ಗುಲ್ಬರ್ಗಾ

ಹೆದ್ದಾರಿ ವೃತ್ತ ತೆಗೆಸಲು ಚಿಂತನೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 30
ನಗರದಲ್ಲಿ ಹಾದೂಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಸೇಡಂ, ಜೇವರ್ಗಿ, ನಾಗನಹಳ್ಳಿ ಹಾಗೂ ಆಳಂದ ವರ್ತುಲ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ವರ್ತುಲಗಳು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯೊಡ್ಡುತ್ತಿದ್ದು, ಅವುಗಳು ಕೆಲಮೊಮ್ಮೆ ಅಪಘಾತಕ್ಕೂ ಕಾರಣವಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಆ ವರ್ತುಲಗಳನ್ನು ತೆಗೆದು ಹಾಕಲು ಚಿಂತನೆ ನಡೆಸಲಾಗಿದೆ, ಇದಕ್ಕೆ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಚಾರಕ್ಕೆ ಅಡಚಣೆ: ಸದರಿ ವೃತ್ತಗಳಲ್ಲಿ ಭಾರಿ ವಾಹನಗಳು ಹಾಗೂ ಮಲ್ಟಿ ಆಕ್ಸಲ್ ಬಸ್ಗಳು ಸೇರಿದಂತೆ ಇತರೆ ವಾಹನಗಳು ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಆ ವೃತ್ತಗಳನ್ನು ತೆಗೆಯುವಂತೆ ಗುಲ್ಬರ್ಗ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ಪ್ರಸ್ತಾವನೆಯ ಚರ್ಚೆಯಲ್ಲಿ ಜಿಲ್ಲಾಧಿಕಾರಿ ಈ ಮೇಲಿನಂತೆ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾರಿ ಸರಕು ವಾಹನಗಳ ಸಂಚಾರವನ್ನು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಿಷೇಧಿಸಿರುವುದರಿಂದ ಪಡಿತರ ಧಾನ್ಯಗಳ ವಿತರಣೆ ಹಾಗೂ ಸಾಗಣಿಕೆಯಲ್ಲಿ ಅನಾನೂಕೂಲ ಉಂಟಾಗುತ್ತಿದೆ. ಹಗಲಿನಲ್ಲಿ ಈ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಬೆಂಗಳೂರು, ಗುಲ್ಬರ್ಗ, ರಾಯಚೂರಿನ ಸೆಂಟ್ರಲ್ ವೇರ್ ಹೌಸಿಂಗ್ನ ಕಾರ್ಪೋರೇಷನ್ನ ವ್ಯವಸ್ಥಾಪಕರು ಹಾಗೂ ಸೋಲಾಪುರದ ಡಿವಿಜನಲ್ ರೇಲ್ವೆ ಮ್ಯಾನೇಜರ್ ಅವರು ಸಲ್ಲಿಸಿದ್ದ ಪ್ರಸ್ತಾವನೆ ಸಭೆಯಲ್ಲಿ ಚರ್ಚೆ ನಡೆದು ಈ ವಿಷಯದ ಕುರಿತು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರ್ಕಶ ಶಬ್ದ ಹೊರಡಿಸುವ ಹಾರ್ನ್: ನಗರದ ಜಿಜಿಎಚ್ ವೃತ್ತದಿಂದ ಡಿಎಆರ್ ಪ್ರಮುಖ ಗೇಟ್ ಮಾರ್ಗವಾಗಿ ಹಳೆ ಡಿಪಿಓ ಕ್ರಾಸ್ ಕಡೆಗೆ ಹೋಗುವ ರಸ್ತೆ ಮಾರ್ಗದಲ್ಲಿ ನೂತನವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಸದರಿ ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಒಂದು ಸಾವಿರ ರೋಗಿಗಳ ಉಪಚಾರ ಹೊಂದುವ ಸೌಲಭ್ಯ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಮಹಿಳೆಯರ ವಸತಿ ನಿಲಯವಿದ್ದು, 150 ವಿದ್ಯಾರ್ಥಿನಿಯರು ವಾಸವಾಗಿದ್ದಾರೆ. ಇದೇ ಮಾರ್ಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಸಹ ಇದೆ. ಈ ರಸ್ತೆ ಮುಖಾಂತರ ಸಂಚರಿಸುವ ದ್ವಿಚಕ್ರ ಹಾಗೂ ಇತರೆ ವಾಹನ ಚಾಲಕರು ಕರ್ಕಶ ಶಬ್ದ ಹೊರಡಿಸುವ ಹಾರ್ನ್ಗಳನ್ನು ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಿಜಿಎಚ್ ವೃತ್ತದಿಂದ ಡಿಪಿಓ ಕ್ರಾಸ್ವರೆಗೆ ಏಕಮುಖ ರಸ್ತೆ ಹಾಗೂ ಹಾರ್ನ್ ರಹಿತ ಮತ್ತು ಸರಕು ಸಾಗಾಣಿಕೆ ವಾಹನಗಳ ನಿಷೇಧ ರಸ್ತೆಗಳೆಂದು ಘೋಷಿಸಿ ಈ ರಸ್ತೆಯಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸುವುದಕ್ಕೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆವಟಿಯವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರದ ಕೆಲವೊಂದು ರಸ್ತೆಗಳನ್ನು ಏಕಮುಖ ರಸ್ತೆಗಳೆಂದು ಹಾಗೂ ಹಾರ್ನ್ ರಹಿತ ಪ್ರದೇಶಗಳೆಂದು ಘೋಷಿಸುವಂತೆ ಗುಲ್ಬರ್ಗ ಪೊಲೀಸ್ ಅಧೀಕ್ಷರು ಹಾಗೂ ಗುಲ್ಬರ್ಗ ಟ್ರಾಫಿಕ್ ಪೊಲೀಸರು ಸಲ್ಲಿಸಿದ್ದ ಪ್ರಸ್ತಾವನೆಗೆ ಮೇಲಿನ ಸೂಚನೆ ನೀಡಿದರು.
ಅಪಘಾತಗಳ ಸಾಧ್ಯತೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಗತ್ಯವಾಗಿ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಇಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಕೆಟ್ಟು ನಿಂತ ವಾಹನಗಳನ್ನು ಆದಷ್ಟು ತ್ವರಿತವಾಗಿ ತೆರವುಗೊಳಿಸುವಂತೆ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಲ್ಬರ್ಗಕ್ಕೆ ಮಿನಿ ಬಸ್: ಕಮಲಾಪುರದಿಂದ ಗುಲ್ಬರ್ಗಕ್ಕೆ ಮಿನಿ ಬಸ್ ಆರಂಭಿಸುವುದು ಹಾಗೂ ಹಿರಿಯ ನಾಗರಿಕರಿಗೆ ಪಾಸ್ ವಿತರಣಾ ಕೇಂದ್ರವನ್ನು ಪುನಃ ಆರಂಭಿಸಬೇಕೆಂಬ ಗುಲ್ಬರ್ಗ ತಹಸೀಲ್ದಾರ್ ಹಾಗೂ ಕಮಲಾಪುರ ತಾಲೂಕು ಪಂಚಾಯತ್ ಸದಸ್ಯರು ಸಲ್ಲಿಸಿದ್ದ ಪ್ರಸ್ತಾವನೆ ಸಭೆಯಲ್ಲಿ ಚರ್ಚೆಯಾಗಿ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮಿನಿಬಸ್ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿಲ್ಲ, ಹಿರಿಯ ನಾಗರಿಕರಿಗೆ ಪಾಸ್ ನೀಡಲು ಪಾಸ್ ವಿತರಣಾ ಕೇಂದ್ರವನ್ನು ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಭಾನ್ ಅವರು ಸಭೆಗೆ ಮಾಹಿತಿ ನೀಡಿದರು.
ವೈದ್ಯರಿಗೆ ಸೂಕ್ತ ನಿರ್ದೇಶನ: ರಸ್ತೆ ಅಪಘಾತದಲ್ಲೀಡಾದ ಚಾಲಕರು, ಪ್ರಯಾಣಿಕರುಗಳಿಗೆ ಯಾವುದೇ ಸಾಕ್ಷಿ ಅಥವಾ ಆಧಾರಗಳಿಗೆ ಒತ್ತಾಯಿಸದೆ, ಪೊಲೀಸ್ ವಿಚಾರಣೆಗಳಿಗೆ ಕಾಯ್ದೆ, ವೈದ್ಯರು ತುರ್ತು ಚಿಕಿತ್ಸೆ ನೀಡುವುದನ್ನು ಯಾವುದೇ ಕಾನೂನಿನಲ್ಲಿ ನಿರ್ಬಂಧಿಸಿಲ್ಲದಿರುವ ಕುರಿತು ಸಾರಿಗೆ ಆಯುಕ್ತರ ಪ್ರಸ್ತಾವನೆಯನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ವೈದ್ಯರುಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಶಾಲಾ ವೇಳೆಯಲ್ಲಿ ತಮ್ಮ ಶಾಲೆಗಳನ್ನು ತಲುಪಲು ಸೂಕ್ತ ಸಂಚಾರದ ವ್ಯವಸ್ಥೆಯಿಲ್ಲ, ಆ ಭಾಗಗಳಲ್ಲಿ ಶಾಲಾ ಅವಧಿಯಲ್ಲಿ ಎನ್ಇಕೆಎಸ್ಆರ್ಟಿಸಿ ವತಿಯಿಂದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಲ್ಲವಿ ಆಕುರಾತಿ ಅವರು ಸಭೆಯ ಗಮನಕ್ಕೆ ತಂದಾಗ ಇಂತಹ ಸಮಸ್ಯೆಗಳಿರುವ ಗ್ರಾಮೀಣ ಭಾಗಗಳಲ್ಲಿ ಶಾಲಾ ಅವಧಿಯಲ್ಲಿ ಬಸ್ಗಳನ್ನು ಓಡಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಇಂತಹ ಸಮಸ್ಯೆ ಎದುರಾಗಿರುವ ಹಳ್ಳಿಗಳ ಪಟ್ಟಿಯನ್ನು ತಯಾರಿಸಿ ಎನ್ಇಕೆಎಸ್ಆರ್ಟಿಸಿಯ ವಿಭಾಗೀಯ ನಿಂಯತ್ರಣಾಧಿಕಾರಿಗೆ ನೀಡುವಂತೆ ಜಿಲ್ಲಾಧಿಕಾರಿ, ಜಿಪಂನ ಸಿಇಓ ಅವರಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.