ಕಾಲುವೆಗೆ ಹರಿಯದ ನೀರು, ರೈತರಲ್ಲಿ ಆತಂಕ
ಚಿಂಚೋಳಿ: ತಾಲೂಕಿನ ರೈತನ ಜೀವನಾಡಿಯಾಗಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಎಡದಂಡೆ ಮತ್ತು ಬಲದಂಡೆ ಮುಖ್ಯ ಕಾಲುವೆಗಳ ಪುನಶ್ಚೇತನ ಕಾಮಗಾರಿ ಹಲವು ದಿನಗಳಿಂದ ಕುಂಟುತ್ತ ಸಾಗುತ್ತಿದ್ದು, ಇದುವರೆಗೆ ಕಾಲುವೆಗೆ ನೀರು ಬಿಡದಿರುವುದರಿಂದ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ.
ತಾಲೂಕಿನ ಚಂದ್ರಂಪಳ್ಳಿ ನೀರಾವರಿ ಯೋಜನೆಯಿಂದ ನವೆಂಬರ್- 7ರಿಂದ ಮುಖ್ಯಕಾಲುವೆಗೆ ನೀರು ಬಿಡಲು ನೀರು ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸದ ಕಾರಣ ಬೆಳೆಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ.
2011-12ನೇ ಸಾಲಿನಲ್ಲಿ ಅನುದಾನ: ಚಂದ್ರಂಪಳ್ಳಿ ನೀರಾವರಿ ಯೋಜನೆ 1963ರಲ್ಲಿ ಪ್ರಾರಂಭಗೊಂಡಿದ್ದು, ಯೋಜನೆ ಪೂರ್ಣಗೊಂಡಿದ್ದು 1973 ರಲ್ಲಿ, ಯೋಜನೆ ಕಾರ್ಯಾರಂಭಿಸಿದ್ದು 1975 ರಲ್ಲಿ, ಹಲವು ವರ್ಷಗಳಿಂದ ಮುಖ್ಯಕಾಲುವೆಗಳ ಮತ್ತು ಉಪ-ಕಾಲುವೆಗಳ ನೀರು ಸೋರಿಕೆಯಿಂದಾಗಿ ರೈತರು ತಮ್ಮ ಹೊಲಗಳಲ್ಲಿನ ಹಿಂಗಾರು ಜೋಳ ಕಡಲೇ ಮತ್ತು ಅರಿಶಿಣ ಬೆಳೆಗಳಿಗೆ ಸಮರ್ಪಕವಾಗಿ ನೀರು ಪಡೆದುಕೊಳ್ಳಲು ಆಗದಿರುವ ಕಾರಣ ಯೋಜನೆಯ ಎಡದಂಡೆ ಮತ್ತು ಬಲದಂಡೆ ಮುಖ್ಯಕಾಲುವೆಗಳ ಪುನಶ್ಚೇತನಗೊಳಿಸುವುದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ 2011-12ನೇ ಸಾಲಿನಲ್ಲಿ 14.93 ಕೋಟಿ ಮಂಜೂರಿಗೊಳಿಸಲಾಗಿದೆ.
ಆದರೆ, ಕಾಲುವೆಗಳ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಅಲ್ಲಲ್ಲಿ ಸಿಮೆಂಟ್ ಲೈನಿಂಗ್ ಕಾಮಗಾರಿ ಅಪೂರ್ಣಗೊಳಿಸಿ ನಿಲ್ಲಿಸಿದ್ದಾರೆ. ಸಿಮೆಂಟ್ ಲೈನಿಂಗ್ ಕಾಮಗಾರಿಗಳು ಪ್ರಾರಂಭಗೊಳಿಸಿ 2 ವರ್ಷ ಗತಿಸಿದರು ಕೂಡ ಕಾಮಗಾರಿ ಕುಂಟುತ್ತ ಸಾಗಿದೆ.
ಅಪಾರ ಬೆಳೆ ನಷ್ಟ: ಯೋಜನೆ ಕಾಲುವೆಗಳ ಪ್ರಗತಿಯ ಬಗ್ಗೆ ಯಾವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಮುಖ್ಯಕಾಲುವೆಗಳಿಗೆ ಆಧುನಿಕರಣ ನೆಪದಲ್ಲಿ ಕಾಲುವೆಗಳಿಗೆ ನೀರು ಹರಿಸದಿರುವುದರಿಂದ ರೈತರು ಬೆಳೆಗಳನ್ನು ಹಾಳು ಮಾಡಿಕೊಂಡು ಅಪಾರ ಬೆಳೆ ನಷ್ಟವನ್ನು ಅನುಭವಿಸಬೇಕಾಗಿದೆ.
ಚಂದ್ರಂಪಳ್ಳಿ ನೀರಾವರಿ ಯೋಜನೆ ಒಟ್ಟು 5223 ಹೆಕ್ಟರ್ ಜಮೀನು ಹೊಂದಿದ್ದು, (12. 900 ಎಕರೆ) ಬಲದಂಡೆ ಕಾಲುವೆ 14 ಕಿ.ಮೀ. ಎಡದಂಡೆ 21 ಕಿ.ಮೀ. ಉದ್ದವಿದೆ. ಯೋಜನೆಯ ಕಾಮಗಾರಿ ಒಟ್ಟು 7 ಪ್ಯಾಕೇಜ್ನಲ್ಲಿ ಸಿಮೆಂಟ್ ಲೈನಿಂಗ್ ಕಾಮಗಾರಿಗಳು ನಡೆದಿದ್ದು, ಇದೀಗ ಕಾಮಗಾರಿಗಳು ಸ್ಥಗಿತಗೊಂಡಿವೆ.
ನೀರಾವರಿ ಕ್ಷೇತ್ರ: ರೈತರು ತಮ್ಮ ಹೊಲಗಳಿಗೆ ಪ್ರಸಕ್ತ ಸಾಲಿನ ಹಿಂಗಾರು ಬೆಳೆಗಳಿಗೂ ನೀರು ಬರುವುದಿಲ್ಲವೆಂಬ ಆತಂಕ ಮನೆ ಮಾಡಿದೆ. ಯೋಜನೆಯ ವ್ಯಾಪ್ತಿಯಲ್ಲಿ ಬರುವ ಚಂದ್ರಂಪಳ್ಳಿ- 224.70 ಹೆಕ್ಟರ್, ಐನೋಳಿ- 1246. 85 ಹೆಕ್ಟರ್, ದೇಗಲಮಡಿ- 609 ಹೆಕ್ಟರ್, ಚಿಂಚೋಳಿ- 1409.31 ಹೆಕ್ಟರ್, ಪಟಪಳ್ಳಿ 371.32 ಹೆಕ್ಟರ್, ಕೊಳ್ಳೂರ್- 346.97 ಹೆಕ್ಟರ್, ಫತ್ತೇಪುರ- 157.12 ಹೆಕ್ಟರ್, ಪೋಲಕಪಳ್ಳಿ, ಕಲಭಾವಿ- 122.46 ಹೆಕ್ಟರ್, ಚಂದಾಪುರ- 247 ಹೆಕ್ಟರ್, ಚಿಕ್ಕನಿಂಗದಳ್ಳಿ- 34.51 ಹೆಕ್ಟರ್, ಪೋಲಕಪಳ್ಳಿ- 362.34 ಹೆಕ್ಟರ್ ನೀರಾವರಿ ಕ್ಷೇತ್ರ ಹೊಂದಿದೆ.
ನೂತನ ಶಾಸಕ ಡಾ. ಉಮೇಶ ಜಾಧವ ಅವರಿಗೆ ನೀರು ಬಳಕೆದಾರರ ಸಂಘದಿಂದ ಮನವಿ ಪತ್ರ ಸಲ್ಲಿಸಿದರು ರೈತರ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸಿಲ್ಲವೆಂದು ರೈತರಲ್ಲಿ ನಿರಾಶೆ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

