ಗುಲ್ಬರ್ಗಾ

ಡಿ.1ರಂದು ಮೌನಘೋರ ತಪಸ್ಸಿನ ಮುಕ್ತಾಯ

Published On :

ಚಿಂಚೋಳಿ:  ತಾಲೂಕಿನ ಪಂಗರಗಾ ಗ್ರಾಮದ ಹತ್ತಿರದ ಬಂಜಾರ ಸಮಾಜದ ಧಾರ್ಮಿಕ ಪುಣ್ಯಕ್ಷೇತ್ರ ಸೋನ್ಯಾಲಗಿರಿ  ಪರ್ವತಲಿಂಗ ಪರಮೇಶ್ವರ ಮಹಾರಾಜರ 9 ತಿಂಗಳು 9 ದಿನದ ಮೌನ ಘೋರ ತಪಸ್ಸಿನ ಮುಕ್ತಾಯ ಸಮಾರಂಭ ಡಿ.1ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಶಾಸಕ ಡಾ. ಉಮೇಶ ಜಾಧವ ತಿಳಿಸಿದರು. ಪಟ್ಟಣದಲ್ಲಿ ಮಂದಿರ ಆವರಣದಲ್ಲಿ ತಾಲೂಕು ಬಂಜಾರ ಸಮಾಜದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಗುಲ್ಬರ್ಗ ಜಿಲ್ಲೆಯ ಇತಿಹಾಸದಲ್ಲಿಯೇ ತಾಲೂಕಿನಲ್ಲಿ ಅದ್ದೂರಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಲಿದೆ ಎಂದರು. ಕೇಂದ್ರ ಸಚಿವ ಬಲರಾಮ ನಾಯಕ, ಬಂಜಾರ ಸಮಾಜದ ಸಚಿವರು, ಶಾಸಕರು, ಜಿಪಂ, ತಾಪಂ ಸದಸ್ಯರು ಹಾಗೂ ಬೀದರ, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಿಂದ ಅನೇಕ ಬಂಜಾರ ಸಮಾಜದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. 1 ಲಕ್ಷ ಜನ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದರು. ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ಮೌನ ಘೋರ ಮುಕ್ತಾಯ ಸಮಾರಂಭಕ್ಕೆ ಎಲ್ಲರ ಸಹಕಾರ ಅತ್ಯವಶ್ಯವಾಗಿದೆ. ತನು ಮನ ಧನದಿಂದ ಸಹಕಾರಿಸಬೇಕು ಎಂದರು. ಬಂಜಾರ ಸಮಾಜದ ಬಾಬು ಪವಾರ, ಡಾ. ತುಕಾರಾಮ ಪವಾರ, ಈಶ್ವರ ನಾಯಕ, ವಿಠ್ಠಲ್ ಚವ್ಹಾಣ, ರಾಮಶೆಟ್ಟಿ ಪವಾರ, ಶಾಮರಾವ ರಾಠೋಡ, ದೇವಲಾ ನಾಯಕ, ಮೇಘರಾಜ ರಾಠೋಡ, ಲಕ್ಷ್ಮಣ ನಾಯಕ, ಜಾಲಿಬಾಯಿ ಪವಾರ, ರಾಮಶಟ್ಟಿ ಧರ್ಮಾಸಾಗರ, ರಾಮಶೆಟ್ಟಿ ವಂಟಿಚಿಂತಾ, ಸುರೇಶ ಜಾಧವ ಮುಂತಾದವರು ಭಾಗವಹಿಸಿ ಸಲಹೆಗಳನ್ನು ನೀಡಿದರು.
ವಿಕಲಾಂಗರಿಗೆ 15 ತ್ರಿಚಕ್ರ ವಾಹನ ವಿತರಣೆ
ಗುಲ್ಬರ್ಗ: ಮೇಲ್ಮನೆಯಲ್ಲಿ ಗುಲ್ಬರ್ಗ -ಯಾದಗಿರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ತಮ್ಮ ಪ್ರದೇಶಾಭಿವೃದ್ಧಿ ವಾರ್ಷಿಕ ಅನುದಾನದ ಶೇ.10ರಷ್ಟನ್ನು ವಿಕಾಲಂಗ ಆಯ್ದ 15 ಮಂದಿಗೆ ತ್ರಿಚಕ್ರ ವಾಹನಗಳನ್ನು ನೀಡಲು ಬಳಸುತ್ತಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ.4ರಂದು ನಡೆಯುಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಈ ವಾಹನಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ. ಬೆಳಗಿನ 11 ಗಂಟೆಗೆ ಈ ಸಮಾರಂಭ ಆಯೋಜಿಸಲಾಗಿದೆ. ಯಾದಗಿರಿ, ಗುಲ್ಬರ್ಗ ಜಿಲ್ಲೆಯಡಿಯಲ್ಲಿ ಬರುವ ತಾಲೂಕುಗಳ 15 ಅಂಗವಿಕಲರಿಗೆ ಹೊಂಡಾ ಕಂಪನಿಯ ತಲಾ 68, 491 ಕಿಮ್ಮತ್ತಿನ 15 ವಾಹನಗಳನ್ನು ಖರೀದಿಸಿ ವಿತರಿಸಲಾಗುತ್ತಿದೆ. ಈ ವಾಹನಗಲಿಂದ ಅಂಗವಿಕಲರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ತುಂಬ ಉತ್ಸಾಹದಿಂದ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.  ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ  ರಮೇಶ ಮರಗೋಳ, ಜಿಲ್ಲಾಧಿಕಾರಿ ಡಾ. ಪ್ರಸಾದ್, ಅಲ್ಲಂಪ್ರಭು ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ.
ಈಶಾನ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಮಕ್ಕಳಿಗೆ ಪುರಸ್ಕಾರ
ಗುಲ್ಬರ್ಗ:  ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತನ್ನ ವಿಭಾಗ 1 ಮತ್ತು 2ರ ಸಿಬ್ಬಂದಿಗಳ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ- ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿತು. ಇಲ್ಲಿನ ವಿಭಾಗೀಯ ಕಚೇರಿ ಬಯಲು ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ 40ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ಸಿಬ್ಬಂದಿ ಮಕ್ಕಳನ್ನು ಸತ್ಕರಿಸಲಾಯಿತು. ವಿಭಾಗಾಧಿಕಾರಿ ಇಲಿಯಾಸ್ ಭಾಗವಾನ್ ಪುರಸ್ಕಾರ ನೆರವೇರಿಸಿದರು. ಸಾರಿಗೆ ಸಂಸ್ಥೆಯ ಈ ಪುರಸ್ಕಾರ ಯೋಜನೆ ಜಾಣ ಮಕ್ಕಳನ್ನು ಇನ್ನಷ್ಟು ಹೆಚ್ಚಿನ ಅಧ್ಯಯನಕ್ಕೆ ಪ್ರೋತ್ಹಾಸ ನೀಡಲಿದೆ. ಮಕ್ಕಳು ಓದು ಮುಂದೆ ಬರಬೇಕು ಎಂದು ಭಾಗವಾನ್ ಹೇಳಿದರು.
ಆಳಂದ ಕಾಂಗ್ರೆಸ್ ಹೊಸ ಸಾರಥಿಗಳಿಗೆ ಸನ್ಮಾನ
ಆಳಂದ:  ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಆಳಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಗ್ದುಮ ಅನ್ಸಾರಿ, ಮಾದನಹಿಪ್ಪರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವಂತರಾವ ಪಾಟೀಲ್, ಕೆಪಿಸಿಸಿ ಸದಸ್ಯ ಜಗನ್ನಾಥ ಶೇಗಜಿ ಅವರುಗಳು ಹೊಸದಾಗಿ ನೇಮಕಗೊಂಡಿರುವುದರಿಂದ ಅಭಿಮಾನಿಗಳು ಸನ್ಮಾನಿಸಿದರು. ತಾಲೂಕಿನಲ್ಲಿ ಪಕ್ಷವನ್ನು ಸಂಘಟನೆ ಮಾಡುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಿಳಿಸಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣ ತೊಡುವುದಾಗಿ ತಿಳಿಸಿದರು. ಪಕ್ಷದಲ್ಲಿ ಯಾವುದೇ ಭಿನ್ನಮತ ಇರುವುದಿಲ್ಲ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದು ಹೊಸ ಸಾರಥಿಗಳು ತಿಳಿಸಿದರು. ಪಕ್ಷದ ಪ್ರಮುಖರಾದ ಬಸವರಾಜ ಬಿರಾದಾರ, ತಾನಾಜಿ ಸೂರ್ಯವಂಶಿ, ಮಹ್ಮದ್ ಅನ್ಸಾರಿ, ಲಕ್ಷ್ಮಣ ಸೇರಿದಂತೆ ಇತರರು ಪಾಲ್ಗೊಂಡಿದರು.
ಐವರು ಕಳ್ಳರ ಬಂಧನ: 3.25 ಲಕ್ಷದ ವಸ್ತು ವಶ
ಗುಲ್ಬರ್ಗ:  ಅಶೋಕ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, 5 ಜನ ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ಅವರಿಂದ 3.25 ಲಕ್ಷ . ಮೌಲ್ಯದ ಬಂಗಾರ, ಬೆಳ್ಳಿ, 6 ತಾಮ್ರದ ಕೊಡ ಜಪ್ತಿ ಮಾಡಿವಲ್ಲಿ ಯಶಸ್ವಿಯಾಗಿದ್ದಾರೆ. ಲಾತೂರಿನ ರಾಮಸಿಂಗ್ ತಂದೆ ಅಮರಸಿಂಗ್, ಗುಲ್ಬರ್ಗದ ಪಂಚಶೀಲ ನಗರದ ರಾಜ ಅಲಿಯಾಸ್ ಮಮ್ಮಿರಾಜ ತಂದೆ ಸಿದ್ದಪ್ಪ ತಳವಾರ ಮತ್ತು ಗುಲ್ಬರ್ಗದ 3 ಜನ ಬಾಲಾಫರಾಧಿಗಳನ್ನು ಬಂಧಿಸಿ 10 ತೊಲೆ ಬಂಗಾರದ ಆಭರಣಗಳು, 10 ತೊಲೆ ಬೆಳ್ಳಿಯ ಸಾಮಾನುಗಳು ಮತ್ತು 6 ತಾಮ್ರದ ಕೊಡಗಳು ಸೇರಿ ಒಟ್ಟು 3.25 ಲಕ್ಷ ಮೌಲ್ಯದ ಆಭರಣಗಳು ವಶಪಡಿಸಿಕೊಂಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಸ್ವತ್ತಿನ ಅಪರಾಧಗಳು ಆಗುತ್ತಿರುವುದರಿಂದ ಎಸ್ಪಿ ಅಮಿತಸಿಂಗ್, ಎಎಸ್ಪಿ ಕಾಶಿನಾಥ ತಳಕೇರಿ ಅವರ ಮಾರ್ಗದರ್ಶನದಲ್ಲಿ ಅಶೋಕ ನಗರ ಪಿಐ ಸಿದ್ದೇಶ್ವರ, ಪಿಎಸ್‌ಐ ಸತ್ಯಾನಾರಾಯಣ, ರಾಘವೇಂದ್ರ ಪಿಎಸ್‌ಐ ಹೇಮಂತಕುಮಾರ್, ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಲಾತೂರಕ್ಕೆ ಹೋಗಿ ದಾಳಿ ನಡೆಸಿ ಅಲ್ಲಿ ರಾಮಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಅದೇ ತಂಡ ಶುಕ್ರವಾರ ರಾತ್ರಿ ಗುಲ್ಬರ್ಗದಲ್ಲಿ ದಾಳಿ ನಡೆಸಿ ರಾಜ ಅಲಿಯಾಸ್ ಮಮ್ಮಿರಾಜ ತಂದೆ ಸಿದ್ದಪ್ಪ ತಳವಾರ ಮತ್ತು 3 ಜನ ಬಾಲಾಪರಾಧಿಗಳನ್ನು ಬಂಧಿಸಿದೆ. 5 ಜನ ಕಳ್ಳರಲ್ಲಿ 3 ಜನ ಬಾಲಾಪರಾಧಿಗಳು ನಗರದ ಸಾಯಿ ಮಂದಿರ ಹತ್ತಿರದ ಶಿವಕಾಂತಮ್ಮ ಗಂಡ ಹುಲುಗಮ್ಮ ಗುತ್ತೇದಾರ, ನೇತಾಜಿ ನಗರದ ಸೋಮನಾಥ ತಂದೆ ಬಾಬಾರಾವ ಮಾಲಿ ಪಾಟೀಲ್, ಕರುಣೇಶ್ವರ ನಗರದ ಅಖಿಲ್ ತಂದೆ ದತ್ತಾತ್ರೇಯ ಲಾತೂರ ಎಂಬುವರ ಮನೆ ಕಳ್ಳತನ ಮಾಡಿದ್ದರು ಮತ್ತು ಜೇವರ್ಗಿ ರಸ್ತೆಯ ಉದಯ ನಗರ, ಮಹಾವೀರ ನಗರಗಳಲ್ಲಿಯೇ ಮನೆ ಕಳ್ಳತನ ಮಾಡಿದ್ದರು. ಒಟ್ಟು 5 ಪ್ರಕರಣಗಳು ಪೊಲೀಸರು ಬೇಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್‌ಠಾಧಿಕಾರಿ ಕಾಶಿನಾಥ ತಳಕೇರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.  ರವಿಕುಮಾರ್, ಚಂದ್ರಕಾಂತ, ಸುರೇಶ, ಬಸವರಾಜ, ಮಹ್ಮದ್ ಅನೀಸ್, ಗಜಾನಂದ, ಅರ್ಜುನಸಿಂಗ್, ಶಿವಕುಮಾರ್, ಶಿವಪ್ಪ, ರಫೀಕ್, ಶಿವಪ್ರಕಾಶ, ದೇವೇಂದ್ರ, ಶಿವಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.