ಕರಿಬಾವಿಯಲ್ಲಿ ಹಾಳು ಬಿದ್ದ ನೀರಿನ ಟ್ಯಾಂಕ್
ಹಳ್ಳೇರಾವ ಎಸ್. ಕುಲಕಣರ್
ಕನ್ನಡಪ್ರಭ ವಾರ್ತೆ, ಕೆಂಭಾವಿ, ಮೇ 20
ರಾಜ್ಯದ ಪ್ರತಿ ಗ್ರಾಮಗಳಿಗೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದು ಹೇಳುವ ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತೆ ಜಿಲ್ಲೆಯ ಗಡಿಭಾಗದಲ್ಲಿರುವ ಅಗ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಬಾವಿಯಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. 2000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇಲ್ಲಿನ ಜನರು ದಶಕಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸಕ್ತ ಬೇಸಿಗೆ ಇರುವುದರಿಂದ ಹಳ್ಳ ಹಾಗೂ ಇದ್ದ ಎರಡು ಬಾವಿಗಳು ಬತ್ತಿಹೋಗಿದ್ದು ಜನ ನೀರಿಗಾಗಿ ಪರದಾಡುವಂತಾಗಿದೆ.
ತಾಸುಗಟ್ಟಲೇ ಕಾಯುವ ಸ್ಥಿತಿ: ಗ್ರಾಮದಲ್ಲಿ ಎರಡು ಬಾವಿಗಳಿದ್ದು ಬರಗಾಲದ ಛಾಯೆಯಿಂದ ಬತ್ತಿ ಹೋಗಿದ್ದು, 80 ರಿಂದ 100 ಅಡಿ ಆಳದಲ್ಲಿ ಅಲ್ಪ ಸ್ವಲ್ಪ ನೀರು ಬಂದರೂ ನೀರಿಗಾಗಿ ತಾಸುಗಟ್ಟಲೇ ಕಾಯಬೇಕು. ಬಂದನೀರು ರಾಡಿ ಮಿಶ್ರಿತವಾಗಿದ್ದು ಅಂತಹ ನೀರನ್ನೇ ಸೇವಿಸುವುದು ಇಲ್ಲಿಯ ಜನರಿಗೆ ಅನಿವಾರ್ಯ.
ಕುಡಿಯುವ ನೀರಿಗಾಗಿ ನೆರೆಯ ವಿಜಾಪುರ ಜಿಲ್ಲೆಯ ಶಳ್ಳಗಿ ರಸ್ತೆಯಿಂದ 3 ಕಿ.ಮೀ. ಅಂತರದಿಂದ ಎತ್ತಿನ ಗಾಡಿ ಹಾಗೂ ಸೈಕಲ್ ಮೇಲೆ ನೀರು ತರುತ್ತಿರುವ ಪರಿಸ್ಥಿತಿ ಬಂದೊದಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಈ ಮೊದಲು ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಗಳನ್ನು ಮಾಡಿದ ಪೈಪ್ ಲೈನ್ ಯೋಜನೆಗಳು ಸಫಲವಾಗದೆ, ಕೇವಲ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೇಬು ತುಂಬಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕುಡಿಯುವ ನೀರಿಗಾಗಿ ಲಕ್ಷಾಂತರ ವೆಚ್ಚದಲ್ಲಿ ನೀರಿನ ಟ್ಯಾಂಕ್ ಕಟ್ಟಲಾಗಿದ್ದು ಜಲ ಮೂಲವಿಲ್ಲದೆ ಹಾಳುಬಿದ್ದಿದೆ. ಅನೇಕ ಕೊಳವೆ ಬಾವಿ ಕೊರೆಸಿದರೂ ನೀರಿಲ್ಲದೇ ವ್ಯರ್ಥವಾಗಿವೆ.
ಪೈಪ್ ಲೈನ್ ಹಾಕ್ಯಾರ್ರಿ: ಕುಡಿಯುವ ನೀರೋದಗಿಸಲು ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಯೋಜನೆಗಳಡಿ ಶಳ್ಳಗಿ ರಸ್ತೆಯಿಂದ ಪೈಪ್ ಲೈನ್ ಹಾಕ್ಯಾರ್ರಿ ಆದರೆ ನೀರು ಮಾತ್ರ ಬರಂಗಿಲ್ರಿ ಎಂದು ಗ್ರಾಮದ ವೃದ್ಧ ಬಸ್ಸಪ್ಪ ಹೇಳುತ್ತಾರೆ. ಏನ್ ಮಾಡೊದ್ರಿ ಸಾಹೇಬರಾ ನಮ್ಮುರಾಗ ಕುಡಿಲಿಕ್ಕಿ ನೀರು ಬರಂಗಿಲ್ರಿ, ಈಗ ಕ್ಯಾನಾಲದಾಗ ನೀರ ಬಂದಾಗ್ಯಾವ್ರಿ ನಮ್ಕಷ್ಟ ದ್ಯಾವ್ರೇ ಬಲ್ಲ. ಎಲೆಕ್ಷನ್ ಬಂದಾಗ ಎಲ್ಲರು ಬಂದು ನಿಮ್ಮೂರಿಗಿ ಕುಡೆ ನೀರಿಂದು ಬಾಳ ತೊಂದ್ರಿ ಐತಿ ಅದನ್ನ ನಾವು ಮಾಡಸ್ತವಿ ನಮಗ ಓಟ ಹಾಕ್ರಿ ಅಂತ ಹೇಳಿ ಹೋದೊವ್ರಿ ಆಮ್ಯಾಲ ಇಕಡಿ ಮಾರಿನು ಮಾಡಂಗಿಲ್ಲ ನೋಡ್ರಿ, ನೀರಿಲ್ದಕ್ಕ ನಮ್ಮೂರಿಗಿ ಬೀಗರು ಸಂಬಂಧಿಕರು ಬರಲಾರದಂಗ ಆಗ್ಯಾದ್ರಿ, ಬ್ಯಾಸಿಗ್ಯಾಗ ನಮ್ಮ ಮಕ್ಕಳಿಗೂ ಕೂಡಾ ಬ್ಯಾರೆ ಊರಿಗಿ ಕಳಿಸೀವ್ರಿ ಅಂತ ಗ್ರಾಮದ ಶರಣಮ್ಮ ಶಿವಪ್ಪ ಉತ್ತರ ನೀಡಿದ್ದಾಳೆ.
10 ಟ್ಯಾಂಕರ್ ನೀರ್ ವದಗಿಸಿದಗಿಸಿರಿ: ಯಾವ ಜನ್ಮದಾಗ ನಾವ್ತಪ್ಪು ಮಾಡೀವಿ ಗೊತ್ತಿಲ್ರಿ ಈ ಊರಿಗಿ ನಾವ್ ಸೂಸಿದೇರ್ ಆಗಿ ಬಂದಿವ್ರಿ, ಇದ್ದೆರಡು ಭಾವ್ಯಾಗನೂ ಹನಿ ನೀರಿಲ್ಲ ಮದವಿ ಬಾಣಂತಿತನ ಮನ್ಯಾಗ ಏನಾರ ಕಾರಣ ಕತ್ರ, ಮಾಡಬೇಕಂದ್ರ ಭಾಳ ತ್ರಾಸ ಅದರಿ. ಈಗ ಸರಕಾರದವರು ನಮ್ಮೂರಿಗಿ ಟ್ಯಾಂಕರ್ ಮೂಲಕ ನೀರ್ತಂದು ಬಾವಿಗಿ ಸುರುತಾರಿ. ದಿನಕ್ಕ 3 ಟ್ಯಾಂಕರ್ ನೀರು ತರೋದ್ರಿಂದ ಬಕಾಸುರನ ಹೊಟ್ಟಿಗಿ ಅರೆ ಮಜ್ಜಿಗಿ ಕೊಟ್ಟಂಗ ಆಗ್ಯಾದ್ರಿ. ಇನ್ಮ್ಯಾಲಾದ್ರು ಅಧಿಕಾರಿಗಳು ನಮ್ಮೂರಿಗಿ 10 ಟ್ಯಾಂಕರ್ ನೀರ್ ವದಗಿಸಿದರ ಪುಣ್ಯಾ ಬರ್ತದ್ರಿ ಎಂದು ಬಸಯ್ಯ ಮಠ ಪತ್ರಿಕೆಯೊಂದಿಗೆ ತಮ್ಮ ಕಷ್ಟವನ್ನು ತೋಡಿಕೊಂಡರು.
ಈ ಬಗ್ಗೆ ಡಿಸಿಗೆ ಪತ್ರಿಕೆ ಸಂಪರ್ಕಿಸಿದಾಗ ಕರಿಬಾವಿ ಗ್ರಾಮಕ್ಕೆ ಸದ್ಯ ಪೂರೈಸುತ್ತಿರುವ ನೀರು ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ವ್ಯವಸ್ಥೆ ಕಲ್ಪಿಸುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

