ಸುದ್ದಿ ಸಂಕ್ಷೇಪ
ಜಿಲ್ಲಾಮಟ್ಟದ ಜಾಗೃತ, ಉಸ್ತುವಾರಿ ಸಭೆ
ಗುಲ್ಬರ್ಗ: ಜಿಲ್ಲಾಮಟ್ಟದ ಜಾಗೃತ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಂಬಂಧಿಸಿದ ಸಮಿತಿ ಹಾಗೂ ಉಸ್ತುವಾರಿ ಸಮಿತಿಯ ತ್ರೈಮಾಸಿಕ ಸಭೆಯು ಡಿ.2ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಲಿದೆ. ಕೇಂದ್ರ ರೇಲ್ವೆ ಖಾತೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಸಭೆ ಅಧ್ಯಕ್ಷತೆ ವಹಿಸುವರು. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಸಭೆ ಅಂದು ಜರುಗಲಿದೆ. ಸಭೆಯಲ್ಲಿ ಬಿಆರ್ಜಿಎಫ್., ಎಂಎಸ್ಡಿಪಿ., ರೇಲ್ವೆ, ಸರ್ಕಾರದ ಕಾರ್ಯಕ್ರಮಗಳನ್ನು ಬ್ಯಾಂಕುಗಳು ನಿರ್ವಹಿಸುತ್ತಿರುವ ಬಗ್ಗೆ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಕುಡಿಯುವ ನೀರು ಯೋಜನೆ, ಸರ್ವಶಿಕ್ಷಣ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಸ್ವರ್ಣಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಂಸದರ ಅಭಿವೃದ್ಧಿ ಅನುದಾನದ ಕಾಮಗಾರಿಗಳು, ಇಂದಿರಾ ಆವಾಸ ಯೋಜನೆ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ, ಡಿಪಿಎಪಿ ಮತ್ತು ಸಮಗ್ರ ಬಂಜರು ಭೂಮಿ ಯೋಜನೆ, ಸಂಪೂರ್ಣ ನೈರ್ಮಲ್ಯ ಆಂದೋಲನ, ಪೈಕಾ ಯೋಜನೆ, ಕೈಗಾರಿಕಾ ಇಲಾಖೆ ಅಲ್ಲದೆ ಇತರೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಗುವುದು.
ಜನಸ್ಪಂದನ ಸಭೆ ವಿವರ
ಗುಲ್ಬರ್ಗ: ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಗ್ರಾಮಗಳನ್ನು ಆಯ್ಕೆ ಮಾಡಿ ಜನಸ್ಪಂದನ ಸಭೆಗಳನ್ನು ನಡೆಸುವಂತೆ ನಿರ್ದೇಶನ ನೀಡಿದೆ. ಆಯಾ ತಾಲೂಕುಗಳಲ್ಲಿನ ದೊಡ್ಡ ಗ್ರಾಮಗಳಲ್ಲಿ ಜನಸ್ಪಂದನ ಸಭೆಗಳನ್ನು ಆಯಾ ತಾಲೂಕಿಗೆ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅದರಂತೆ ಗುಲರ್ಗ ಜಿಲ್ಲೆಯ ಆಯಾ ತಾಲೂಕಿನ ಹೋಬಳಿಯಲ್ಲಿ ಡಿ.7 ರಂದು ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು.
'ಸೇವಾದಳ ಸ್ಥಾಪಕ ಹರ್ಡೀಕರ್ ಉದ್ದೇಶ ಸಫಲವಾಗಲಿ'
ಆಳಂದ: ಶಿಸ್ತು, ಸಮಯಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ ಉದ್ದೇಶದಿಂದ ನಾಸು ಹರ್ಡೀಕರ್ ಅವರು ಸ್ಥಾಪಿಸಿದ ಭಾರತ ಸೇವಾದಳ ಉದ್ದೇಶವನ್ನು ಈಡೇರಿಸಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯ ವಿಕಾಸ ಸೌಧದಲ್ಲಿ ಭಾರತ ಸೇವಾದಳ ಏರ್ಪಡಿಸಿದ್ದ ಶಿಕ್ಷಕರ ಮಿಲಾಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸೇವಾದಳ ತನ್ನದೆ ಆದ ಇತಿಮಿತಿಯಲ್ಲಿ ಕಾರ್ಯನಿರ್ವಹಿಸಿದ್ದರೂ ರಾಷ್ಟ್ರೀಯ ವಿಷಯ, ಆರೋಗ್ಯ, ವೈಚಾರಿಕ, ಬದ್ಧತೆಯೊಂದಿಗೆ ದೊಡ್ಡ ಅರ್ಥದಿಂದ ಮುನ್ನೆಡೆಯುತ್ತಿದೆ. ಎಲ್ಲರಲ್ಲಿ ರಾಷ್ಟ್ರೀಯತೆ, ಪ್ರೇಮ ನಶಿಸುತ್ತಿದೆ, ದೇಶದ ಕಡೆ ಗಮನವಿಲ್ಲ. ಊರು, ಜನ, ತಂದೆ- ತಾಯಿ ಭಾವನಾತ್ಮಕತೆ ಕೊರಗುತ್ತಿರುವ ಹೊತ್ತಿನಲ್ಲಿ ವಿಶ್ವಭಾತ್ರುತ್ವದ ಚಿಂತನೆ ಅಗತ್ಯವಾಗಿದೆ ಎಂದರು.ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರ ಧ್ವಜಾರೋಹಣ ಏರಿಸುವಾಗ ಗೀತೆ ಆರಂಭವಾಗಿ ಮುಗಿಯುವ ತನಕವೂ ಆ ವ್ಯಕ್ತಿಯೂ ಧ್ವಜದ ದಾರ ಕಟ್ಟುವುದು ಮುಗಿದಿರುವುದಿಲ್ಲ. ಇದು ರಾಷ್ಟ್ರಧ್ವಜಕ್ಕೆ ಅವಮಾನಕರ ಸಂಗತಿಯಾಗಿದೆ. ರಾಷ್ಟ್ರಗೀತೆ ಆರಂಭದಲ್ಲೇ ಧ್ವಜದ ದಾರಕಟ್ಟುವುದು ಮುಗಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ತಂತ್ರಜ್ಞಾನ ಬಳಸಿ ಧ್ವಜಾರೋಹಣ ನೆರವೇರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಆಹಾರ ಧಾನ್ಯ ಮಾರಾಟಕ್ಕಿಳಿದ ಅಂಗನವಾಗಿ ಕಾರ್ಯಕರ್ತೆ!
ಜೇವರ್ಗಿ: ತಾಲೂಕಿನ ಅಣಜಗಿ ಗ್ರಾಮದ ಅಂಗನವಾಡಿ ಕೇಂದ್ರದ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕೇಂದ್ರದ ಆಹಾರ ಧಾನ್ಯ ಕಾಳ ಸಂತೆಯಲ್ಲಿ ಮಾರಾಟ ಮಾಡುವಾಗ ಗ್ರಾಮದ ಯುವಕ ಸಂಘದವರ ಕಣ್ಣಿಗೆ ಬಿದ್ದಿದ್ದಾರೆ. ಈ ಕುರಿತು ಇಲಾಖೆಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮನವಿ ಅರ್ಪಿಸುವ ವೇಳೆ ಯುವಕ ಸಂಘದ ಶ್ರೀಶೈಲ್ ಪಾಟೀಲ್, ರಾಜು ಪಾಟೀಲ್, ಶಿವಾನಂದ ಜಾಲವಾದಿ, ಸಿದ್ಧಲಿಂಗ ಪಾಟೀಲ್, ಸಿದ್ದು ಪಾಟೀಲ್, ರಮೇಶ ಪಾಟೀಲ್ ಮತ್ತಿತರರಿದ್ದರು.
ಸರ್ಕಾರಿ ಪ್ರೌಢಶಾಲೆಗೆ ಸಂಸ್ಕೃತಿ ಭವನ ಸೌಲಭ್ಯಕ್ಕೆ ಒತ್ತಾಯ
ಚಿತ್ತಾಪುರ: ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸ್ಕೃತಿ ಭವನ ನಿರ್ಮಾಣ ಮಾಡಬೇಕು. ಶಾಲೆ ಸುತ್ತಲಿನ ಗೋಡೆ ಎತ್ತರಿಸಬೇಕು. ಚರಂಡಿ ನೀರು ಆವರಣದಲ್ಲಿ ಬರದಂತೆ ಚರಂಡಿ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯದ ಮನವಿಯನ್ನು ಕ್ಷೇತ್ರಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಅವರು ಪುರಸಭೆ ಅಧ್ಯಕ್ಷರಿಗೆ ಸಲ್ಲಿಸಿದರು. ಮನವಿ ಸ್ವಿಕರಿಸಿದ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್ ಶಾಲೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು. ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಕ್ಷೇತ್ರ ಸಮನ್ವಯಾಧಿಕಾರಿ ಸಿದ್ದವೀರಯ್ಯ, ಲಿಂಗಣ್ಣ ಮಲ್ಕನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

