ಕುಡಿವ ನೀರು; ಬಿಸಿ ಬಿಸಿ ಚರ್ಚೆ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 29
ಅನೇಕ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಿರ್ಲಕ್ಷ್ಯ ಭಾವನೆ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾ ಪಂಚಾಯಿತಿಯ ಸದಸ್ಯರು ಪಕ್ಷಭೇದ ಮರೆತು ಒಕ್ಕೊರಲಿನಿಂದ ಆಗ್ರಹಿಸಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಶ್ರೀಲಕ್ಷ್ಮೀ ಚಂಡ್ರಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಶರಣಪ್ಪ ಹೊನಗೇರಾ ಮಾತನಾಡಿ, ಬಹುತೇಕ ಗ್ರಾಮಗಳಲ್ಲಿ ಕೊಳವೆ ಬಾವಿಗಳು ಕೆಟ್ಟು ಕುಡಿವ ನೀರಿನ ಸಮಸ್ಯೆಗೆ ಕಾರಣವಾಗಿದೆ. ದುರಸ್ತಿ ಮಾಡಿಸಲು ಸ್ಥಳೀಯ ಅಧಿಕಾರಿಗೆ ಸೂಚಿಸಿದರೆ ನಮಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಅವರ ಮೇಲೆ ಏಕೆ ಕ್ರಮ ಜರಗಿಸಬಾರದೆಂದು ಪ್ರಶ್ನಿಸಿದರು.
ಇಒಗೆ ತರಾಟೆ: ಆಗ ತಾಪಂ ಇಒ ಅವರು ಗ್ರಾಮ ಪಂಚಾಯಿತಿಗಳು ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ಜಾರಿಕೊಳ್ಳಲು ಮುಂದಾದರು. ಇದರಿಂದ ಕುಪಿತರಾದ ಸದಸ್ಯರು, ಹಣ ಬಿಡುಗಡೆ ಯಾರು ಮಾಡುತ್ತಾರೆ ಎಂದು ಕೇಳಿದಾಗ ನಾವೇ ಮಾಡುತ್ತೇವೆ ಎಂದರು. ನಿಮಗೆ ಹಣ ಬಿಡುಗಡೆ ಮಾಡುವ ಅಧಿಕಾರವಿದ್ದಾಗ ಅವರ ಮೇಲೆ ಕ್ರಮ ಜರಗಿಸಲು ಬರುವುದಿಲ್ಲ ಎಂದು ಹೇಳಿ ನುಣಚಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಸರ್ವ ಸದಸ್ಯರು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಕುಡಿವ ನೀರಿನ ಸಮಸ್ಯೆ ಹೋಗಲಾಡಿಸಲು ತಾಲೂಕಿನಲ್ಲಿ 139 ಹೊಸ ಕೊಳವೆಬಾವಿ ಕೊರೆಸಲಾಗಿದೆ. ಜಿಪಂ ಒದಗಿಸಿದ ಅನುದಾನದಲ್ಲಿ ಅವಶ್ಯಕ ಗ್ರಾಮಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರಗಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜ ಚವ್ಹಾಣ ಸದಸ್ಯರಿಗೆ ಭರವಸೆ ನೀಡಿದರು.
ಇನ್ನೂ 77 ಸಾವಿರ ಪುಸ್ತಕ ಕೊರತೆ: ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 72,452 ಮಕ್ಕಳು ಪ್ರವೇಶ ಪಡೆದಿದ್ದಾರೆ. 2013- 14ನೇ ಸಾಲಿಗಾಗಿ 3,149 ಸೈಕಲ್ಗಳು ಬಂದಿದ್ದು, ಹಂಚಿಕೆ ಮಾಡಲಾಗಿದೆ. ಈಗಾಗಲೇ 3,09,058 ಉಚಿತ ಪಠ್ಯ ಪುಸ್ತಕಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 2,31,979 ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಇನ್ನೂ 77 ಸಾವಿರ ಪುಸ್ತಕಗಳು ಬರಬೇಕಿದೆ.
ಅಲ್ಲದೆ ಸಮವಸ್ತ್ರಗಳು ಸರಬರಾಜು ಆಗಿದ್ದು, ಶಾಲೆ ಪ್ರಾರಂಭದ ದಿನವೇ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜರ್ ಹುಸೇನ್ ಸಭೆಗೆ ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ 70,930 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ತೊಗರಿ, ಹೆಸರು, ಸಜ್ಜೆ, ಬತ್ತದ ಪ್ರಮಾಣಿತ ಬೀಜಗಳನ್ನು ಎಲ್ಲಾ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ಬೆಲೆಯಲ್ಲಿ ವಿತರಣೆ ಮಾಡಲು ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ಕೃತಕ ಅಭಾವ ಸೃಷ್ಟಿ- ಎಚ್ಚರ: ಬಹುತೇಕ ಗೊಬ್ಬರ ಮಾರಾಟಗಾರರು ಗೊಬ್ಬರವನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ದಾಸ್ತಾನು ಇದ್ದರೂ ಇಲ್ಲ ಎಂದು ಹೇಳಿ ರೈತರಿಂದ ಹೆಚ್ಚಿನ ಬೆಲೆ ತೆಗೆದುಕೊಳ್ಳುತ್ತಾರೆ. ಇಂಥ ಅಕ್ರಮಗಳಿಗೆ ಅವಕಾಶ ಕೊಡದೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗೆ ಸದಸ್ಯರು ಸಲಹೆ ಮಾಡಿದರು.
ಬಹುತೇಕ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ಸದಸ್ಯರಿಗೆ ನೀಡುವುದಿಲ್ಲ. ನಾವು ಚುನಾಯಿತ ಪ್ರತಿನಿಧಿಗಳು, ನಮಗೂ ಗೌರವ ಇದೆ. ಅದಕ್ಕೆ ಚ್ಯುತಿಬಾರದ ಹಾಗೆ ನಡೆದುಕೊಳ್ಳಲು ಅಧಿಕಾರಿಗೆ ಎಚ್ಚರಿಕೆ ನೀಡಿ ಎಂದು ಸದಸ್ಯ ಹಣಮಂತ ಲಿಂಗೇರಿ ಅಧ್ಯಕ್ಷರಿಗೆ ಸಲಹೆ ಮಾಡಿದರು. ಇದಕ್ಕೆ ಎಲ್ಲ ಸದಸ್ಯರು ಒಕ್ಕೂರಲಿನಿಂದ ಬೆಂಬಲ ವ್ಯಕ್ತಪಡಿಸಿದರು.
ಸದಸ್ಯರಿಗೆ ಸಂಪೂರ್ಣ ಮಾಹಿತಿ ಕೊಡಿ: ಸದಸ್ಯರು ಯಾವುದೇ ಮಾಹಿತಿ ಕೋರಿದಲ್ಲಿ ಅವರಿಗೆ ಇಲಾಖೆ ಮಾಹಿತಿ ನೀಡಬೇಕು. ಇಲಾಖೆಯಿಂದ ತಮ್ಮ ಕ್ಷೇತ್ರಕ್ಕೆ ಯಾವ ಯಾವ ಯೋಜನೆಗೆ ಎಷ್ಟು ಅನುದಾನ ಬಂದಿದೆ, ಯಾವ ಕೆಲಸ ನಡೆದಿದೆ ಎಂಬ ಮಾಹಿತಿ ಇದ್ದಲ್ಲಿ ಅವುಗಳನ್ನು ಜನರಿಗೆ ತಲುಪಿಸಲು ಅನಕೂಲವಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಕಾರ್ಯವೈಖರಿಯ ಮೇಲೆ ಸದಸ್ಯರಿಗೆ ಅನುಮಾನ ಉಂಟಾಗುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಅಧಿಕಾರಿಗಳಿಗೆ ಅಧ್ಯಕ್ಷೆ ಶ್ರೀಲಕ್ಷ್ಮೀ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

