ಗುಲ್ಬರ್ಗಾ

28 ರಂದು ಉಚಿತ ಉಪನಯನ

Published On :

ಹುಣಸಗಿ: ಪಟ್ಟಣದಲ್ಲಿ ನ. 28, ಗುರುವಾರದಂದು ಪಟ್ಟಣದ ನಿವಾಸಿಯಾಗಿರುವ ಮೌನೇಶ ಶಂಕ್ರೆಪ್ಪ ಬಡಿಗೇರ ಹುಣಸಗಿ, ಇವರು ಪಟ್ಟಣದ ಕೆಂಭಾವಿ ಕ್ರಾಸನ ಹತ್ತಿರವಿರುವ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆಸಕ್ತರು ದೂ. 9964100356 ಸಂಪರ್ಕಿಸಲು ಕೋರಿದ್ದಾರೆ.
27ರಂದು ಟಿಪ್ಪು ಸುಲ್ತಾನ್ ಜಯಂತಿ
ಶಹಾಪುರ: ನ. 27ರಂದು ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಟಿಪ್ಪುಸುಲ್ತಾನರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ತಾಲೂಕು ಅಧ್ಯಕ್ಷ ಅಲ್ಲಾಪಟೇಲ ಪೊಲೀಸ್ ಪಟೇಲ ತಿಳಿಸಿದ್ದಾರೆ. ಅಂದು ಟಿಪ್ಪು ಸುಲ್ತಾನ್‌ಸಾಧನೆಗಳು ನಾಡಿಗಾಗಿ ಸಲ್ಲಿಸಿದ ಸೇವೆ ಬಗ್ಗೆ ಸ್ಮರಣೆ ಮಾಡಲಾಗುತ್ತದೆ. ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ,ಮೆರವಣಿಗೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ತಾಲೂಕಾ ಅಧ್ಯಕ್ಷ ತಿಳಿಸಿದ್ದಾರೆ.
ಸೈಬರ್ ಅಪರಾಧ: ನಾಳೆಯಿಂದ ತರಬೇತಿ
ಗುಲ್ಬರ್ಗ:  ಗುಲ್ಬರ್ಗದ ನಾಗನಹಳ್ಳಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಗುಲ್ಬರ್ಗ ವಲಯದ ಪೊಲೀಸ್ ಅಧಿಕಾರಿ- ಸಿಬ್ಬಂದಿಗೆ ಇಂದಿನ ಆಧುನಿಕ ತಾಂತ್ರಿಕ ಪರಿಸರದಲ್ಲಿ ಆಗುತ್ತಿರುವ ಪ್ರಚಲಿತ ಸೈಬರ್ ಅಪರಾಧದ ಬಗ್ಗೆ ತಿಳಿವಳಿಕೆ ಹಾಗೂ ಅಪರಾಧ ಪತ್ತೆ ಕಾರ್ಯದ ಬಗ್ಗೆ ನ.26ರಿಂದ 28ರವರೆಗೆ ತರಬೇತಿ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆ 26ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಡಾ.ಅನಂತ ಚಿಂಚೋರೆ ಮತ್ತು ಪ್ರವೀಣ ನಾಯಕ ಆಗಮಿಸುವರು. ಗುಲ್ಬರ್ಗ ಪೊಲೀಸ್ ತರಬೇತಿ ಕಾಲೇಜಿನ ಪ್ರಾಂಶುಪಾಲ ಎಚ್.ಆರ್. ಭಗವಾನ ದಾಸ ಅಧ್ಯಕ್ಷತೆ ವಹಿಸುವರು.
27ರಂದು ಜಾನಪದ ಸಂಗೀತ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ನ.27ರಂದು ಸಂಜೆ 6.30 ಗಂಟೆಗೆ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಜಾನಪದ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ರಾವುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಚಂದ್ರಕಾಂತ ಗುಂದಗುಲ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಸದಸ್ಯೆ ಮಲಿಯಾ ಸುಲ್ತಾನಾ ಬೇಗಂ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯ ಸೂರ್ಯಕಾಂತ ಕಟ್ಟಿಮನಿ, ಮುಖಂಡರಾದ ಶ್ರೀನಿವಾಸ ಸಗರ ಆಗಮಿಸುವರು. ಎಸ್‌ಎಸ್‌ಎಸ್‌ಎ ಆಡಳಿತ ಅಧಿಕಾರಿ ಗುಂಡಣ್ಣ ಬಾಳಿ, ಪಿಡಿಒ ರಾವುರ ನಾಗೇಂದ್ರಪ್ಪ ಜಮಾದಾರ, ಎಸ್‌ಎಸ್‌ಎ ಕಾರ್ಯದರ್ಶಿ ಅಮೃತಪ್ಪ ಜ್ಯೋತಿ, ಸದಸ್ಯ ಅಣವೀರಪ್ಪ ಮಾಸ್ತರ್ ಅತಿಥಿಗಳಾಗಿ ಆಗಮಿಸುವರು.

ವಿದ್ಯಾರ್ಥಿಯ ಉಜ್ವಲ ಭವಿಷ್ಯ ಶಿಕ್ಷಕನ ಕೈಲಿದೆ: ಶಾಸಕ ಡಾ.ಅಜಯಸಿಂಗ್
ಜೇವರ್ಗಿ: ತಳಪಾಯ ಭದ್ರವಾದಲ್ಲಿ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಅದರಂತೆ ಪ್ರಾಥಮಿಕ ಹಂತದ ಶಿಕ್ಷಣ ತಳಪಾಯದ ಭದ್ರ ಬುನಾದಿಯಂತೆ ಆಗಿದ್ದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಶೈಕ್ಷಣಿಕ ಸಮ್ಮೇಳನ, ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಾವು ಕೂಡ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಬೇಕಾಗಿದೆ.  ಮುಂಬರುವ 10ನೇ ತರಗತಿಯ ಫಲಿತಾಂಶದಲ್ಲಿ ಗಣನೀಯ ಸಾಧನೆ ಮಾಡುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.  ಶಿಕ್ಷಕರ ಕೊರತೆ ನೀಗಿಸುವಲ್ಲಿ ತಾವು ಅವಿರತ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದ ಅವರು, ನನ್ನ ತಂದೆ ಧರ್ಮಸಿಂಗ್ ಅವರನ್ನು ಸಚಿವ ಸ್ಥಾನದಿಂದ ಹಿಡಿದು ಮುಖ್ಯಮಂತ್ರಿ ಪಟ್ಟಕ್ಕೆ ತಂದ ಕ್ಷೇತ್ರದ ಜನತೆಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಕ್ಷೇತ್ರದ ಜನತೆಯೂ ತಮಗು ತಮ್ಮ ತಂದೆಯವರಿಗೆ ನೀಡಿದ ಆಶೀರ್ವಾದದಿಂದ ಜೇವರ್ಗಿಯಲ್ಲಿ ಧರ್ಮಸಿಂಗ್ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.