ನೂತನ ಶಾಸಕರ ಮುಂದಿರುವ ಸವಾಲುಗಳು
ಕ.ಪ್ರ. ವಾರ್ತೆ ಚಿತ್ತಾಪುರ ಮೇ 22
ರಾಷ್ಟ್ರಕೂಟರ ಕುಲದೇವತೆ ನಾಗವೇಲಾಂಬಿಕ ದೇವಿ ಹಾಗೂ ಸೂಪಿ ಸಂತ ಹಜರತ್ ಚಿತಾಶಹವಲಿ ಸೇರಿದಂತೆ ಅತೀ ಹೆಚ್ಚು ಪ್ರಸಿದ್ದ ಹಾಗೂ ಎಲ್ಲ ಧರ್ಮಗಳ ಸಮನ್ವಯದ ಬೀಡಾಗಿರುವ ಚಿತ್ತಾಪುರ ತಾಲೂಕು ನೈಸರ್ಗಿಕ ಸಂಪನ್ಮೂಲವನ್ನು ಹೊಂದಿರುವ ಕ್ಷೇತ್ರವಾಗಿದ್ದರೂ ಕೂಡ ಸರ್ಕಾರದ ವತಿಯಿಂದ ಹಿಂದುಳಿದ ತಾಲೂಕು ಎಂಬ ಹಣಿಪಟ್ಟಿಯನ್ನು ಸ್ವಾತಂತ್ರ ಸಿಕ್ಕು 66 ವರ್ಷಗಳು ಕಳೆದರೂ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಉದ್ಯೋಗ, ಶೌಚಾಲಯ ಹೀಗೆ ಸಮಸ್ಯೆಗಳನ್ನು ಹೋಗಲಾಡಿಸಲು ಮನಸ್ಸು ಮಾಡದಿರುವುದು ತಾಲೂಕಿನ ರ್ದೌಭಾಗ್ಯ.
ಉದ್ಯೋಗ ವಂಚಿತ ಜನತೆ: ಕ್ಷೇತ್ರದ ವ್ಯಾಪ್ತಿಯ ಚಿತ್ತಾಪುರ, ವಾಡಿಗಳಲ್ಲಿ ಮಿನಿ ಹಾಗೂ ಬೃಹತ್ ಸಿಮೆಂಟ್ ಕಾರ್ಖಾನೆಗಳು ಪ್ರಾರಂಭಗೊಂಡು ಅಲ್ಲಿನ ಜನರಿಗೆ ಉದ್ಯೋಗ ನೀಡಿ ಅನೇಕ ಕುಟುಂಬಗಳಿಗೆ ಉದ್ಯೋಗ ಒದಗಿಸಿಕೊಟ್ಟಿದ್ದವು. ಆದರೆ ಚಿತ್ತಾಪುರದಲ್ಲಿ 90 ದಶಕದಲ್ಲಿ ಪ್ರಾರಂಭವಾದ 4 ಮಿನಿ ಸಿಮೆಂಟ್ ಕಾರ್ಖಾನೆಗಳು ಪ್ರಾರಂಭವಾಗಿ ಸ್ವಲ್ಪ ದಿನದಲ್ಲೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೋದ ಕಾರಣ ಕೆಲಸ ಮಾಡುವ ನೂರಾರು ಕುಟುಂಬಗಳು ಬೀದಿಗೆ ಬಿದ್ದು, ಬದುಕಲು ಬೇರೆ ದಾರಿ ಕಾಣದೆ ಗುಳೆ ಹೋದಂತಹ ಘಟನೆಗಳು ನಡೆದಿವೆ.
ಕೆಲವು ಜನ ಕಣಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುವಂತಾಗಿದೆ. ಆದರೂ ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಇಲ್ಲಿಯವರೆಗಿನ ಚುನಾಯಿತರಾದ ಶಾಸಕರುಗಳು ಗಮನ ಹರಿಸಿ ಶಾಶ್ವತ ಪರಿಹಾರ ಕಂಡು ಹಿಡಿಯದಿರುವುದು ಇಲ್ಲಿನ ಜನರ ದುರ್ದೈವ.
ಈಗ ಕ್ಷೇತ್ರದಲ್ಲಿ ಹೊಸದಾಗಿ ಸಿಮೆಂಟ್ ಘಟಕಗಳು ಪ್ರಾರಂಭವಾಗುವ ಹಂತದಲ್ಲಿ ಇದ್ದು, ಅವುಗಳು ಪ್ರಾರಂಭಕ್ಕೆ ಹೊಸ ಶಾಸಕರು ಅಸಕ್ತಿ ತೋರಿಸಿದಲ್ಲಿ ಕ್ಷೇತ್ರದ ಜನತೆಗೆ ಉದ್ಯೋಗಕ್ಕೆ ದಾರಿಯಾಗುವುದು. ಈಗಲಾಗದರೂ ಶಾಸಕರು ಪರಿಹಾರ ಕಂಡುಹಿಡಿಯುವರೇ..?
ರೈತರ ಜಮೀನಿಗೆ ನೀರು ಹರಿಸದ ಬೆಣ್ಣಿತೋರ ಯೋಜನೆ: ದಶಕಗಳ ಹಿಂದೆ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ಪ್ರಾರಂಭವಾದ ಬೆಣ್ಣಿತೋರ ಯೋಜನೆಯ ಕಾಮಗಾರಿ ಪ್ರಾರಂಭಗೊಂಡು ದಶಕಗಳು ಕಳೆದರೂ ವ್ಯಾಪ್ತಿಯ ಜಮೀನುಗಳಿಗೆ ನೀರು ಹರಿಯದೇ ಕಾಲುವೆಗಳು ಹಾಳಾಗಿಹೋಗಿರುವುದರಿಂದ ಜನರಿಗೆ ಕಾಲುವೆ ಬಂತೆ ವಿನಾ ನೀರು ಬರಲಿಲ್ಲ ಎನ್ನುವಂತಾಗಿದೆ. ಹೀಗಾಗಿ ಸರ್ಕಾರ ಸಾವಿರಾರು ಕೋಟಿ ಹಣ ನೀರಿನಂತೆ ಖರ್ಚಾದರೂ ರೈತರ ಹೊಲಗಳಿಗೆ ನೀರು ಬರದೆ ಗುತ್ತಿಗೆದಾರರ ಹಾಗೂ ರಾಜಕೀಯ ನಾಯಕರ ಕಿಶೆ ಭರ್ತಿಯಾಗಿದ್ದಂತೂ ಸತ್ಯ.
ಮುಂದಾಲೋಚನೆ ಇಲ್ಲದ ರಸ್ತೆ ಅಗಲೀಕರಣ: ಕಳೆದ ಮೂರು ವರ್ಷಗಳ ಹಿಂದೆ ಶಾಸಕರು ಹಾಗೂ ಸ್ಥಳಿಯ ಅಧಿಕಾರಿಗಳ ಸರಿಯಾದ ಯೋಜನೆ ಹಾಗೂ ಮುಂದಾಲೋಚನೆ ಇಲ್ಲದ ನಿಲುವುಗಳಿಂದ ರಸ್ತೆ ಅಗಲೀಕರಣ ನೆಪದಲ್ಲಿ ಸಿಕ್ಕ ಸಿಕ್ಕ ಕಡೆ ಮನೆಗಳನ್ನು ಕೆಡವಿದರಿಂದ ನೂರಾರು ಕುಟುಂಬಗಳು ಬಿದಿ ಪಾಲಾದವು. ಇದನ್ನು ತಡೆಯಲು ಲೋಕಸಭೆ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರವೇಶವಾಗಬೇಕಾಯಿತು. ಅಧಿಕಾರಿಗಳ ದರ್ಪದಿಂದ ಅಗಲೀಕರಣ ನೆಪದಲ್ಲಿ ಮನೆಗಳನ್ನು ಕೆಡವಿ 3 ವರ್ಷಗಳು ಕಳೆದರೂ ಕೆಡವಿದ ಕಸವನ್ನು ವಿಲೇವಾರಿ ಮಾಡಲಿಕ್ಕೆ ಆಗದೆ ಇರುವುದು ಇವರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಲ್ಲು ಮಣ್ಣಿನ ರಾಶಿಯಿಂದ ಹಾಳು ಬಿದ್ದ ಉರಾಂತಾಗಿದೆ. ಇದು ಹೊಸ ಶಾಸಕರಿಗೆ ದೊಡ್ಡ ಸವಾಲಾಗಿರುವ ವಿಷಯ.
ಮುಗಿಯದ ಕ್ರೀಡಾಂಗಣ: ಚಿತ್ತಾಪುರದಲ್ಲಿ ಹಲವು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಕಾಮಗಾರಿ ಮುಗಿಯದೇ ಇರುವುದರಿಂದ ಇಲ್ಲಿಯ ಕ್ರೀಡಾಸಕ್ತರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗದ ಪರಿಸ್ಥಿತಿಯಿಂದ ಹಲವು ಹೊಸ ಪ್ರತಿಭೆಗಳು ಅವಕಾಶದಿಂದ ವಂಚಿತರಾಗುತ್ತಿರುವರು.
ರಸ್ತೆ ಅಭಿವೃದ್ಧಿ: ತಾಲೂಕಿನ ಹಲವಾರು ಗ್ರಾಮಗಳು ಇನ್ನೂ ಕೂಡ ಸರಿಯಾದ ರಸ್ತೆ ಇಲ್ಲದೆ ಅಲ್ಲಿನ ಜನರು ತೊಂದರೆ ಪಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಚಿತ್ತಾಪುರ ಟೆಂಗಳಿ ರಸ್ತೆ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅದಷ್ಟು ಶೀಘ್ರದಲ್ಲಿ ಕಾಮಗಾರಿ ಮುಗಿಸುವರೇ ನೂತನ ಶಾಸಕರು ಎನ್ನುತ್ತಿರುವರು ಜನತೆ.
ನೀರಿನ ಸಮಸ್ಯೆ: ಬೇಸಿಗೆ ಕಾಲವಾದರಿಂದ ತಾಲೂಕಿನ ಹಲವಾರು ಗ್ರಾಮಗಳು ಹನಿ ಕುಡಿವ ನೀರಿಗಾಗಿ ಹಾಹಕಾರ ಇದ್ದು, ತಾಲೂಕಿನ ರಾಜೋಳಾ, ಡೋಣಗಾಂವ, ದಿಗ್ಗಾಂವ, ಡೊಣ್ಣೂರ, ದಂಡಗುಂಡ, ಬಳವಡಗಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸಬೇಕಿದೆ. ಇಲ್ಲಿನ ಜನರ ಕನಿಷ್ಠ ಸೌಲಭ್ಯದಿಂದ ವಂಚಿತರಾಗುವುದನ್ನು ತಪ್ಪಿಸಿ, ಇಲ್ಲಿಯ ಜನರು ಗುಳೆ ಹೋಗುವುದು ತಪ್ಪಿಸಲು ಶಾಶ್ವತ ಉದ್ಯೋಗ ರೂಪಿಸಿ ಜನರು ನೆಮ್ಮದಿ ಉಳಿಸುವರೆ ಎಂದು ಕಾಲವೇ ಉತ್ತರ ಹೇಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

