ಕಬ್ಬಿಗೆ ಬೆಂಬೆಲೆ ನಿಗದಿ; ಪ್ರತಿಭಟನೆ
ಕ.ಪ್ರ. ವಾರ್ತೆ ಅಫಜಲ್ಪುರ ನ.11
ಪ್ರತಿ ಟನ್ ಕಬ್ಬಿಗೆ 2,500 ಬೆಂಬಲ ಬೆಲೆ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ರೈತರು ಅಫಜಲ್ಪುರದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರ ರೈತರ ಕಣ್ಣಿಗೆ ಬೆಣ್ಣೆ ಹಚ್ಚಿ ಸುಮ್ಮನಾಗುವ ಕೆಲಸ ಮಾಡಿದೆ. ಇದರಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲ. ಸರ್ಕಾರ ಘೋಷಣೆ ಮಾಡಿರುವ 2,500 ಕಬ್ಬಿನ ಬೆಲೆ ಕೂಡಲೆ ಕೈಬಿಟ್ಟು 3,100 ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ರಮೇಶ ಹೂಗಾರ ಆಗ್ರಹಿಸಿದರು.
ಕಳೆದ ವರ್ಷದ ಬಾಕಿ ಪಾವತಿಸಿಲ್ಲ: ಸರ್ಕಾರದ ಈ ಆದೇಶದಿಂದ ನಮಗೆ ತೃಪ್ತಿ ಇಲ್ಲ. ಕೂಡಲೇ ಅದನ್ನು ಕೈಬಿಟ್ಟು 3,100 ಬೆಲೆ ಘೋಷಣೆ ಮಾಡಬೇಕು. ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆಯವರು ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ವರ್ಷದ ಬಾಕಿ 200 ಇದುವರೆಗೂ ಪಾವತಿಸಿಲ್ಲ, ಅದನ್ನು ಶೀಘ್ರದಲ್ಲೇ ಪಾವತಿಸಬೇಕು. ಪಾವತಿಸುವವರೆಗೂ ಕಬ್ಬನ್ನು ನುರಿಸಬಾರದು. ಪಾವತಿ ಮಾಡುವ ಕುರಿತು ತಹಸೀಲ್ದಾರರಿಗೆ 5 ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. 3 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಾರ್ಖಾನೆಯನ್ನು ಬಂದ್ ಮಾಡಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ರೈತರ ಏಳಿಗೆಗೆ ಸಿದ್ಧ: ತಾಲೂಕಿನ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಮತ್ತು ರೈತರ ಏಳಿಗೆಗಾಗಿ ನಾವು ಸದಾ ಸಿದ್ಧರಾಗಿದ್ದು ಯಾವುದೇ ಸಂದರ್ಭದಲ್ಲಿಯೂ ರೈತರೊಂದಿಗೆ ಕೈಜೋಡಿಸುವುದಾಗಿ ಜಿಪಂ ಸದಸ್ಯ ಸಿದ್ದಾರ್ಥ ಬಸರಿಗಿಡ ಹೇಳಿದರು.
ಎಪಿಎಂಸಿಯವರು ಕಾರ್ಖಾನೆಗೆ ಹೋಗುವ ಮುಖ್ಯರಸ್ತೆಗೆ ತೂಕದ ಯಂತ್ರ ಅಳವಡಿಸಬೇಕೆಂಬ ಬೇಡಿಕೆಗೆ ಎಪಿಎಂಸಿ ಪ್ರಭಾರಿ ಮೇಲ್ವಿಚಾರಕರು, ಈಗಾಗಲೇ ಟೆಂಡರ್ ಕರೆದಿದ್ದೇವೆ ಯಾರೂ ಟೆಂಡರ್ ಹಾಕಿರಲಿಲ್ಲ. ಈ ಬಾರಿ ಮತ್ತೊಮ್ಮೆ ಕರೆಯುತ್ತೇವೆ ಆದಷ್ಟು ಬೇಗ ಸೂಕ್ತ ಸ್ಥಳ ನೋಡಿ ತೂಕದ ಯಂತ್ರ ಅಳವಡಿಸುತ್ತೇವೆ ಎಂದು ಭರವಸೆ ನೀಡಿದರು.
ತಾಲೂಕಾಡಳಿತದ ಕ್ರಮಕ್ಕೆ ಖಂಡನೆ: ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆಯವರ ಜೊತೆ ತಾಲೂಕು ಆಡಳಿತ ಕೈಜೋಡಿಸಿದಂತೆ ಕಾಣುತ್ತಿದೆ. ಕಾರ್ಖಾನೆಯಿಂದ ಕಲುಷಿತ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಅದೆಷ್ಟೋ ಹಾನಿಯಾಗುತ್ತಿರುವುದನ್ನು ಕಂಡರೂ ಕಾಣದಂತೆ ಇರುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿದರು.
ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ನ.15ರ ಒಳಗಾಗಿ ಕಾಲಮಿತಿ ನೀಡಿ ಕಾರ್ಖಾನೆಯ ಅಧಿಕಾರಿಗಳು ಮತ್ತು ರೈತ ಮುಖಂಡರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಧರೇಪ್ಪ ಹಾವಳಗಿ, ಘೋಷಯ್ಯ ಆಲಮೇಲ್, ಗಂಗಾಧರ ಕರಬಂಟನಾಳ, ನಾರಾಯಣರಾವ ಕುಲಕರ್ಣಿ, ಶಂಕರ ಸೋಬಾನೆ, ಚಂದಪ್ಪ ಕರ್ಜಗಿ, ಅಂಬರೀಷ ಮೇತ್ರಿ, ಶ್ರೀಮಂತ ಬಿರಾದಾರ, ರಾಜಕುಮಾರ್ ಬಡದಾಳ, ಮಲ್ಲು ಬಳೂರ್ಗಿ, ಸೋಮು ಶ್ರೀಗಿರಿ, ರಾವುತ್ ಸಿಂಗೆ, ಸಿದ್ದಣಗೌಡ ಪಾಟೀಲ್ ಸೇರಿದಂತೆ ಸುತ್ತಮುತ್ತ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

