ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ: ಶಂಕರಗೌಡ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 31
ಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹೊರತುಪಡಿಸಿ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆಗೆ ಇಳಿಯುವುದಾಗಿ ಕೆಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಕೇವಲ 6 ಶಾಸಕರಾಗಿ ಆಯ್ಕೆಯಾಗಿರಬಹುದು. ಆದರೆ, ಮತ ಪಡೆಯುವ ಪ್ರಮಾಣ ಬೇರೆ ಪಕ್ಷಗಳಿಗಿಂತ ಅತ್ಯಂತ ಗಣನೀಯವಾಗಿದೆ. ಪಕ್ಷದಲ್ಲಿ ಆದ ತಪ್ಪು ಸರಿಪಡಿಸಿಕೊಂಡು ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.
ನಿರೀಕ್ಷೆಯಂತೆ ಗೆಲವು ಇಲ್ಲ: ನಿರೀಕ್ಷೆಯಂತೆ ಪಕ್ಷ ಯಶಸ್ವಿಯಾಗಿಲ್ಲ. ಪ್ರಾದೇಶಿಕ ಪಕ್ಷ ಕಟ್ಟಿದ ಹಿಂದಿನ ದೇವರಾಜ ಅರಸು ಮತ್ತು ಎಸ್. ಬಂಗಾರಪ್ಪ ಅವರಿಗೆ ಸಾಕಷ್ಟ ಸಮಯಾವಕಾಶ ಇತ್ತು. ಆದರೆ, ಕೆಜೆಪಿ ಪಕ್ಷಕ್ಕೆ ಕೇವಲ ನಾಲ್ಕೈದು ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗಿತ್ತು. ಹೀಗಾಗಿ ನಿರೀಕ್ಷೆಯಷ್ಟು ವಿಧಾನಸಭೆಗಳಲ್ಲಿ ಗೆಲವು ಸಾಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ನಡೆಯಲು ಇನ್ನೂ ಒಂದು ವರ್ಷ ಸಮಯ ಇರುವುದರಿಂದ ಪ್ರಸಕ್ತ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹೊರತುಪಡಿಸಿ ಬೇರೆ ಪ್ರಾದೇಶಿಕ ಪಕ್ಷಗಳ ಜತೆ ಸೇರಿ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಸ್ಪಷ್ಟಪಡಿಸಿದರು.
ಮತ್ತೆ ಬಜೆಟ್ ಅಗತ್ಯತೆ ಇಲ್ಲ: ಈಚೇಗಷ್ಟೇ ರಾಜ್ಯ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿರುವುದರಿಂದ ಪ್ರಸಕ್ತ ಕಾಂಗ್ರೆಸ್ ಸರ್ಕಾರ ಮತ್ತೆ ಬಜೆಟ್ ಮಂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಹಿಂದೆ ಯಡಿಯೂರಪ್ಪ ಮಂಡಿಸಿದ ಬಜೆಟ್ ನಂತರ ಮತ್ತೆ ಬಜೆಟ್ ಮಂಡಿಸುವುದು ಬೇಡ ನೂತನ ಸರ್ಕಾರ ಬಜೆಟ್ ಮಂಡಿಸಲಿದೆ ಎಂದು ಜಗದೀಶ ಶೆಟ್ಟರ್ ಅವರಿಗೆ ಕಿವಿಮಾತು ಹೇಳಿದರೂ ಸಹ ಶೆಟ್ಟರ್ ಪ್ರಚಾರಕ್ಕಾಗಿ ಮತ್ತೆ ಬಜೆಟ್ ಮಂಡಿಸಿದರು. ಹೀಗಾಗಿ ಪ್ರಚಾರಕ್ಕಾಗಿ ಬಜೆಟ್ ಮಂಡಿಸುವುದು ಬೇಡ ಎಂದರು.
ಈಗಾಗಲೇ ಮಂಡಿಸಿರುವ ಬಜೆಟ್ನಲ್ಲಿರುವ ಯೋಜನೆಗಳ ಗಾತ್ರ ಹೆಚ್ಚಿಸುವುದಕ್ಕಾಗಿ ಬಜೆಟ್ ಮಂಡಿಸಿದರೆ ಅದಕ್ಕೆ ಪಕ್ಷ ಸ್ವಾಗತಿಸುತ್ತದೆ. ಅದು ಜನಪರ ಮತ್ತು ಅಭಿವೃದ್ಧಿ ಪರವಾಗಿರಬೇಕು, ಅದನ್ನು ಬಿಟ್ಟು ಯೋಜನೆ ಗಾತ್ರ ಕಡಿತಗೊಳಿಸುವ ಬಜೆಟ್ ಆಗಿದ್ದರೆ ಪ್ರಯೋಜನಕಾರಿಯಾಗದು ಎಂದರು.
ಜೂನ್ ತಿಂಗಳಿಂದ 1ಗಳಂತೆ 30 ಕೆಜಿ ಪಡಿತರ ಅಕ್ಕಿ ವಿತರಣೆ ಮಾಡುವುದಾಗಿ ಆತುರದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಲ್ಲಿದೆ ಅಕ್ಕಿ ಎಂದು ಪ್ರಶ್ನಿಸಿದ ಪಾಟೀಲ್ ಅವರು, ಏಕಮುಖಿಯಾಗಿ ಅವಸರದ ನಿರ್ಣಯಗಳನ್ನು ಕೈಗೊಳ್ಳದೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಕಿ- ಸಂಖ್ಯೆಗಳನ್ನು ಪಡೆದು ಪೂರ್ವ ಯೋಜನೆ ತಯಾರಿಸಿ ಸಚಿವ ಸಂಪುಟದಲ್ಲಿ ಯೋಜನೆ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲ ಉತ್ತಮ ಕಾರ್ಯಗಳಿಗೆ ಕೆಜೆಪಿ ಬೆಂಬಲಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹುಚ್ಚೇಶ್ವರ ಕುಂಬಾರ, ಬಸವರಾಜ ಇಂಗಿನ, ವೈಜನಾಥ ಪಾಟೀಲ್, ಸುಭಾಷ ಬಿರಾದಾರ, ವೈಜನಾಥ ಝಳಕಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

