗೆ ಇದು ಉತ್ತಮ ಸಾಧನೆ ಎಂದೇ ಪರಿಗಣಿಸಬಹುದಾಗಿದೆ. ಕಳೆದ ಬಾರಿ ಜಿಲ್ಲೆ 33ನೇ ಸ್ಥಾನದಲ್ಲಿತ್ತು. ಈ ಬಾರಿ 28ನೇ ಸ್ಥಾನದಲ್ಲಿರುವ ಮೂಲಕ 5 ಸ್ಥಾನ ಭಡ್ತಿ ಪಡೆದಂತಾಗಿದೆ. 2011- 12ರಲ್ಲಿ  ಜಿಲ್ಲೆಯ ಫಲಿತಾಂಶ ಶೇ. 75.68 ಆಗಿ, ರಾಜ್ಯ ಮಟ್ಟದಲ್ಲಿ 28ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಮತ್ತೆ ಎರಡು ವರ್ಷದ ಹಿಂದಿನ ಸ್ಥಾನಕ್ಕೆ ಮರುಳಿದಂತಾಗಿದೆ.
ಕಳಪೆ ಫಲಿತಾಂಶಕ್ಕೇನು ಕಾರಣ?: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆಯಾಗಲು ಹಲವು ಕಾರಣಗಳಿವೆ. ಶೈಕ್ಷಣಿಕ ವಾತಾವರಣ ಇಲ್ಲದಿರುವುದು, ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಂಬೀರ ಪರಿಣಾಮ ಬೀರುತ್ತಿದೆ. ಇದಕ್ಕಿಂತ ಮುಖ್ಯವಾಗಿ ಜಿಲ್ಲೆಯ ಹೈಸ್ಕೂಲ್ಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ.
ಜಿಲ್ಲೆಯ 119 ಸರ್ಕಾರಿ ಹೈಸ್ಕೂಲ್ಗಳಲ್ಲಿ 150ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿಯಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ಸ್ಥಿತಿಯಿದ್ದು, ಅನೇಕ ಶಾಲೆಗಳಲ್ಲಿ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯ ಶಿಕ್ಷಕರೇ ಇಲ್ಲ. ಇನ್ನು ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿರುವ ಉದಾಹರಣೆಯೂ ಇದೆ. ಇದರಿಂದ ಅಧಿಕಾರಿಗಳು ಏನೇ ಪ್ರಯತ್ನ ಮಾಡಿದರೂ ಫಲಿತಾಂಶದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತಿಲ್ಲ.
ಪ್ರಯತ್ನದ ಫಲವಾಗಿ ತಪ್ಪಿದ ಅಪಖ್ಯಾತಿ: ಇಷ್ಟೆಲ್ಲ ಕೊರತೆ ಮಧ್ಯೆಯೂ ಈ ಬಾರಿ ಡಿಡಿಪಿಐ ರಾಮಾಂಜನೇಯ ಅವರು ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಪ್ರಯತ್ನ ನಡೆಸಿದ್ದರು. ಆರಂಭದಿಂದಲೂ ಸರಣಿ ಪರೀಕ್ಷೆ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ಇತ್ಯಾದಿ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸಲಾಗಿತ್ತು. ಆದ್ದರಿಂದ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿತ್ತು. ಜತೆಗೆ ಯಾವುದೇ ಪರೀಕ್ಷಾ ಅಕ್ರಮ ನಡೆಯಲು ಆಸ್ಪದ ನೀಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಫಲಿತಾಂಶ ಸ್ವಲ್ಪ ಸುಧಾರಿಸಿದ್ದು, ಇನ್ನಷ್ಟು ಪ್ರಯತ್ನದ ಅಗತ್ಯವಿದೆ. ಆದರೆ ರಾಜ್ಯ ಮಟ್ಟದಲ್ಲಿ ಕೊನೆ ಸ್ಥಾನದ ಹಣೆಪಟ್ಟಿಯ ಅಪಖ್ಯಾತಿಯಿಂದ ಜಿಲ್ಲೆ ತಪ್ಪಿಸಿಕೊಂಡಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.