ಗುಲ್ಬರ್ಗಾ

ಸಡಕ್- ಪಾನಿ ಸಮಸ್ಯೆ ಬಗ್ಗೆ ಚಿಂತೆ ಬೇಡ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 27
ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಸಚಿವರಾದ ನಂತರ ಚೊಚ್ಚಲ ಸುದ್ದಿಗೋಷ್ಠಿ ನಡೆಸಿ ರಸ್ತೆ, ಕುಡಿಯುವ ನೀರು, ಒಳ ಚರಂಡಿ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಜನತೆ ಯಾವುದೇ ಚಿಂತೆ ಮಾಡುವುದು ಬೇಡ, ನಿಶ್ಚಿಚಿಂತೆಯಿಂದ ಇದ್ದರಾಯ್ತು, ಜನತೆಗೆ ಅಗತ್ಯವಿರುವಂತಹ ಕೆಲಸಕಾರ್ಯಗಳನ್ನೆಲ್ಲ ತಾವು ಮುತುವರ್ಜಿ ವಹಿಸಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗುಲ್ಬರ್ಗ ನಗರ, ತಾಲೂಕು ಕೇಂದ್ರಗಳು, ಪುರಸಭೆ, ಪಟ್ಟಣ ಪಂಚಾಯ್ತಿಯಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಹಣಕಾಸಿನ ಕೊರತೆಯಂತೂ ಇಲ್ಲವೇ ಇಲ್ಲ. ಅಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಮಸ್ಯೆ ಹುಡುಕಿ ಪರಿಹಾರ ಒದಗಿಸಬೇಕೆಂದು ಇಸ್ಲಾಂ ಸೂಚನೆ ನೀಡಿದ್ದಾರೆ.
ಗುಲ್ಬರ್ಗದಲ್ಲಿ ಸಿಎಂ ನಗರೋತ್ಥಾನ ಯೋಜನೆಯ ಬಹುಕೋಟಿ ಕೆಲಸಗಳು ಅರ್ಧಕ್ಕೆ ನಿಂತಿವೆ. ಕೆಲವು ಕುಂಟುತ್ತ ಸಾಗಿರುವುದು ತಮ್ಮ ಗಮನದಲ್ಲಿದೆ. ಕಾಮಗಾರಿಗಳ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಈ ಕಾಮಗಾರಿಗಳ ಪೂರ್ವಾಪರಗಳನ್ನೆಲ್ಲ ಅರಿತು ತಕ್ಷಣ ಚಾಲನೆ ನೀಡಲಾಗುತ್ತದೆ ಎಂದರು.
ತಾವು ಜಿಲ್ಲಾ ಉಸ್ತುವಾರಿಯಾಗಿರುವವರೆಗೂ ರಸ್ತೆ, ಕುಡಿಯುವ ನೀರು, ಚರಂಡಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಲು ಆದ್ಯತೆ ನೀಡುವುದಾಗಿ ಹೇಳಿದ ಇಸ್ಲಾಂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಯೂಜಿಡಿ ತಪ್ಪಿದ ಸಂಬಂಧಗಳನ್ನೆಲ್ಲ ದುರಸ್ತಿಪಡಿಸಲಾಗುತ್ತದೆ ಎಂದರಲ್ಲದೆ, ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಿ ಕಾರ್ಯೋನ್ಮುಖವಾಗುವಂತೆ ಜಲ ಮಂಡಳಿ, ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಇಸ್ಲಾಂ ನಗರ ಹಾಗೂ ಜಿಲ್ಲೆಯ ಪ್ರಗತಿ ಕಾಮಗಾರಿಗಳ ಸಂಕ್ಷಿಪ್ತ ಮಾಹಿತಿ ಪಡೆದರಲ್ಲದೆ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ವೇಗ ಕೊಡುವಂತೆ ಸೂಚನೆಗಳನ್ನು ನೀಡಿದರಲ್ಲದೆ ಅಗತ್ಯ ಬಿದ್ದಲ್ಲಿ ನೇರವಾಗಿ ಸಂಪರ್ಕಿಸಿರಿ, ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದಾದರೂ ರೂಪದ ಸಹಾಯ- ಸಹಕಾರ ಬೇಕಿದ್ದಲ್ಲಿ ಅದನ್ನು ತಾವು ಕೊಡುವುದಾಗಿಯೂ ಅಧಿಕಾರಿಗಳನ್ನು ಉದ್ದೇಶಿಸಿ ಖಮರುಲ್ ಇಸ್ಲಾಂ ಹೇಳಿದ್ದಾರೆ.

ಹಜ್ ಭವನ ನಿರ್ಮಾಣ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 27
ಹಜ್ ಯಾತ್ರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗುಲ್ಬರ್ಗ ಹಾಗೂ ಹುಬ್ಬಳ್ಳಿ ಮಹಾ ನಗರಗಳಲ್ಲಿ ಹಜ್ ಭವನಗಳನ್ನು ನಿರ್ಮಿಸಲಾಗುವುದು ಎಂದು ವಕ್ಫ್ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ. ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಸವಲತ್ತು ಇದೆ. ಹೀಗಾಗಿ ಈ ನಗರಗಳಿಂದ ಹಜ್ ಯಾತ್ರೆಗೆ ಹೋಗುವವರಿಗೆ ಈ ಭವನದಿಂದ ಅನುಕೂಲ ಮಾಡಿಕೊಡುವುದು ಸರ್ಕಾರದ ಚಿಂತನೆ ಎಂದು ಹೇಳಿದ್ದಾರೆ.
ವಕ್ಫ್ ಆಸ್ತಿಪಾಸ್ತಿ ಕಬಳಿಕೆ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಹಿಂದಿನ ಬಿಜೆಪಿ ಸರ್ಕಾರ ವಕ್ಫ್ ಆಸ್ತಿ ಕಬಳಿಕೆಯ ವರದಿಯನ್ನೇಕೆ ಸದನದಲ್ಲಿ ಮಂಡಿಸಿ ಚರ್ಚಿಸಲಿಲ್ಲ ಆರೋಪವೇ ಸತ್ಯವಾಗದು. ಯಾವುದೇ ಆರೋಪ ಸಾಬೀತಾಗಬೇಕಾದಲ್ಲಿ ಅದಕ್ಕೆ ಪಕ್ಕಾ ಸಾಕ್ಷಾಧಾರಗಳು ಬೇಕಾಗುತ್ತವೆ ಎಂದರು.
ವಕ್ಫ್ ಆಸ್ತಿ ಕಬಳಿಕೆಗೆ ಬಿಡೋದಿಲ್ಲ. ಯಾರಾದರೂ ಆರೋಪಗಳನ್ನು ಮಾಡದೆ ಸಾಕ್ಷಾಧಾರ ಸಮೇತ ವಕ್ಫ್ ಆಸ್ತಿ ಕಬಳಿಕೆ ವಿಚಾರಗಳನ್ನು ತಮ್ಮ ಗಮನಕ್ಕೆ ತರಲಿ, ಅಂತಹ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಖಮರುಲ್ ಇಸ್ಲಾಂ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.