ಮುಂಗಾರಿಗೆ ಮುಂಚೆ ಚಿಂತೆಯ ಕಾರ್ಮೋಡ
ಕ.ಪ್ರ. ವಾರ್ತೆ ಯಾದಗಿರಿ ಮೇ 17
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ನಾಡ ಕಚೇರಿಗಳನ್ನು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಪರಿವರ್ತಿಸಲಾಗಿದೆ. ಆದರೆ ತಾಲೂಕಿನ ಬಳಿಚಕ್ರದಲ್ಲಿರುವ ಉಪ ತಹಸೀಲ್ದಾರ್ ಕಚೇರಿ ಮಾತ್ರ ಪರಿವರ್ತನೆ ಇರಲಿ, ಗ್ರಾಮ ಕಾರ್ಯಾಲಯಕ್ಕಿಂತಲೂ ಕನಿಷ್ಠವಾಗಿದೆ. ಸಿಬ್ಬಂದಿ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ಅನಾಥವಾಗಿದೆ.
ಕಳೆದ ವರ್ಷ 36 ಸೌಲಭ್ಯಗಳನ್ನು ನಾಡ ಕಚೇರಿಯಲ್ಲಿಯೇ ದೊರಕುವಂತೆ ಮಾಡಿ ಸರ್ಕಾರ ಅದೇಶ ಹೊರಡಿಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಹೊಸ ಆದೇಶ ನೀಡಿ ಕಚೇರಿಗಳ ಸದುಪಯೋಗವಾಗಲಿ ಎಂಬ ಉದ್ದೇಶಕ್ಕೆ ಕ್ರಮ ಕೈಗೊಂಡಿತು. ಆದರೆ ಇಲ್ಲಿ ದುರಂತದ ಸಂಗತಿ ಎಂದರೆ- ಉಪ ತಹಸೀಲ್ದಾರ್ ಮತ್ತು ಸಿಬ್ಬಂದಿಯೇ ಇಲ್ಲದ ಕಚೇರಿ ಕಾಣುತ್ತಿದೆ. ಈ ಕಚೇರಿಗೆ ಹೋದರೆ ಒಬ್ಬ ಸಿಬ್ಬಂದಿಯೂ ಕಣ್ಣಿಗೆ ಕಾಣುವುದಿಲ್ಲ ಎಂದು ಬಳಿಚಕ್ರ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ದೂರುತ್ತಾರೆ.
ಅಣಕಿಸುವಂತಾಗಿದೆ: ಕಾಟಾಚಾರಕ್ಕೆಂದು ನಾಡ ಕಚೇರಿ ಮುಂದೆ ಉಪ ತಹಸೀಲ್ದಾರ್ ಕಾರ್ಯಾಲಯ ಎಂಬ ನಾಮಫಲಕ ಹಾಕಲಾಗಿದೆ. ಇದು ಹೋಬಳಿ ಜನರನ್ನು ಅಣಕಿಸುವಂತಿದೆ. ಈ ಹಿಂದೆ ನೆಮ್ಮದಿ ಕೇಂದ್ರವೆಂದು ಕಾರ್ಯನಿರ್ವಹಿಸುತ್ತಿದ ಬಾಡಿಗೆ ಕಟ್ಟಡದಲ್ಲಿಯೇ ಈಗಲೂ ನಾಡ ಕಚೇರಿ ನಡೆಯುತ್ತಿದೆ. ಸಿಬ್ಬಂದಿ ಇಲ್ಲದೇ ಸೊರಗಿದ್ದು, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಸರ್ಕಾರ ಗುರುತಿಸಿರುವ ಸ್ವಂತ ಕಟ್ಟಡ ಸ್ಥಳಾಂತವಾಗಿಲ್ಲ. ಆದ್ದರಿಂದ ಈ ಉಪ ತಹಸೀಲ್ದಾರ್ ಕಚೇರಿ ಇದ್ದೂ ಇಲ್ಲದಂತಾಗಿದೆ.
ರೈತರ ಪೀಕಲಾಟ: ಈಗಾಗಲೇ ಮುಂಗಾರು ಸಮೀಪಿಸಿದ್ದು ರೈತರು ಬೀಜ, ಗೊಬ್ಬರ ಖರೀದಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತರು, ವಿದ್ಯಾರ್ಥಿಗಳು, ಅಂಗವಿಕಲರು, ಮಹಿಳೆಯರು, ಕೃಷಿ ಕೂಲಿಕಾರರು ತಮ್ಮ ನಿತ್ಯದ ಅಗತ್ಯ ಪ್ರಮಾಣ ಪತ್ರಗಳಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಯಾರೂ ಗಮನ ನೀಡದಿರುವುದು ನೋವಿನ ಸಂಗತಿ.
ಸರಿಯಾದ ಸಮಯದಲ್ಲಿ ಸೂಕ್ತ ಕಾರ್ಯನಿರ್ವಹಣೆ ಇಲ್ಲದೇ ಇರುವ ನಾಡ ಕಚೇರಿಯು ಮುಂಗಾರು ಮಳೆ ಆರಂಭಕ್ಕೂ ಮುನ್ನ ತೆರೆಯುವುದೇ ಎನ್ನುವುದೇ ರೈತರ ಪ್ರಶ್ನೆಯಾಗಿದೆ. ಮಳೆ ಬರುತ್ತದೆಯೋ ಇಲ್ಲವೋ ಎಂಬ ಚಿಂತೆಗಿಂತಲೂ ರೈತರಲ್ಲಿ ನಾಡ ಕಚೇರಿಯಲ್ಲಿ ಸೌಲಭ್ಯಗಳು ಸಿಗುತ್ತದೆಯೇ ಎಂಬ ಚಿಂತೆ ಕಾಡತೊಡಗಿದೆ.
ಎಚ್ಚೆತ್ತು ಅಲೆದಾಟ ತಪ್ಪಿಸಿ: ಸಮಯಕ್ಕೆ ಸರಿಯಾಗಿ ಸಿಗೆಬೇಕಾದ ಹಕ್ಕು ಬದಲಾವಣೆ ಪ್ರಮಾಣ ಪತ್ರ ಸಮರ್ಪಕವಾಗಿ ಸಿಗುತ್ತಿಲ್ಲ. ಈಗಲಾದರೂ ಸಂಬಂದಪಟ್ಟ ಅಧಿಕಾರಿಗಳು ಬಳಿಚಕ್ರ ಉಪ ತಹಸೀಲ್ದಾರ್ ಕಾರ್ಯಾಲಯವು ಉತ್ತಮ ರೀತಿಯಿಂದ ಕಾರ್ಯ ನಿರ್ವಹಿಸುವಂತೆ ಮಾಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ರೈತರು ಈ ಮುಂಗಾರು ಅವಧಿಯಲ್ಲೂ ಕಾಗದ ಪತ್ರಗಳಿಗಾಗಿ ಅಲೆದಾಡುವುದು ತಪ್ಪುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

