ಗುಲ್ಬರ್ಗಾ

ಬಹುಜನ ಜಾಗೃತಿ ವೇದಿಕೆಗೆ ನೇಮಕ

Published On :

ಚಿತ್ತಾಪುರ:  ಚಿತ್ತಾಪುರ ತಾಲೂಕಿನ ನಗರ ಮತ್ತು ಹೋಬಳಿಮಟ್ಟದ ಸಂಯೋಜಕರನ್ನು ನೇಮಕ ಮಾಡಲಾಗಿದೆ ಎಂದು ಬಹುಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಹಂತೇಶ ಮಂದೇವಾಲ್ ತಿಳಿಸಿದ್ದಾರೆ.  ನಗರ ಸಂಯೋಜಕರಾಗಿ ಮಹಾಲಿಂಗಪ್ಪ ಬೋಮ್ಮನಹಳ್ಳಿ, ಮಲ್ಲಪ್ಪ ತೆಳಗೇರಿ, ಮೌನೇಶ ಕಾಳಗಿ, ಲಿಂಗಪ್ಪ ಪೂಜಾರಿ, ಹೋಬಳಿಮಟ್ಟದ ಸಂಯೋಜಕರಾಗಿ ಸೂರ್ಯಕಾಂತ ಬೊಮ್ಮನಹಳ್ಳಿ, ಶ್ರೀಶೈಲ್ ಕಾಳಗಿ, ವಿಶ್ವನಾಥ ಬೀದಿಮನಿ ಅವರನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ.
ಅರ್ಜುನ್‌ಗೆ  ಗೌರವ
ಗುಲ್ಬರ್ಗ:  ಯಾದಗಿರಿ ಜಿಲ್ಲೆಯ ಶಹಾಪುರದ ಸಂಧ್ಯಾ ಸಾಹಿತ್ಯ ವೇದಿಕೆ ಬಾಲಕವಿ ವಿದ್ಯಾಸಾಗರ ಕುಕ್ಕುಂದಾ ನೆನಪಿನಲ್ಲಿ ನೀಡುವ ವಿದ್ಯಾಸಾಗರ ಬಾಲ ಪುರಸ್ಕಾರದ 2013ನೇ ಸಾಲಿನ ಗೌರವಕ್ಕೆ 8ನೇ ತರಗತಿಯ ಚಿಕ್ಕಮಗಳೂರಿನ ಅರ್ಜುನ್ ಶೆಣೈ ಆಯ್ಕೆಯಾಗಿದ್ದಾರೆ. ಕವಿ ಆನಂದ ಝಂಜರವಾಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಬಾಲ ಕವಿಯ ಪ್ರತಿಭೆ ಸಹಜ ಚೈತನ್ಯದಿಂದ ಉನ್ಮುಖಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ ಪಟ್ಟಿ ಪರಿಷ್ಕರಣೆ
ಗುಲ್ಬರ್ಗ: ಭಾರತ ಚುನಾವಣಾ ಆಯೋಗವು ಅ.30 ರಿಂದ ನವೆಂಬರ್ 29ರವರೆಗೆ ಮತದಾರರ ಪಟ್ಟಿಯನ್ನು 2014ರ ಜನವರಿ 1ಕ್ಕೆ ಅರ್ಹತಾ ದಿನಾಂಕವಾಗಿಟ್ಟುಕೊಂಡು ಪರಿಷ್ಕರಿಸಿ ಕಾಲೋಚಿತಗೊಳಿಸಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ 2014ರ ಜನವರಿ 1ಕ್ಕೆ 18 ವರ್ಷ ತುಂಬುವ ಹಾಗೂ ಮೇಲ್ಪಟ್ಟವರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಸಂಬಂಧಪಟ್ಟ ಮತಗಟ್ಟೆಯಲ್ಲಿ ಮತದಾರರ ಯಾದಿ ಲಭ್ಯವಿದ್ದು, ಸದರಿ ಯಾದಿಯಲ್ಲಿ ಹೆಸರನ್ನು ನೋಂದಾಯಿಸಲು ಹಾಗೂ ಲೋಪದೋಶಗಳನ್ನು ಸರಿಪಡಿಸಲು ನಮೂನೆ 6 ಮತ್ತು 8ನ್ನು ಭರ್ತಿ ಮಾಡಿ ಸಲ್ಲಿಸಬೇಕೆಂದು ಗುಲ್ಬರ್ಗ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ ತಿಳಿಸಿದ್ದಾರೆ.
ಇಂದು, ನಾಳೆ ತಬಲಾ ಸೋಲೋ, ವಚನಗಾಯನ
ಗುಲ್ಬರ್ಗ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸೌರಭ ಯೋಜನೆಯಡಿ ನ.9ರಂದು ಸಂಜೆ 6.30 ಗಂಟೆಗೆ ಅಫಜಲ್ಪುರ ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸಿದ್ದಾಮೇಶ್ವರ ದೇವಸ್ಥಾನದಲ್ಲಿ ಗುಲ್ಬರ್ಗದ ಸಿದ್ದಣ್ಣ ಶಂಕ್ರೆಪ್ಪ ಹೂಗಾರ ಇವರಿಂದ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದೆ. 10ರಂದು ಸಂಜೆ 6.30 ಗಂಟೆಗೆ ಅಫಜಲ್ಪುರ ತಾಲೂಕಿನ ಜೋಗೂರ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಗೊಬ್ಬೂರಿನ ಚನ್ನವೀರ ಗವಾಯಿಗಳಿಂದ ವಚನಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಗುಲ್ಬರ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಎ.ಶಿವಕೇರಿ ತಿಳಿಸಿದ್ದಾರೆ.
ಗುಲ್ಬರ್ಗ ಜೆಡಿಎಸ್ ಅಧ್ಯಕ್ಷ ತಡಕಲ್
ಬೆಂಗಳೂರು: ಜಾತ್ಯತೀತ ಜನತಾದಳದ ಗುಲ್ಬರ್ಗ ಜಿಲ್ಲಾ ಅಧ್ಯಕ್ಷರನ್ನಾಗಿ ಬಸವರಾಜ ತಡಕಲ್ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಆದೇಶ ಹೊರಡಿಸಿದ್ದಾರೆ.
ಸಮ್ಮೇಳನಕ್ಕೆ ನೋಂದಣಿ ಆರಂಭ
ಗುಲ್ಬರ್ಗ:  ಮಡಿಕೇರಿಯಲ್ಲಿ ಜ.7 ರಿಂದ 9 ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರುಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೋಂದಾಯಿಸಿಕೊಳ್ಳುವಂತೆ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಪ್ರತಿನಿಧಿಗಳ ನೋಂದಾವಣಿಗೆ ಡಿ.15 ಕೊನೆ ದಿನ. ಆನಂತರ ಯಾವುದೇ ನೋಂದಾವಣೆ ಮಾಡಿಕೊಳ್ಳಲಾಗುವುದಿಲ್ಲ. ನೋಂದಾವಣೆ ಮಾಡಿಕೊಂಡ ಪ್ರತಿನಿಧಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಮ್ಮೇಳನದಲ್ಲಿ ಕಲ್ಪಿಸಲಾಗುವುದು. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರು ಡಿ.15 ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಪ್ರತಿನಿಧಿ ಶುಲ್ಕ 300 ಆಗಿರುತ್ತದೆ.  ಮಾಹಿತಿಗಾಗಿ ಗೌರವ ಕಾರ್ಯದರ್ಶಿಗಳಾದ ಬಿ.ಎಚ್. ನಿರಗುಡಿ (9886233064), ಸುರೇಶ ಬಡಿಗೇರ (9945570234) ಸಂಪರ್ಕಿಸಲು ತಿಳಿಸಿದ್ದಾರೆ.
ಹೋಮಿಯೋಪತಿಕ್ ಚಿಕಿತ್ಸಾ ಶಿಬಿರ ನಾಳೆ
ಗುಲ್ಬರ್ಗ: ನಗರದ ಸಾಯಿ ಮಂದಿರ ಹತ್ತಿರ ಇರುವ ಚೇತನಾ ಹೋಮಿಯೋ ಕ್ಲಿನಿಕ್ ವತಿಯಿಂದ ನ.10ರಂದು ಉಚಿತ ಹೋಮಿಯೋಪತಿಕ್ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಡಾ.ಶರಣೇಂದ್ರ ಬಿ. ಪಾಗಾ ಅವರು ಚಿಕಿತ್ಸೆ ನೀಡಲಿದ್ದಾರೆ. ಕೂದಲು ಉದುರುವುದು, ಅಲರ್ಜಿ ತೊಂದರೆಗಳು, ತಲೆನೋವು, ಜೀರ್ಣಾಂಗದ ರೋಗಗಳು, ಚರ್ಮದ ರೋಗಗಳು, ಎಲುಬು ಮತ್ತು ಕೀಲು ರೋಗಗಳು, ಮೂತ್ರ ಪಿಂಡದ ಹರಳು, ಪ್ರೋಸ್ಟೆಟ್ ತೊಂದರೆ, ಉರಿಮೂತ್ರ, ಹೆಣ್ಣುಮಕ್ಕಳ ತೊಂದರೆಗಳು, ಮಕ್ಕಳ ತೊಂದರೆಗಳಿಗೆ ಚಿಕಿತ್ಸೆ ನೀಡಲಾಗುವುದು. ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆವರೆಗೆ ನಡೆಯುವ ಈ ಉಚಿತ ಶಿಬಿರದ ಲಾಭ ಪಡೆಯುವಂತೆ ಕೋರಲಾಗಿದೆ. ಮಾಹಿತಿಗಾಗಿ 9632232727ಗೆ ಸಂಪರ್ಕಿಸಬಹುದು.
ನಾಳೆ ಕಾರ್ಯಾಲಯ ಉದ್ಘಾಟನೆ
ಗುಲ್ಬರ್ಗ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾರ್ಯಾಲಯ ನ.10 ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಪಿ. ಲಂಡನಕರ್ ತಿಳಿಸಿದ್ದಾರೆ. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಪಲ್ಲವಿ ಆಕುರಾತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಡಗಾದ ಬಸವರಾಜೇಂದ್ರ ಶ್ರೀ ಸಾನ್ನಿಧ್ಯ ವಹಿಸುವರು. ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ್ ನಾಟಿಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 12ಕ್ಕೆ ಎಚ್ಕೆಸಿಸಿಐ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಭೀಮಸೇನೆ ಘಟಕದ ಪದಾಧಿಕಾರಿಗಳು
ಗುಲ್ಬರ್ಗ/ಶಹಾಬಾದ್:  ಭೀಮಸೇನೆ ಸಂಘಟನೆ  ಹೋಬಳಿ ಘಟಕದ ಅಧ್ಯಕ್ಷ ಸತೀಶ ಕಂಬಾನೂರ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಎಸ್.ಬೆಳ್ಳಿಕರ್ ನೇತೃತ್ವದಲ್ಲಿ ಭೀಮಸೇನೆ ಮರತೂರ ಗ್ರಾಮದ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರಾಗಿ ಅನಿಲಕುಮಾರ್ ಬೆಣ್ಣೂರಕರ್, ಉಪಾಧ್ಯಕ್ಷ ರವಿ ಸಿಂಧೆ, ಜಗನ್ನಾಥ ಕಾಳನೂರ, ರವಿಚಂದ್ರ ದಮೂನ್, ಅನಿಲಕುಮಾರ್ ಸಿಂಧೆ, ಪ್ರಧಾನ ಕಾರ್ಯದರ್ಶಿ ಆನಂದ ಸತ್ಪಾಲ್, ಸಂಘಟನಾ ಕಾರ್ಯದರ್ಶಿ ಸಂಜೀವಕುಮಾರ್ ಸಾಗರ, ಪ್ರದೀಪ ಸಿಂಧೆ, ನಾಗೇಶ ಇಂಗಿನಕಲ್, ಅಂಬರೀಶ್ ಕ್ಯಾರ್, ಖಜಾಂಚಿ ಕಿರಣಕುಮಾರ್ ಮೋರೆ, ಸಹ ಖಜಾಂಚಿ ಮಹೇಶ ಕಟ್ಟಿಮನಿ ನೇಮಕಗೊಂಡಿದ್ದಾರೆ.
ಕಾರ್ರ್ಯಕಾರಿ ಸಮಿತಿ ಸದಸ್ಯರಾಗಿ ಅವಿನಾಶ ಕಾಂಬಳೆ, ಅಕ್ಷಯಕುಮಾರ್ ರೋಜಾ, ಅಭಿಷೇಕ ಕಾಳನೂರ, ದೇವಾ ಸುಣಗಾರ, ಹುಣಚಪ್ಪ ದೇಗಲಮಡಿ, ಅನಿಲಕುಮಾರ್ ಕ್ಯಾರ್, ಬಾಬಾ ಮಹ್ಮದ್ ಹುಸೇನ್, ಶರಣಪ್ಪ ಸುಣಗಾರ, ಯಲ್ಲಪ್ಪ ಸಾಲಿ, ಸಲಹೆಗಾರರಾಗಿ ಶಂಕರ ಮೋರೆ ಆಯ್ಕೆಯಾಗಿದ್ದಾರೆ.
ಗಡಿಕೇಶ್ವಾರಕ್ಕೆ ಮುಖ್ಯಗುರು ವರ್ಗಾವಣೆ: ಬಿಇಒ
ಚಿಂಚೋಳಿ: ತಾಲೂಕಿನ ಯಾಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳನ್ನು ಗ್ರಾಮಸ್ಥರ ದೂರಿನ ಮೇರೆಗೆ ಗಡಿಕೇಶ್ವಾರ ಗ್ರಾಮಕ್ಕೆ ನಿಯೋಜನೆಗೊಳಿಸಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾವ ನಾಟೀಕಾರ ತಿಳಿಸಿದ್ದಾರೆ. ತಾಲೂಕಿನ ಯಾಕಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಗುರುಗಳಾದ ನಾಗಣ್ಣ ಬೂದಿಹಾಳ ಇವರ ಬಗ್ಗೆ ನ.5 ರಂದು ನಡೆದ ಜನಸ್ಪಂದನಾ ಸಭೆಯಲ್ಲಿ ಅಲ್ಲಿನ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅವರನ್ನು ಗಡಿಕೇಶ್ವಾರ ಹೊಸ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆಗೊಳಿಸಿ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಸನ್ಮಾನ, ಕವಿಗೋಷ್ಠಿ
ಸುರಪುರ: ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಇಂದು ಶನಿವಾರ ಮಧ್ಯಾಹ್ನ 4ಕ್ಕೆ ಕನ್ನಡ ಸಾಹಿತ್ಯ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಮತ್ತು ವರ್ಷದ ವ್ಯಕ್ತಿ ಗೌರವ ಪುರಸ್ಕೃತರಿಗೆ ಸನ್ಮಾನ ನಂತರ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ತಾಲೂಕು ಅಧ್ಯಕ್ಷ ಶಾಂತಪ್ಪ ಬೂದಿಹಾಳ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಹಪುರದ ಸೂಗಯ್ಯ ಹಿರೇಮಠ, ಗುಲ್ಬರ್ಗದ ವಿಜಯ ಹಾಗರಗುಂಡಗಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಲಕ್ಷ್ಮೀಬಾಯಿ ರೇವಲ್, ಸಂಜೀವರಾವ ಕುಲಕರ್ಣಿ ಮತ್ತು ಕಸಾಪ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಆಯ್ಕೆಯಾದ ನಬಿಲಾಲ್ ಮಕನದಾರ್ ಸನ್ಮಾನಿತಗೊಳಲಿದ್ದಾರೆ. ನಂತರ ಜರಗುವ ಕವಿಗೋಷ್ಠಿಗೆ ಹಿರಿಯ ಸಾಹಿತಿ ಎ.ಕೃಷ್ಣ ಸುರಪುರ ಚಾಲನೆ ನೀಡುವರು. ಕೇಂದ್ರ ಸಾಹಿತ್ಯ ಆಕಾಡೆಮಿ ಯುವ ಪ್ರಶಸ್ತಿ ಪುರಸೃತರಾದ ರಾಯಚೂರಿನ ಆರೀಫ್ ರಾಜಾ ಅಧ್ಯಕ್ಷತೆ ವಹಿಸುವರು. ಯುವ ಸಾಹಿತಿ ಶಿವುಕುಮಾರ ಅಮ್ಮಾಪುರ ಆಶಯ ನುಡಿಗೈಯುವರು.
ಕವಿಗಳಾದ ಶ್ರೀನಿವಾಸ ಜಾಲವಾದಿ, ವಿರೇಶ ಹಳ್ಳೂರು, ಬಸವರಾಜ ರುಮಾಲ್, ನಾಗಪ್ಪ ತ್ರಿವೇದಿ, ಕುತುಬುದ್ದೀನ್ ಅಮ್ಮಾಪುರ, ನಿಂಗನಗೌಡ ದೇಸಾಯಿ, ಕನಕಪ್ಪ ವಾಗಣಗೇರಿ, ಸುವರ್ಣ ಸುತಾರ, ಜ್ಯೋತಿ ಠಾಕೂರ್, ಶಿವಶರಣಪ್ಪ ಶಿರೂರು, ಗೋಪಾಲ ಯಾದವ ಭಾಗವಹಿಸಲಿದ್ದಾರೆಂದು ಕಸಾಪ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಪ್ರವಾಸ
ಯಾದಗಿರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರು ನ. 11ರಂದು ಗುಲ್ಬರ್ಗದಿಂದ ಮಧ್ಯಾಹ್ನ 12 ಗಂಟೆಗೆ ರಸ್ತೆ ಮೂಲಕ ಹೊರಟು ಮಧ್ಯಾಹ್ನ 1 ಗಂಟೆಗೆ ಯಾದಗಿರಿ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಯಾದಗಿರಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ  ನಡೆಸುವರು.
ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಯಾದಗರಿ: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಮಾಡುವ ಕುರಿತು 2012-13 ನೇ ಸಾಲಿನ ಆನ್‌ಲೈನ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು 2013-14ನೇ ಸಾಲಿಗಾಗಿ ನವೀಕರಣ ವಿದ್ಯಾರ್ಥಿಗಳಾಗಿದ್ದು, ಸದರಿ ನವೀಕರಣ ವಿದ್ಯಾರ್ಥಿಗಳ ಹಾಗೂ ಬೇರೆ ಶಾಲೆಯಿಂದ ವರ್ಗಾವಣೆಗೊಂಡು ದಾಖಲಾದ ವಿದ್ಯಾರ್ಥಿಗಳ ಮಾಹಿತಿಯ ಅರ್ಜಿ ಫಾರಂಗಳನ್ನು ತಾಲೂಕ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಯಾಧಗಿರಿಯಿಂದ ಪಡೆದು ಸಲ್ಲಿಸಲು ಯಾದಗಿರಿ ತಲೂಕಿನ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಕೋರಲಾಗಿದೆ. 2012-13ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಈ ವರ್ಷ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಾರದು. ವಿದ್ಯಾರ್ಥಿಯು 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವಾಗ ಒಮ್ಮೆ ಮಾತ್ರ ಅರ್ಜಿ ಸಲ್ಲಿಸಬೇಕು. ಪ್ರತಿ ವರ್ಷ ಶಿಷ್ಯವೇತನವನ್ನು ಕಳೆದ ವರ್ಷದ ಅರ್ಜಿಯನ್ನು ಪರಿಗಣಿಸಿ ಮುಖ್ಯೋಪಾಧ್ಯರ ದೃಢೀಕರಣ ಪಡೆದು ಮಂಜೂರು ಮಾಡಲಾಗುತ್ತದೆ. 2012-13ನೇ ಸಾಲಿನಲ್ಲಿ ಅಜರ್ ಸಲ್ಲಿಸದೇ ಇರುವ ಮತ್ತು ಈ ವರ್ಷ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು. 2013-14 ನೇ ಸಾಲಿನ ಮೆಟ್ರಿಕ್ ಪೂರ್ವ ಶಿಷ್ಯವೇತನ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 10.11.2013 ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು ಸಂಪರ್ಕಿಸಬಹುದು.
ಜೆಸ್ಕಾಂಗೆ ಹಿನ್ನಡೆ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ ಆರು ಜಿಲ್ಲೆಗಳ ಗ್ರಾಮ ವಿದ್ಯುತ್ ಪ್ರತಿನಿಧಿಗಳು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಗುಲ್ಬರ್ಗದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ನಡೆಸುತ್ತಿರುವುದರಿಂದ ಜೆಸ್ಕಾಂಗೆ ಒಟ್ಟು ಸರಾಸರಿ ಒಂದು ಕೋಟಿ ರು. ಬಿಲ್ ವಸೂಲಾತಿಯಲ್ಲಿ ಹಿನ್ನಡೆಯಾಗಿದೆ. 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 54 ಉಪ ವಿಭಾಗಗಳಿದ್ದು,  ಗ್ರಾಮ ವಿದ್ಯುತ್ ಪ್ರತಿನಿಧಿಗಳು ಪ್ರತಿ ನಿತ್ಯ  2 ಲಕ್ಷ ರು. ಗ್ರಾಹಕರಿಂದ ವಿದ್ಯುತ್ ಬಿಲ್ ವಸೂಲಿ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ಅವರು ತಮ್ಮ ಕೆಲಸ ಸ್ಥಗಿತಗೊಳಿಸಿರುವುದರಿಂದ ಸುಮಾರು ಒಂದು ಕೋಟಿ ರು. ಹಿನ್ನಡೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.