ಗುಲ್ಬರ್ಗಾ

ಸಚಿವಗಿರಿಗೆ ಲಾಬಿ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 10
ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಆ ಪಕ್ಷದ ಹಿರಿಯ ಶಾಸಕರಲ್ಲೀಗ ಸಚಿವ ಸ್ಥಾನದ ಆಕಾಂಕ್ಷೆ ಗರಿಗೆದರಿವೆ.
  ಈ ಹಿಂದೆ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿ ಅನುಭವ ಹೊಂದಿರುವ ಇಬ್ಬರು ಮಾಜಿ ಸಚಿವರು ಈ ಬಾರಿ ಆಯ್ಕೆಯಾಗಿದ್ದು, ಈ ಬಾರಿಯೂ ಪ್ರಮುಖ ಖಾತೆ ಪಡೆಯುವ ನಿರೀಕ್ಷೆಯಿದೆ.
  ಯಾದಗಿರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ. ಎ.ಬಿ. ಮಾಲಕರೆಡ್ಡಿ ಅವರದ್ದು ಈಗಿನ ಗೆಲವು 5ನೇಯದ್ದು. ಈ ಹಿಂದೆ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
  ಗುರುಮಠಕಲ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಾಬುರಾವ ಚಿಂಚನಸೂರ ಅವರೂ ಕೃಷ್ಣ ಸರ್ಕಾರದಲ್ಲಿ ಸಣ್ಣ ಉಳಿತಾಯ ಖಾತೆ ಮಂತ್ರಿಯಾಗಿದ್ದರು. ಅಲ್ಲದೆ, ವಿವಿಧ 7 ಖಾತೆಗಳ ಜವಾಬ್ದಾರಿ ಹೊತ್ತು ಸಪ್ತ ಖಾತೆ ಮಂತ್ರಿ ಎಂದೇ ಖ್ಯಾತಿ ಗಳಿಸಿದವರು.
  ಚಿತ್ತಾಪುರ ಕ್ಷೇತ್ರದಿಂದ 3, ಗುರುಮಠಕಲ್ ಕ್ಷೇತ್ರದಿಂದ 2 ಸೇರಿದಂತೆ 5 ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರು. ಈ ಅನುಭವಗಳ ಹಿನ್ನೆಲೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರಿಗೂ ಮತ್ತೆ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತ.
ಅನುಭವಿ ನಾಯಕರು: ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸುವಾಗ ಜಾತಿ ಲೆಕ್ಕಾಚಾರವನ್ನೂ ಪರಿಗಣಿಸಲಾಗುತ್ತದೆ ಎಂಬುದು ಸತ್ಯ. ಈ ನಿಟ್ಟಿನಲ್ಲಿ ಬಾಬುರಾವ ಚಿಂಚನಸೂರ ಅವರು ಹಿಂದುಳಿದ ಕೋಲಿ ಕಬ್ಬಲಿಗ ಸಮಾಜದವರಾಗಿದ್ದಾರೆ. ಅವರೇ ಹೇಳುವಂತೆ ತಾವು ಕೋಲಿ ಸಮಾಜದಿಂದ ಆಯ್ಕೆಯಾಗಿರುವ ರಾಜ್ಯದ ಏಕೈಕ ಶಾಸಕ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಅದು ಸಿಗುವುದು ಖಚಿತ ಎಂದೂ ಹೇಳಿದ್ದಾರೆ.
  ಅಲ್ಲದೇ ಸ್ಥಾನಮಾನ ಪಡೆಯುವಲ್ಲಿ ಅವರು ಚಾಣಾಕ್ಷರಾಗಿರುವುದರಿಂದ ಈ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಅವರನ್ನು ಕಡೆಗಣಿಸಲು ಕಾರಣಗಳಿಲ್ಲ. ಇನ್ನು ಡಾ. ಮಾಲಕರೆಡ್ಡಿ ಅವರು ಪ್ರಬಲ ಲಿಂಗಾಯತ ಸಮಾಜಕ್ಕೆ ಸೇರಿದವರಾಗಿದ್ದು, ಈ ಹಿಂದೆ ಪ್ರಮುಖ ಖಾತೆ ನಿರ್ವಹಿಸಿದ ಅನುಭವವೂ ಇದೆ.
  ಅಲ್ಲದೇ ಮುತ್ಸದ್ಧಿ, ರಾಜಕೀಯದ ಅಪಾರ ಅನುಭವವನ್ನೂ ಅವರು ಹೊಂದಿದ್ದಾರೆ. ಆದ್ದರಿಂದ ಇವರಿಗೆ ಮಂತ್ರಿ ಹುದ್ದೆ ಕೊಡಲು ಯಾರೂ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಅವಿಭಜಿತ ಗುಲ್ಬರ್ಗ ಜಿಲ್ಲೆಯಲ್ಲಿದ್ದಾಗಲೇ ಈ ಇಬ್ಬರೂ ಸಚಿವರಾಗಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಶಾಸಕರಿಗೆ ಮಂತ್ರಿ ಯೋಗ ಮತ್ತೊಮ್ಮೆ ಕೂಡಿ ಬಂದಿದೆ ಎಂದೇ ಹೇಳಲಾಗುತ್ತಿದೆ. ಅಲ್ಲದೇ ಪ್ರಮುಖ ಖಾತೆಯೂ ಸಿಗುವ ಸಾಧ್ಯತೆಯಿದೆ.
ಖರ್ಗೆ ಕೃಪಕಟಾಕ್ಷ: ಸುರಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ರಾಜಾ ವೆಂಕಟಪ್ಪ ನಾಯಕ ಅವರ ಹೆಸರೂ ಈಗ ಮಂತ್ರಿ ಸ್ಥಾನದ ಪಟ್ಟಿಯಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೆಂಕಟಪ್ಪ ನಾಯಕ ತೋರಿರುವ ನಿಷ್ಠೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ಟಿಕೆಟ್ ಗಿಟ್ಟಿಸಿಕೊಂಡ ವೆಂಕಟಪ್ಪ ನಾಯಕ ನಂತರ ಮಾಜಿ ಸಚಿವ ರಾಜುಗೌಡರಿಗೆ ಸೆಡ್ಡು ಹೊಡೆದು ಗೆಲ್ಲುವಲ್ಲಿಯೂ ಯಶಸ್ವಿಯಾದರು.
  ಇವರು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎಸ್‌ಟಿಗೆ ಸೇರಿದವರಾಗಿದ್ದಾರೆ. ಆದ್ದರಿಂದ ಜಾತಿ ಲೆಕ್ಕಾಚಾರ ಬಂದಾಗ ಇವರು ಪ್ರಮುಖವಾಗಿ ಕಾಣಿಸಬಹುದು. ಅಲ್ಲದೇ ಖರ್ಗೆ ಅವರು ತಮ್ಮ ಶಿಷ್ಯನಿಗೆ ಉತ್ತಮ ಸ್ಥಾನ ಕೊಡಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಖರ್ಗೆ ಮಾತನ್ನು ಮೀರಿ ರಾಜಕೀಯ ಮಾಡುವ ವ್ಯಕ್ತಿ ಅಲ್ಲದ್ದರಿಂದ ಖರ್ಗೆ ಸೂಚಿಸಿದರೆ ಮಾತ್ರ ಸಚಿವ ಸ್ಥಾನ ಸಿಗಬಹುದು. ಇಲ್ಲದಿದ್ದರೆ ಪ್ರಮುಖ ನಿಗಮ, ಮಂಡಳಿಯೊಂದರ ಅಧ್ಯಕ್ಷರಾದರೂ ಆಗಬಹುದು.
ತಪ್ಪಿದ ಪ್ರಬಲ ಪೈಪೋಟಿ: ಶಹಾಪುರದ ಶರಣಬಸಪ್ಪ ದರ್ಶನಾಪುರ ಅವರೂ ಮಾಜಿ ಸಚಿವರಾಗಿ ಅನುಭವ ಹೊಂದಿದ್ದರು. ಆದರೆ ಈ ಬಾರಿ ಮತದಾರ ಅವರ ಕೈ ಹಿಡಿಯದ್ದರಿಂದ ಮಾಲಕರೆಡ್ಡಿ ಹಾಗೂ ಚಿಂಚನಸೂರ ಅವರಿಗೆ ಸಚಿವ ಸ್ಥಾನಕ್ಕೆ ಎದುರಾಗಬಹುದಿದ್ದ ಪ್ರಬಲ ಪೈಪೋಟಿ ನೀಗಿದಂತಾಗಿದೆ.
  ಕಾಂಗ್ರೆಸ್ ಭದ್ರಕೋಟೆ ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಸುಭದ್ರವಾಗಲು ಪುನರಾಯ್ಕೆಯಾಗಿರುವ ಮಾಲಕರೆಡ್ಡಿ ಹಾಗೂ ಚಿಂಚನಸೂರಗೆ ಮಂತ್ರಿ ಸ್ಥಾನ ದೊರೆಯುವ ಎಲ್ಲ ಸಾಧ್ಯತೆಯಿದೆ.
  ಆದರೆ ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್‌ನಲ್ಲಿ ಒಂದು ಹಂತದವರೆಗೆ ಮಾತ್ರ ಪೈಪೋಟಿ ಮಾಡಬಹುದೇ ಹೊರತು ನಂತರ ಸಾಧ್ಯವಿಲ್ಲ. ಆದರೂ ತಲಾ 5 ಬಾರಿ ಶಾಸಕರಾಗಿ ಆಯ್ಕೆಯಾದ, ಸಚಿವರಾಗಿ ಅನುಭವ ಹೊಂದಿರುವುದರಿಂದ ಮಾಲಕರೆಡ್ಡಿ ಹಾಗೂ ಚಿಂಚನಸೂರ ಕೆಂಪು ದೀಪದ ಕಾರು ಗ್ಯಾರಂಟಿ ಎಂದೇ ವಿಶ್ಲೇಷಿಸಲಾಗುತ್ತಿದೆ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.