ಬತ್ತಿದ ಭೀಮೆಯ ಒಡಲು, ಹೆಚ್ಚಿದ ಬಾಯಾರಿಕೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 17
ತಾಲೂಕಿನಲ್ಲಿ ಹರಿಯುವ ಭೀಮಾನದಿ ಪಾತ್ರ ಮರಳ ಕಡಲು. ಹೀಗಾಗಿ ಈ ನದಿ ತೀರದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಗೆ ತತ್ವಾರ. ಇನ್ನು ಹಳ್ಳ- ಕೊಳ್ಳಗಳಂತೂ ಬತ್ತಿ 3 ತಿಂಗಳಾಯ್ತು, ಕೆರೆಗಳಿಗೆ ಇಲ್ಲಿ ಬರ. ಹೀಗಾಗಿ ತಾಲೂಕಿನ ಜನ-ಜಾನುವಾರುಗಳಿಗೆ ಈ ಬೇಸಿಗೆ ಬಾಯಾರಿಕೆ ಭಯಾನಕ.
ತಾಲೂಕಿನಲ್ಲಿ ಭೀಮಾನದಿ ಸಂಪೂರ್ಣವಾಗಿ ಬತ್ತಿರುವುದರಿಂದ ಇದೇ ನೀರನ್ನು ಅವಲಂಬಿಸಿರುವ ಹಳ್ಳಿಗಳಲ್ಲಿ ನೀರಿನ ಗೋಳು ಮುಗಿಲು ಮುಟ್ಟಿದ್ದರೂ ಕೇಳೋರಿಲ್ಲ. ನದಿ ಇಲ್ಲದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳು ಬರಿದಾಗಿವೆ. ಕೆಲವು ಕಡೆ ಬಾಂದಾರು ನೀರಿದ್ದರೂ ಅದರ ಸದ್ಬಳಕೆಯಾಗದೆ ಹತ್ತಾರು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಹಳ್ಳಿಗಳಲ್ಲಿ ಪರಿತಾಪ: ಗ್ರಾಮೀಣ ಪ್ರದೇಶಗಳಲ್ಲಿ ಜನರು ಹನಿ ನೀರಿಗೂ ಪರಿತಪಿಸುವಂತಾಗಿದೆ. ಅದರಲ್ಲೂ ಅರ್ಜುಣಗಿ, ಅರ್ಜುಣಗಿ ತಾಂಡಾ, ಮಾಶಾಳ ಗ್ರಾಮದ 3ನೇ ವಾರ್ಡ್ನಲ್ಲಿ, ಮಾಶಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಾಮನಗರದಲ್ಲಿ, ದೇವಲಗಾಣಗಾಪುರ, ಸಂಗಮ, ತೆಲ್ಲೂರ, ದಿಕ್ಸಂಗಾ, ತೆಲ್ಲುಣಗಿ, ಜೇವರ್ಗಿ(ಕೆ) ಸೇರಿದಂತೆ ಸುಮಾರು 40ಕ್ಕೂ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನರು ಹೈರಾಣಾಗುತ್ತಿದ್ದಾರೆ.
ಅರ್ಜುಣಗಿ ತಾಂಡಾದಲ್ಲಿ ಹಾಹಾಕಾರ: ಅರ್ಜುಣಗಿ ತಾಂಡಾದಲ್ಲಿ ಕೇವಲ 1 ಬಾವಿ ಇದೆ. ತಾಂಡಾ ನಿವಾಸಿಗಳು ಇದೇ ಬಾವಿಯ ನೀರನ್ನೇ ಅವಲಂಬಿಸಿದ್ದಾರೆ.
ತಾಂಡಾದಲ್ಲಿ ವರ್ಷಪೂ ರ್ತಿ ಕುಡಿಯುವ ನೀರಿನ ಸಮ ಸ್ಯೆ. ಯಾರೂ ಏ ನೂ ಮಾಡಲು ಸಿದ್ಧರಿಲ್ಲ. ನದಿಯ ನೀರು ಶುದ್ಧೀಕರಿಸದೆ ಹಾಗೆಯೇ ನಲ್ಲಿಗಳಿಗೆ ಬಿಡುವುದರಿಂದ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ನದಿಯಲ್ಲಿ ನೀರು ನಿಂತಲ್ಲೇ ನಿಂತಿದ್ದು ಕಪ್ಪು ಬಣ್ಣಕ್ಕೆ ತಿರುಗಿವೆ.
ಸಂಗಮ ಕಲುಷಿತ: ಗಾಣಗಾಪುರ- ಸಂಗಮ ಗ್ರಾಮಗಳಿಗೆ ದತ್ತಾತ್ರೇಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಭೀಮಾನದಿ ನೀರಿನಲ್ಲಿಯೇ ಸ್ನಾನ ಮಾಡುವುದು. ಅಲ್ಲಿಯೇ ಬಟ್ಟೆ ತೊಳೆಯುವುದು. ದನಕರುಗಳನ್ನು ತೊಳೆಯುವುದರಿಂದ ನದಿಯ ನೀರು ಕಲುಷಿತಗೊಂಡಿವೆ. ದತ್ತಾತ್ರೇಯ ದೇವಸ್ಥಾನಕ್ಕೆ ಬರುವ ಭಕ್ತರು ಇದೇ ನೀರನ್ನು ಕುಡಿಯುವುದರಿಂದ ಭಕ್ತಾದಿಗಳಿಗೆ ವಾಂತಿ- ಭೇದಿ, ಕಾಲರಾ ದಂತಹ ರೋಗಗಳಿಗೆ ತುತ್ತಾಗಿರುವ ಉದಾಹರಣೆಗಳಿವೆ.
ಅಫಜಲ್ಪುರದಲ್ಲಿ ಅಳುತ್ತಿದ್ದಾರೆ ಜನ: ಅಫಜಲ್ಪುರ ಪಟ್ಟಣದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಗಾಗಿ ಜನತೆ ಪರಿತಪಿಸುವಂತಾಗಿದೆ. ಕೊಡ ನೀರಿಗಾಗಿ ನಾಗರಿಕರು. ಹಗಲಿರುಳು ಪಟ್ಟಣದಲ್ಲಿರುವ ಹಳೆಯ ಹಾಗೂ ಖಾಸಗಿ ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಕೊಳವೆ ಬಾವಿಗಳಿಂದ ಪಟ್ಟಣದ ನಾನಾ ಬಡಾವಣೆಗಳಲ್ಲಿ ಪೈಪ್ಲೈನ್ ಮೂಲಕ ನೀರು ಬಿಡಲಾಗುತ್ತಿದೆ. ಕೊಡ ನೀರಿಗಾಗಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ನೀರು ತರಬೇಕಾದ ಪರಿಸ್ಥಿತಿ ತಲೆದೋರಿದೆ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯರು ಪಟ್ಟಣ ಪಂಚಾಯ್ತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಫಜಲ್ಪುರ ಪಟ್ಟಣದ ನಾಗರಿಕರು.
ವಾರ್ಷಿಕ ಗೋಳಿಗೆ ಪರಿಹಾರವಿಲ್ಲವೇ?: ಅಫಜಲ್ಪುರ ಪಟ್ಟಣದಲ್ಲಿ ಶುದ್ಧವಾದ ಕುಡಿಯುವ ನೀರಿನ ಘಟಕದ ಕಾಮಗಾರಿ ಕಳೆದ 4-5 ವರ್ಷಗಳಿಂದ ನಡೆಯುತ್ತಿದ್ದರೂ ಇನ್ನುವರೆಗೂ ಮುಗಿದಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವೊಂದು ಹಳ್ಳಿಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಉಲ್ಬಣಿಸಿದೆ. ಇಲ್ಲಿ ಕೊಳವೆ ಬಾವಿಗಳೇ ನೀರಿಗೆ ಮೂಲ. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗಿರುವುದರಿಂದ ಕೊಳವೆ ಬಾವಿಗಳು ಸ್ಮಾರಕಗಳಾಗಿವೆ. ಹೀಗಾಗಿ ರಾತ್ರಿ ಪೂರ್ತಿ ನಿದ್ದೆಗೆಟ್ಟರೂ ಕುಡಿಯುವ ನೀರು ಸಿಗುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರನ ದುರವಸ್ಥೆ ನೋಡಿದರೆ ಉರಿಬಿಸಿಲಿನಲ್ಲಿ ಕಣ್ಣಿಗೆ ರಾಚುತ್ತವೆ. ಅಫಜಲ್ಪುರದ 135 ಹಳ್ಳಿಗಳ ಪೈಕಿ ಕನಿಷ್ಠ 51 ಹಳ್ಳಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣಿಸಿದೆ. ಕಳೆದ 2 ತಿಂಗಳು ಕಾಲ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧಿಕಾರಿಗಳು, ಪುಢಾರಿಗಳು, ಜನನಾಯಕರು ಇದರಲ್ಲಿಯೇ ಕಾಲಕಳೆದರು. ತಾಲೂಕಾಡಳಿತ, ಅಧಿಕಾರಿಗಳು, ಹಳ್ಳಿಗಳತ್ತ ನೋಡಿಯೇ ಇಲ್ಲ. ಇದರಿಂದಾಗಿ ನೀರಿನ ಸಮಸ್ಯೆ ಅಫಜಲ್ಪುರದಲ್ಲಿ ಉಲ್ಬಣಿಸಿದ್ದು ಜನ-ಜಾನುವಾರುಗಳು ಕಂಗಾಲಾಗುವಂತೆ ಮಾಡಿದೆ.
ಮಂತ್ರಿಗಿರಿ ಆಸೆ, ಇನ್ನೂ ಕ್ಷೇತ್ರದತ್ತ ಹೆಜ್ಜೆ ಹಾಕಿಲ್ಲ ಗುತ್ತೇದಾರ್
ಕಾಂಗ್ರೆಸ್ನಿಂದ ಗೆದ್ದು 6ನೇ ಬಾರಿಗೆ ಅಫಜಲ್ಪುರ ಶಾಸಕ ರಾಗಿರು ವ ಮಾ ಲೀಕಯ್ಯ ಗುತ್ತೇದಾರ್ ಸಿದ್ದು ಸಂಪುಟದಲ್ಲಿ ಸಚಿವಗಿರಿಗೆ ಲಾಬಿಯಲ್ಲಿ ತೊ ಡಗಿದ್ದಾರೆ.
ಇದರಿಂದಾಗಿ ಇವರಿನ್ನೂ ಶಾಸಕರಾದ ನಂತರ ಕ್ಷೇತ್ರ ಸಂಚಾರಿಯಾಗಿಲ್ಲ. ಈ ಮುಂಚೆಯೂ ಇವರೇ ಶಾಸಕರಾಗಿದ್ದರಿಂದ ಕ್ಷೇತ್ರದ ಬವಣೆ, ಒಳಗುದಿಗಳೆಲ್ಲವೂ ಇವರಿಗೆ ಚೆನ್ನಾಗಿ ಗೊತ್ತಿದೆ.
ಶಾಸಕ ಮಾಲೀಕಯ್ಯ ಸಂಪುಟ ಕಸರತ್ತು ಮುಗಿದ ನಂತರವೇ ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆಯತ್ತ ಗಮನಹರಿಸುವ ಸಾಧ್ಯತೆಗಳೇ ಅಧಿಕ. ಅಷ್ಟೊತ್ತಿಗಾಗಲೇ ಜಿಲ್ಲೆಗೆ ಮುಂಗಾರು ಕಾಲಿಡುವ ಸಾಧ್ಯತೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

