ಗುಲ್ಬರ್ಗಾ

ಭೀಕರ ಜಲಕ್ಷಾಮಕ್ಕೆ ಕೆಂಡದ ನೆಲ ತತ್ತರ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಮೇ 11
ಉರಿ ಬಿಸಿಲಿನಿಂದಾಗಿ ಬಿಸಿಲೂರು, ಕೆಂಡದ ನೆಲವೆಂದೇ ಹೆಸರಾಗಿರುವ ಗುಲ್ಬರ್ಗ ಜಿಲ್ಲಾದ್ಯಂತ ಈಗ ಅತ್ಕ್ಷರಶಃ ಜಲಕ್ಷಾಮ. ಕಳೆದ 5 ವರ್ಷಗಳಲ್ಲೇ ಕಾಡದಷ್ಟು ಉರಿ ಬಿಸಿಲು ಈ ಬಾರಿ ಜಿಲ್ಲೆಯನ್ನು ಕಾಡಲಾರಂಭಿಸಿದ್ದರಿಂದ ವೈಶಾಖದ ಈ ದಿನಗಳಲ್ಲಿ ಜಿಲ್ಲೆಯ ಹೆಚ್ಚು ಕಡಿಮೆ 500 ಹಳ್ಳಿಗಳಲ್ಲಿ ನೀರಿನ ಬರ ಅಮರಿಕೊಂಡಿದೆ.
  ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗ್ರಾಮಗಳ ಪಟ್ಟಿ 3600 ದಾಟಿರಲಿಲ್ಲ. ಆದರೆ ಈ ಬಾರಿ ಈ ಯಾದಿ 500 ತಲುಪಿರುವುದು ಜಿಲ್ಲೆಯ ಜಲಕ್ಷಾಮದ ಭೀಕರತೆಗೆ ಹಿಡಿದ ಕನ್ನಡಿ ಎಂದೇ ಅರ್ಥೈಸಲಾಗುತ್ತಿದೆ.
ಮಗ್ನವಾಗಿದ್ದ ಜಿಲ್ಲಾಡಳಿತ: ಕಳೆದ ಒಂದೂವರೆ ತಿಂಗಳು ಅಸೆಂಬ್ಲಿ ಚುನಾವಣೆ ಗಡಿಬಿಡಿ. ಇದರಲ್ಲೆ ಮಗ್ನವಾಗಿದ್ದ ಜಿಲ್ಲಾಡಳಿತ, ತಾಲೂಕು ಆಡಳಿತ, ಹೋಬಳಿ, ಪಂಚಾಯ್ತಿ ಹಂತದಲ್ಲಿನ ಆಡಳಿತಗಳೆಲ್ಲವೂ ನೀರಿನ ಸಮಸ್ಯೆಯನ್ನು ಸಮಸ್ಯೆ ಎಂದು ಪರಿಗಣಿಸಿರಲೇ ಇಲ್ಲ. ಈಗ ಚುನಾವಣೆ ಮುಗಿದಿವೆ. ಜಲಕ್ಷಾಮ ತನ್ನ ಹೆಡೆ ಎತ್ತಿ ನಿಂತಿದ್ದರಿಂದ ಎಲ್ಲಾ ಹಂತದ ಆಡಳಿತದಲ್ಲಿ ಸಂಚಲನ ಮೂಡಿದೆ. ಆರಂಭದಲ್ಲೇ ಇದನ್ನು ನಿಯಂತ್ರಿಸಬೇಕಿತ್ತು.
  ಸ್ಥಳೀಯ ಜಿಲ್ಲಾ ಪಂಚಾಯ್ತಿ ನಡೆಸಿರುವ ಕುಡಿಯುವ ನೀರಿನ ವಾಸ್ತವ ಸಂಗತಿಗಳ ಸಮೀಕ್ಷೆಯಿಂದ ಅತ್ಯಂತ ಭಯಂಕರ ಅಂಶಗಳು ಹೊರಬಿದ್ದಿವೆ. ಆದರೂ ಸಮಸ್ಯೆ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದೇ ಜಿಪಂ ಆಡಳಿತಕ್ಕೆ ತಿಳಿಯದಂತಾಗಿದೆ. ಇವೆಲ್ಲದರ ನಡುವೆ ಹಳ್ಳಿಗರು ಮೇಲೆ ಉರಿ ಬಿಸಿಲು, ಕೊಡ ನೀರಿಗೂ ಪರದಾಟ ಎಂದು ಬವಣೆಯ ಬದುಕಿನ ಬೇಸಿಗೆಯನ್ನು ಕಳೆಯುವಂತಾಗಿದೆ.
ಆಳಂದದಲ್ಲಿ ಕಣ್ಣೀರು: ಜಿಲ್ಲೆಯಲ್ಲಿ ಅತಿ ಹೆಚ್ಚು ನೀರಿನ ಬವಣೆ ಎದುರಿಸುತ್ತಿರುವವರು ಆಳಂದ ಜನತೆ. ಇಲ್ಲಿ ಕೊಡ ನೀರಿಗೂ ಮೈಲುಗಟ್ಟಲೇ ಅಲೆಯುವಂತಹ ದುರವಸ್ಥೆ ಕಾಣಿಸಿಕೊಂಡಿದೆ. ಅಮರ್ಜಾ ನದಿಯಲ್ಲಿ ಸೆಲೆಯೇ ಇಲ್ಲ. ಅಮರ್ಜಾ ಅಣೆಕಟ್ಟೆಯಲ್ಲಿಯೂ ನೀರಿಲ್ಲ. ಹೀಗಾಗಿ ಅಮರ್ಜಾ ನಂಬಿದ ಆಳಂದ ಜನತೆಗೆ ಈಗ ಆನಂದವೇ ಇಲ್ಲದಂತಾಗಿದೆ. ಕೊಡ ನೀರಿಗೂ ಕುದುರೆ ಗಾಡಿ, ಎತ್ತಿನ ಗಾಡಿ ಮಾಡಿ ಅಲೆಯುವಂತಾಗಿದೆ. ಅನೇಕ ಖಾಸಗಿ ತೋಟಗಳಿಗೂ ಸುತ್ತಾಡಿ ನೀರಿಗಾಗಿ ಕಸರತ್ತು ಮಾಡುವಂತಾಗಿದೆ.   ನಮ್ಮ ಪಾಲಿಗೆ ಈ ಕರ್ಮ ಬಂದದ. ಯಾರೂ ಕೇಳುವಲ್ರು. ಇಲೆಕ್ಷನ್‌ದಾಗ ಎಲ್ರೂ ಇದ್ದಾರ. ನಮ್ಮ ಕಡಿ ನೋಡವಲ್ರು. ಈಗ ಇಲೆಕ್ಷನ್ ಮುಗದ್ರೂ ಬರೋವಲ್ರು ಎಂದು ಆಳಂದದ ಹಳ್ಳಿಗರು 'ಕನ್ನಡಪ್ರಭ' ಜೊತೆ ಮಾತನಾಡುತ್ತ ತಮ್ಮ ನೀರಿಗಾಗಿ ನಡೆಸುತ್ತಿರುವ ತೊಂದರೆಗಳನ್ನ ಪಟ್ಟಿ ಮಾಡಿದರು.
  ಅಚ್ಚರಿಯ ಸಂಗತಿ ಎಂದರೆ ಜಿಲ್ಲೆಯ ಆಳಂದ ತಾಲೂಕು ಒಂದರಲ್ಲೇ ಬರುವ 25 ಹಳ್ಳಿಗಳಲ್ಲಿ ಸಮಸ್ಯೆ ಭಯಂಕರವಾಗಿದೆ. ಹೀಗಾಗಿ ಈ ಹಳ್ಳಿಗಳೆಲ್ಲ ನೀರಿನ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ.
  ಚಿತ್ತಾಪುರ, ಚಿಂಚೋಳಿಯಲ್ಲಿ 2 ಗ್ರಾಮಗಳು, ಜೇವರ್ಗಿ, ಗುಲ್ಬರ್ಗ ತಾಲೂಕಿನ 6 ಗ್ರಾಮಗಳಿಗೂ ಟ್ಯಾಂಕರ್ ನೀರೇ ಗತಿಯಾಗಿದೆ. ಟ್ಯಾಂಕರ್ ನೀರು ಅದೆಷ್ಟು ಸಾಲುತ್ತದೆ. ನೀರಿಗಾಗಿ ನಿತ್ಯವೂ ಜಗಳ ಇಲ್ಲಿಯ ನೋಟಗಳಾಗುತ್ತಿವೆ ಎಂದು ಗ್ರಾಮಸ್ಥರೇ ಹೇಳುತ್ತಿದ್ದಾರೆ. ಚಿಂಚೋಳಿಯ ಸೇರಿ ಬಕನಳ್ಳಿ ತಾಂಡಾದಲ್ಲಂತೂ ನೀರಿಗಾಗಿ ತಾಂಡಾ ಮಂದಿ ನಿತ್ಯವೂ ಬಡಿದಾಡಲೇಬೇಕು. ಮಳೆ ಬೇಗನೆ ಬಾರದೆ ಹೋದಲ್ಲಿ, ಇದೇ ಉರಿ ಬೇಸಿಗೆ ದಿನಗಳೇ ಮುಂದುವರಿದಲ್ಲಿ ಅಫಜಲ್ಪುರ, ಜೇವರ್ಗಿ, ಚಿತ್ತಾಪುರ, ಗುಲ್ಬರ್ಗ ತಾಲೂಕಿನ ಇನ್ನೂ 87 ಕ್ಕೂ ಹೆಚ್ಚು  ಗ್ರಾಮಗಳಿಗೆ ನೀರಿನ ಟ್ಯಾಂಕರ್ ಓಡಿಸುವ ಪರಿಸ್ಥಿತಿ ತಲೆದೋರಬಹುದು ಎಂಬುದು ಜಿಲ್ಲಾಡಳಿತದ ನೂಲಗಳ ವಿವರಣೆ.
  ಜಾನುವಾರುಗಳ ಗೋಳಂತೂ ದೇವರೇ ಬಲ್ಲ. ನದಿಗಳು, ಕೆರೆಕಟ್ಟೆಗಳೇ ಬತ್ತಿರುವುದರಿಂದ ದನಕರುಗಳು ಹನಿ ನೀರಿಗೂ ಪರದಾಡುತ್ತಿವೆ. ನೀರಿಗಾಗಿ ಅಲೆಯುತ್ತಿರುವ ಜಾನುವಾರಗಳ ನೋಟ ಜಿಲ್ಲೆಯಲ್ಲಿ ಎಲ್ಲೆಡೆ ಕಂಡು ಬರಲಾರಂಭಿಸಿದೆ. ಜಿಲ್ಲಾಡಳಿತಗಳು ಜನವಸತಿ ಸ್ಥಳಗಳಿಗೆ ನೀರಿನ ಟ್ಯಾಂಕರ್ ಪೂರೈಸುವಂತೆ ಜಾನುವಾರುಗಳಿಗಾಗಿ ಪಂಚಾಯತಿ ಹಂತದಲ್ಲಿ, ಹೋಬಳಿ ಮಟ್ಟದಲ್ಲಿ ಅದ್ಯಾಕೆ ನೀರಿನ ಅರವಟ್ಟಿಗೆಗಳನ್ನು ಆರಂಭಿಸಬಾರದು ಈ ಕೆಲಸಕ್ಕೂ ಮೀನಮೇಷ ಯಾಕೆ ಎಂಬುದೇ ಈಗಿನ ಪ್ರಶ್ನೆ.
ಸಮಸ್ಯೆಯುಳ್ಳ 500 ಹಳ್ಳಿಗಳ ಪೈಕಿ 30ಕ್ಕೆ ಟ್ಯಾಂಕರ್ ನೀರು
1. ಜಿಲ್ಲೆಯ 1, 250 ಹಳ್ಳಿಗಳಲ್ಲಿ 500 ಹಳ್ಳಿಗಳಿಗೆ ನೀರಿನ ಸಮಸ್ಯೆ ಕಾಡಲಾರಂಭಿಸಿದೆ
2. ಇದು ಜಿಲ್ಲೆಯ ಹಳ್ಳಿಗಳ ಶೇ. 50 ರಷ್ಟು ಭಾಗ ಸಮಸ್ಯಾತ್ಮಕ ಎಂದು ಬಿಂಬಿಸಿದೆ.
3. 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲ ಮೂಲ ಇಲ್ಲ. 2 ತಿಂಗಳಿಂದ ಟ್ಯಾಂಕರ್ ನೀರೆ ಆಧಾರ.
4. ಭೀಮಾ, ಅಮರ್ಜಾ, ಮುಲ್ಲಾಮಾರಿ, ಬೆಣ್ಣೆತೋರಾ ನಜಿಗಳಿದ್ದರೂ ಇವೆಲ್ಲವೂ ಬತ್ತಿದ್ದರಿಂದ ಈ ನದಿ ತೀರದ ಹಳ್ಳಿಗಳಲ್ಲೂ ಭೀಕರ ನೀರಿನ ಸಮಸ್ಯೆ
5. ಅಫಜಲ್ಪುರ, ಚಿಂಚೋಳಿ, ಸೇಡಂ, ಆಳಂದ, ಚಿತ್ತಾಪುರಗಳಲ್ಲಿ ನೀರಿನ ಸಮಸ್ಯೆ ಉಲ್ಬಣ
6. ಕೊಳವೆ ಬಾವಿ ತೋಡಿದರೂ ಅಂತರ್ಜಲ ಮಟ್ಟ 400 ಅಡಿ ದಾಟಿದೆ.
7. ಸರ್ಕಾರ ಕೊರೆಯುವ ಕೊಳವೆ ಬಾವಿಗಳಲ್ಲಿ ಅರ್ಧಕ್ಕರ್ಧ ವಿಫಲವಾಗುತ್ತಿವೆ. ನೀರು ಅತಿ ದೂರ. ಅವು ಕಾಯಂ ಜಲಮೂಲವಾಗಿ ಮುಂದುವರಿಯದೆ ಮಧ್ಯೆ ನಿಲ್ಲುತ್ತಿವೆ.
8. ಬಬಲಾದ, ಪಾಣೆಗಾಂವ್‌ನಂತಹ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ದೇವರೇ ಬಲ್ಲ.
9. ಗುಲ್ಬರ್ಗ ಗ್ರಾಮೀಣ ಭಾಗದಲ್ಲಂತೂ ಕರೆಂಟ್ ಕೈ ಕೊಡುತ್ತಿರುವುದರಿಂದ ನೀರಿಗಾಗಿ ಪರದಾಟ ಮುಗಿಲು ಮುಟ್ಟಿದೆ.
10.  ಜಲಮೂಲವಿದ್ದಲ್ಲಿ ಕರೆಂಟ್ ಕೈ ಕೊಟ್ಟರೆ ಅಲ್ಲಿಯೂ ನೀರಿನ ಬವಣೆ ಶುರು.
ಕ್ಯಾರೆ ಎನ್ನದ ಜಿಲ್ಲಾಡಳಿತ
ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ, ಅಲ್ಲಿನ ಸವಲತ್ತುಗಳ ಬಗ್ಗೆ ಜಿಲ್ಲಾಡಳಿತ ಸಭೆ ನಡೆಸುತ್ತದೆ. ಈ ಬಾರಿಯೂ ಸಭೆಯೇನೋ ನಡೆಯಿತು. ಆದರೆ ಚುನಾವಣೆಯಿಂದಾಗಿ ಸಭೆಯಲ್ಲಿನ ಸಂಗತಿಗಳು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗಲಿಲ್ಲ. ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಜಗದೀಶ, ಜಿಪಂ ಸಿಇಓ ಪಲ್ಲವಿಯವರು ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೆ ಬಂತು. ಈ ಸಭೆ ಜರುಗಿ 1 ತಿಂಗಳಾದರೂ ಇಂದಿಗೂ ಯಾವ ಗ್ರಾಮಗಳಲ್ಲಿಯೂ ಸಮಸ್ಯೆ ಕರಗಿಲ್ಲ.

-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.