ಜಾತಿ ಪ್ರಮಾಣಪತ್ರಕ್ಕೆ ಅಫಿಡವಿಟ್ ಅನಗತ್ಯ
ಕೆಂಭಾವಿ: ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ನೂತನವಾಗಿ ಹೋಬಳಿ ಮಟ್ಟದಲ್ಲಿ ಪ್ರಾರಂಭಿಸಿರುವ ಅಟಲ್ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆದಾಯ, ಜಾತಿ ಇನ್ನಿತರ ಪ್ರಮಾಣ ಪತ್ರ ಪಡೆಯಲು ನೋಟರಿ ಮತ್ತು ಇ-ಸ್ಟ್ಯಾಂಪಿಂಗ್ ಅಗತ್ಯವಿಲ್ಲ ಎಂದು ಸರ್ಕಾರ ಆದೇಶಿಸಿದೆ. ಉಪ ತಹಸೀಲ್ದಾರ್ ಕಾರ್ಯಾಲಯ ಇದ್ದರೂ ಜಾತಿ, ಆದಾಯ, ವಾಸಸ್ಥಳ ಇತ್ಯಾದಿ ಪ್ರಮಾಣ ಪತ್ರಗಳನ್ನು ಪಡೆಯಲು ನೋಟರಿ ಅಫಿಡವಿಟ್ ಮಾಡಿಕೊಂಡು ಬರುವಂತೆ ಅಧಿಕಾರಿಗಳು ತಿಳಿಸುತ್ತಿದ್ದರು. ಇದರಿಂದ ತಾಲೂಕಾ ಕೇಂದ್ರಗಳಿಗೆ ಹೋಗಿ ಬರಲು ರು. 150- 200 ಖರ್ಚು ಮಾಡಬೇಕಾಗುತ್ತದೆಂಬ ದೂರು ಬಂದ ಹಿನ್ನೆಲೆಯಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಇ-ಸ್ಟಾಂಪಿಂಗ್, ನೋಟರಿ ವ್ಯವಸ್ಥೆ ಇಲ್ಲದ ಕಾರಣದಿಂದ ಜನರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ನೋಟರಿ ಮತ್ತು ಇ-ಸ್ಟ್ಯಾಂಪ್ ಇಲ್ಲದೇ ಸ್ವ-ದೃಢೀಕೃತ ಶಾಲಾ ದಾಖಲಾತಿ, ಪಡಿತರ ಚೀಟಿ ಮತ್ತು ಇತರ ಯಾವುದೇ ದಾಖಲಾತಿ ಪಡೆದು ಪ್ರಮಾಣ ಪತ್ರ ನೀಡಬೇಕೆಂದು ನೆಮ್ಮದಿ ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಬೇಸಿಗೆ ರಜೆಗಾಗಿ ಜಿಲ್ಲಾಧಿಕಾರಿಗೆ ಮನವಿ
ಯಾದಗಿರಿ: ನಗರದ ಮಣಿಕಂಠ ಹಾಗೂ ಇನ್ನಿತರ ವೃತ್ತಿಪರ ಕಾಲೇಜಿನ ವಿದ್ಯಾರ್ಥಿಗಳು ಬೇಸಿಗೆ ರಜೆ ನೀಡುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಮೇ ತಿಂಗಳ ಅತಿಯಾದ ಬಿಸಿಲಿನಿಂದ ತೊಂದರೆಯಾಗುತ್ತಿದೆ. ಪ್ರಖರ ಬಿಸಿಲಿಗೆ ಬಳಲುವಂತಾಗಿದೆ. ಗ್ರಾಮೀಣ ಪ್ರದೇಶಕ್ಕೆ ಸರಿಯಾದ ಬಸ್ ಸೌಲಭ್ಯವಿಲ್ಲದ್ದರಿಂದ ಬೆಳಗ್ಗೆ ಆಗಮಿಸುವ ವಿದ್ಯಾರ್ಥಿಗಳು ಮಧ್ಯಾಹ್ನದವರೆಗೆ ನಗರದಲ್ಲಿಯೇ ಇರಬೇಕಾಗಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ವೃತ್ತಿಪರ ಕಾಲೇಜುಗಳು ಬೇಸಿಗೆಯಲ್ಲೂ ಪ್ರಾರಂಭವಾಗಿರುವುದರಿಂದ ಅನಾನುಕೂಲವಾಗುತ್ತಿದೆ. ಆದ್ದರಿಂದ ಕಾಲೇಜು ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿ ಬೇಸಿಗೆ ರಜೆ ನೀಡುವಂತೆ ಆದೇಶಿಸಬೇಕೆಂದು ವಿದ್ಯಾರ್ಥಿಗಳು ಡಿಸಿಗೆ ಮನವಿ ಮಾಡಿದರು.
ಇಬ್ಬರ ಉಚ್ಚಾಟನೆ
ಬೀದರ್: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ಇಬ್ಬರು ಜಿಲ್ಲಾ ಪದಾಧಿಕಾರಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಗಂದಗೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಉಪೇಂದ್ರ ದೇಶಪಾಂಡೆ ಅವರು ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರಿಂದ ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕೇರೆ, ಜಿಲ್ಲಾ ಕಾರ್ಯದರ್ಶಿ ಸುರೇಖಾ ಸಲಗರ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸುವ ಕುರಿತು ನೋಟಿಸ್ ಕಳುಹಿಸಲಾಗಿದೆ. 15 ದಿನದಲ್ಲಿ ಸೂಕ್ತ ಉತ್ತರ ಬಾರದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

