ಗುಲ್ಬರ್ಗಾ

ಪಟ್ಟಣ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶನ ಅವಶ್ಯ: ರಾಜಾ

Published On :

ಸುರಪುರ: ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ ಪಕ್ಷಬೇಧ ಮರೆತು ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಕರೆ ನೀಡಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಬುಧವಾರ ಪುರಸಭೆ ನೀಡಿದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲಾ ಸದಸ್ಯರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಹಕಾರ ನೀಡಿ ಪಟ್ಟಣದ ಕುಂದುಕೊರತೆಗೆ ಸ್ಪಂದಿಸಬೇಕು ಎಂದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪದೇ ಪದೇ ಉದ್ಭವಾಗುತ್ತಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸೇವೆಗೈಯಬೇಕು. ಪರಿಸರ ಸ್ವಚ್ಛತೆ ಮತ್ತು ಬೀದಿ ದೀಪಗಳ ಬಗ್ಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭ ಸದಸ್ಯ ಮಲ್ಲಣ ಐಕೂರ ಮಾತನಾಡಿ, ಪಟ್ಟಣದ ಎಲ್ಲಾ ರಸ್ತೆಗಳಲ್ಲಿನ ಬೀದಿ ದೀಪಗಳು ಮಾಯವಾಗಿವೆ. ಕತ್ತಲು ಆವರಿಸಿದೆ. ಹುಳುಹುಪ್ಪಡಿಗಳ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಳಪೆಮಟ್ಟದ ಬಲ್ಬ್‌ಗಳನ್ನು ಹಾಕುತ್ತಾರೆ. ಬಲ್ಬ್ ಹಾಕಿದ ಮರುದಿನವೇ ಅವು ಬೆಳಕು ನೀಡದೇ ಅವ್ಯವಸ್ಥೆಗೆ ಸಾಕ್ಷಿಯಾಗಿ ನಿಲ್ಲುತ್ತವೆ ಎಂದು ಶಾಸಕರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸದ ಶಾಸಕರು, ಮುಖ್ಯಾಧಿಕಾರಿಗಳಿಗೆ ಈ ಬಗ್ಗೆ ಶೀಘ್ರವೇ ಸೂಕ್ತ ಕ್ರಮ ಜರುಗಿಸಬೇಕು. ಪಟ್ಟಣವನ್ನು ಮಾದರಿಯನ್ನಾಗಿ ಮಾಡುವ ಜವಾಬ್ದಾರಿ ಸದಸ್ಯರು ಮತ್ತು ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಶಾಸಕರು ಸರಕಾರದಿಂದ ಹೆಚ್ಚು ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಪುರಸಭೆ ವಿಪಕ್ಷ ನಾಯಕ ವೇಣುಮಾಧವ ನಾಯಕ, ಹಿರಿಯ ಸದಸ್ಯ ವೆಂಕಟೇಶ ಹೊಸ್ಮನಿ ಮಾತನಾಡಿದರು.  ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರದ ಜವಾಬ್ದಾರಿ ವಹಿಸಲಾಯಿತು.
ಉಪಾಧ್ಯಕ್ಷೆ ಗುರುಬಾಯಿ ವಾಲಿ, ಮುಖ್ಯಾಧಿಕಾರಿ ಏಜಾಜ್ ಹುಸೇನ್, ಸದಸ್ಯರಾದ ಅಪ್ಸರ್ ಹುಸೇನ್ ದಲಾಲ್, ಪಾರಪ್ಪ ಗುತ್ತೇದಾರ್, ಭೀಮಾಶಂಕರ ಬಿಲ್ಲವ್, ಶೇಖ್ ಮಹಿಬೂಬ್ ಒಂಟಿ, ಮನೋಹರ ಕುಂಟೋಜಿ, ಮಾನಪ್ಪ ಪ್ಯಾಪಲಿ, ರಾಜಾ ಜೈರಾಮ ನಾಯಕ, ಜ್ಯೋತಿ ವೆಂಕಟರೆಡ್ಡಿ, ಕಲಿಂ ಜಹಗೀರದಾರ್, ವೆಂಕಟೇಶ ಅಲ್ಟಿ, ಮಾನಪ್ಪ ಚಳ್ಳಿಗಿಡ, ಕವಿತಾ ಎಲಿಗಾರ್, ರಾಣಿ ಸರಿತಾ, ಶಾರದ ಕಟ್ಟಿಮನಿ ಇನ್ನಿತರರಿದ್ದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಸ್ವಾಗತಿಸಿ, ದೇವಿಂದ್ರ ಹೆಗಡೆ ನಿರೂಪಿಸಿದರು. ಹಣಮಂತ ಮಿಲ್ಟ್ರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.